ಬೆಂಗಳೂರು, ಜು.4- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಜುಲೈ 10ರಂದು ನಡೆಯುವ ಸಾಧ್ಯತೆಯಿದ್ದು, ಇದಕ್ಕಾಗಿ ತೀವ್ರ ಲಾಬಿ ಹಾಗೂ ಇತರ ಪ್ರಕ್ರಿಯೆಗಳು ಚುರುಕುಗೊಂಡಿವೆ.
ಜುಲೈ 14ರಿಂದ ಆಷಾಢ ಆರಂಭವಾಗಲಿದ್ದು, ಆಗಸ್ಟ್ 12ರ ವರೆಗೂ ಮುಂದುವರಿಯಲಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಂಗವಾಗಿ ಬಿಎಲ್‌ಓ ಮತ್ತು ಬಿಎಲ್‌ಎಗಳು ಈ ತಿಂಗಳ ಅಂತ್ಯದವರೆಗೂ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಅದಕ್ಕಾಗಿ ಎಲ್ಲಾ ಸಚಿವರು, ಶಾಸಕರು ತಮ ಕ್ಷೇತ್ರಗಳಲ್ಲೇ ಇರಬೇಕು ಎಂದು ಸೂಚನೆ ನೀಡಲಾಗಿದೆ. ಎಸ್‌ಐಆರ್ ಕಾರಣಕ್ಕಾಗಿ ವಿಧಾನಮಂಡಲದ ಅಧಿವೇಶನವನ್ನು ಮುಂದೂಡಲಾಗಿದೆ.
ಚುನಾವಣಾ ಆಯೋಗ ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಿದೆ. ಅನಂತರ ಮಳೆಗಾಲದ ವಿಧಾನಮಂಡಲ ಅಧಿವೇಶನ ಸಮಾವೇಶಗೊಳ್ಳುವ ಸಾಧ್ಯತೆ ಇದೆ.
ಅಧಿವೇಶನಕ್ಕೂ ಮುನ್ನವೇ ಪರಿಪೂರ್ಣ ಸಂಪುಟ ರಚನೆಯಾಗಬೇಕಿದೆ. ಆಗಸ್ಟ್ 15ಕ್ಕೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಬೇಕಿದೆ. ಅದಕ್ಕೂ ಮುನ್ನವೇ ಸಂಪುಟ ಪುನರ್ ರಚನೆಯಾಗುವಅನಿವಾರ್ಯತೆ ಇದೆ.
ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುಳಿವು ದೊರೆಯುತ್ತಿದ್ದಂತೆ ಆಕಾಂಕ್ಷಿಗಳು ಲಾಬಿ ತೀವ್ರಗೊಳಿಸಿದ್ದಾರೆ. ನಿನ್ನೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಪಿ.ಎಂ. ಅಶೋಕ್, ಎ.ಎಸ್. ಪೊನ್ನಣ್ಣ, ಕೆ.ಎನ್.ರಾಜಣ್ಣ, ಎಂ.ಆರ್. ಸೀತಾರಾಮ್ ಮತ್ತಿತರರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ.
ಇತ್ತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಒಂದೆಡೆ ಮುಖಂಡರು ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಆಕಾಂಕ್ಷಿಗಳು ಹಿರಿಯ ನಾಯಕರ ಬೆನ್ನಿಗೆ ಬಿದ್ದು ಅವಕಾಶಕ್ಕಾಗಿ ಒತ್ತಡ ಹೇರುತ್ತಿದ್ದಾರೆ.
ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಜುಲೈ 6ರಂದು ಐರ್ಲ್ಯಾಂಡ್ ಪ್ರವಾಸದಿಂದ ಮರಳುವ ಸಾಧ್ಯತೆ ಇದೆ. ಜುಲೈ 7 ಅಥವಾ 8ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ದೆಹಲಿಗೆ ತೆರಳುವ ಸಾಧ್ಯತೆಯಿದ್ದು, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಹೈಕಮಾಂಡ್ ಸಮತಿ ನೀಡಿದರೆ ಜುಲೈ 12ರ ರೊಳಗೆ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ಜುಲೈ 10 ರಂದು ಶುಕ್ರವಾರ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.
