ಬೆಂಗಳೂರು, ಜು.3- ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳಿಗೆ ಕೆಲ ತಾಂತ್ರಿಕ ಸಮಸ್ಯೆಗಳು ಅಡಚಣೆಯುಂಟು ಮಾಡುತ್ತಿವೆ.ಮೊಬೈಲ್ ಆ್ಯಪ್‌ನಲ್ಲಿ ವಿದ್ಯುತ್ ಸಂಪರ್ಕದ ಆರ್‌ಆರ್ ಸಂಖ್ಯೆ ನಮೂದಿಸುತ್ತಿದ್ದಂತೆ ಮಾಲೀಕರ ಹೆಸರು ಹಾಗೂ ಗೃಹಜ್ಯೋತಿ ಯೋಜನೆಗಾಗಿ ಯಾರ ಹೆಸರು ಈ ಮೊದಲು ನೋಂದಣಿಯಾಗಿದೆ ಎಂಬ ವಿವರ ಯಾಂತ್ರೀಕೃತವಾಗಿ ಪ್ರದರ್ಶನಗೊಳ್ಳಬೇಕು. ಆದರೆ ಕೆಲವು ಫಲಾನುಭವಿಗಳ ಆರ್‌ಆರ್ ಸಂಖ್ಯೆಯ ವಿವರಗಳು ಯಾಂತ್ರೀಕೃತವಾಗಿ ಕಾಣಿಸಿಕೊಳ್ಳದೇ ಇರುವುದು ತಲೆನೋವಿಗೆ ಕಾರಣವಾಗಿದೆ.
ಇನ್ನೂ ಕೆಲವು ಕಡೆ ಮೊಬೈಲ್ ನೆಟ್‌ವರ್ಕ್‌ಗಳು ಸರಿಯಾಗಿಲ್ಲದೆ, ಸಮೀಕ್ಷೆ ಮಾಡಲಾಗುತ್ತಿಲ್ಲ ಎಂಬ ಆಕ್ಷೇಪಗಳಿವೆ. ಮತ್ತೊಂದೆಡೆ ಮೊಬೈಲ್ ಅಪ್ಲಿಕೇಷನ್ ಇದ್ದಕ್ಕಿದಂತೆ ತೊಂದರೆಗೊಳಗಾಗುತ್ತಿದ್ದು ಸಮೀಕ್ಷೆ ಕೊನೆಗೊಳ್ಳುತ್ತಿದೆ. ಮತ್ತೆ ಹೊಸದಾಗಿ ಎಲ್ಲಾ ವಿವರಗಳನ್ನು ನಮೂದಿಸಬೇಕಾಗುತ್ತಿದ್ದು ಸಮೀಕ್ಷಾದಾರರು ಪೇಚಾಡುತ್ತಿದ್ದಾರೆ.
ಗೃಹಜ್ಯೋತಿ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕಾಗಿ ಒಟ್ಟು 11 ಅಂಶಗಳನ್ನು ಪಡೆಯಲಾಗುತ್ತಿದೆ. ಅದರಲ್ಲಿ ಪಾನ್‌ಕಾರ್ಡ್, ಆಧಾರ್‌ಕಾರ್ಡ್, ಜಾತಿಯ ವಿವರಗಳು ಪ್ರಮುಖವಾಗಿವೆ. ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಅತ್ಯುತ್ಸಾಹದಲ್ಲಿ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಅನುಷ್ಠಾನದ ವೇಳೆಯಲ್ಲಿ ಸಾಕಷ್ಟು ಹಣಕಾಸಿನ ತೊಂದರೆಗಳು ಎದುರಾದವು.
ಆ ಸಂದರ್ಭದಲ್ಲಿ ಎಸ್‌ಇಪಿ-ಟಿಎಸ್‌ಪಿ ಹಣವನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಭಾರೀ ಟೀಕೆಗಳು ವ್ಯಕ್ತವಾದವು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಯಾವ ಆಧಾರದ ಮೇಲೆ ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ ಎಂಬ ಪ್ರಶ್ನೆಗಳು ಕೇಳಿ ಬಂದವು.
ರಾಜಕೀಯ ಟೀಕೆಗಳ ಹೊರತಾಗಿಯೂ ಸರ್ಕಾರ ಎಸ್‌ಇಪಿ-ಟಿಎಸ್‌ಪಿ ಬಳಕೆಯನ್ನು ಮುಂದುವರೆಸಿದೆ. ಭವಿಷ್ಯದಲ್ಲಿ ಇದರಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ಈಗ ಅಧಿಕೃತವಾಗಿ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಈ ಮೊದಲು ತನ್ನ ಸ್ವಂತ ರಾಜಕೀಯ ಲಾಭಕ್ಕಾಗಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ, 3 ವರ್ಷ ಯೋಜನೆಯನ್ನೂ ಅನುಷ್ಠಾನಗೊಳಿಸಿ ಈಗ ಮಾಹಿತಿ ಕಲೆ ಹಾಕುತ್ತಿರುವುದು ಪ್ರಶ್ನಾರ್ಹವಾಗಿದೆ.
ಪಾನ್‌ಕಾಡ್, ಆಧಾರ್ ಕಾರ್ಡ್ ನಂತಹ ಸೂಕ್ಷ್ಮ ದಾಖಲೆಗಳನ್ನು ಮೀಟರ್ ರೀಡರ್‌ಗಳು ಸಂಗ್ರಹಿಸುತ್ತಿದ್ದಾರೆ. ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ, ಆದರೆ ಜಾತಿಯನ್ನು ಹೇಳಲೇಬೇಕೆಂಬ ಒತ್ತಡಗಳು ಕೇಳಿ ಬರುತ್ತಿವೆ. ಇದರಿಂದ ಕೆಲವು ಕಡೆ ಗೊಂದಲಗಳಾಗಿವೆ.
ಸರ್ಕಾರ ಮುಂದಿನ ದಿನಗಳಲ್ಲೂ ಎಸ್‌ಇಪಿ-ಟಿಎಸ್‌ಪಿ ಅನುದಾನ ಬಳಕೆಗಾಗಿ ಜಾತಿವಾರು ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂಬ ಆರೋಪಗಳಿವೆ. ಸರ್ಕಾರಿ ನೌಕರರು, ತೆರಿಗೆ ಪಾವತಿದಾರರಿಗೆ ಮುಂದಿನ ದಿನಗಳಲ್ಲಿ ಯೋಜನೆ ನಿಂತು ಹೋಗುವ ಸಾಧ್ಯತೆ ಇದೆ ಎಂಬ ಚರ್ಚೆಗಳಿವೆ.
ಸ್ಥಳೀಯವಾಗಿ ಸಮೀಕ್ಷೆ ನಡೆಸಲು ತಾಂತ್ರಿಕ ಸಮಸ್ಯೆಗಳು ಒಂದೆಡೆಯಾದರೆ, ಸಾರ್ವಜನಿಕರ ಲಭ್ಯತೆ, ಮಾಹಿತಿ ನೀಡಲು ತಕರಾರು ಸೇರಿದಂತೆ ಮತ್ತಷ್ಟು ಸಮಸ್ಯೆಗಳು ಎಸ್ಕಾಂಗಳ ಸಿಬ್ಬಂದಿಗಳನ್ನು ಹೈರಾಣಾಗಿಸಿವೆ.
