Homeರಾಜ್ಯSIR ಗೊಂದಲ : ವೀಕ್ಷಕರನ್ನಾಗಿ ಹೊರ ರಾಜ್ಯದ ಅಧಿಕಾರಿಗಳ ನೇಮಕಕ್ಕೆ ಮುಂದಾದ ಆಯೋಗ

SIR ಗೊಂದಲ : ವೀಕ್ಷಕರನ್ನಾಗಿ ಹೊರ ರಾಜ್ಯದ ಅಧಿಕಾರಿಗಳ ನೇಮಕಕ್ಕೆ ಮುಂದಾದ ಆಯೋಗ

SIR confusion : Commission moves to appoint officers from outside the state as observers

ಬೆಂಗಳೂರು,ಜು.4- ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ಸಾಕಷ್ಟು ಗೊಂದಲ ಸೃಷ್ಟಿಸಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌‍ಐಆರ್‌)ಯಲ್ಲಿ ಸಾಕಷ್ಟು ಲೋಪ ದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಭಾರತೀಯ ಚುನಾವಣಾ ಆಯೋಗ( ಇಸಿಐ) ಹೊರ ರಾಜ್ಯದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲು ಗಂಭೀರ ಚಿಂತನೆ ನಡೆಸಿದೆ.

ವಿಶೇಷ ವೀಕ್ಷಕರು( (ಮೈಕ್ರೋ ಅಬ್ಸರ್ವರ್‌) ಉಸ್ತುವಾರಿಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಎಸ್‌‍ಐಆರ್‌ ನಡೆಸಬೇಕಾಗುತ್ತದೆ. ಯಾವುದೇ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವುದು ಇಲ್ಲವೇ ಹೊಸದಾಗಿ ಸೇರ್ಪಡೆ ಮಾಡಬೇಕಾದರೆ ಬಿಎಲ್‌ಒಗಳು ಕಡ್ಡಾಯವಾಗಿ ವೀಕ್ಷಕರ ಅನುಮತಿ ಪಡೆಯಬೇಕು. ಅಲ್ಲದೆ ಅಧಿಕಾರಿಗಳು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಗಣತಿ ನಮೂನೆಯನ್ನು ನೀಡಬೇಕು. ಜೊತೆಗೆ ಆಯೋಗ ನಿಗದಿಪಡಿಸಿದ ಸ್ಥಳದಲ್ಲಿಯೇ ಎಸ್‌‍ಐಆರ್‌ ಪ್ರಕ್ರಿಯೆಯನ್ನು ನಡೆಸಬೇಕು.

ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಯೋಗವು ಕಠಿಣ ಕ್ರಮಗಳಿಗೆ ಮುಂದಾಗಿದೆ.ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ ಇನ್ನು ಮುಂದೆ ಎಸ್‌‍ ಐಆರ್‌ ಪ್ರಕಿಯೆಯನ್ನು ವೀಕ್ಷಕರ ಸಮುಖದಲ್ಲಿ ನಡೆಸಲು ಮುಂದಾಗಿದೆ ಎಂದು ಗೊತ್ತಾಗಿದೆ.

ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರು ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಮತದಾರರ ಪಟ್ಟಿಯ ಪವಿತ್ರತೆಯನ್ನು ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಮತ್ತು ಇದು ಪಕ್ಷಪಾತದ ನಡೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ದೂರುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗವು, ಪಶ್ಚಿಮ ಬಂಗಾಳದ ಮಾದರಿಯಲ್ಲೇ ಕರ್ನಾಟಕಕ್ಕೂ ವಿಶೇಷ ವೀಕ್ಷಕರನ್ನು ನೇಮಕ ಮಾಡಲು ಚಿಂತನೆ ನಡೆಸಿದೆ.

ಹೊರ ರಾಜ್ಯದ ವೀಕ್ಷಕರನ್ನು ನೇಮಕ ಮಾಡುವ ಮೂಲಕ ಚುನಾವಣೆ ಅಥವಾ ಪರಿಷ್ಕರಣಾ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸುವ ಕ್ರಮವನ್ನು ಸುಪ್ರೀಂಕೋರ್ಟ್‌ ಈಗಾಗಲೇ ಎತ್ತಿಹಿಡಿದಿದೆ. ಇದೇ ಅಸ್ತ್ರವನ್ನು ಈಗ ಕರ್ನಾಟಕದಲ್ಲಿ ಬಳಸಲು ಆಯೋಗ ಮುಂದಾಗಿದೆ.

ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಎಸ್‌‍ ಐಆರ್‌ ನಡೆಸುವ ವೇಳೆ ಸಾಕಷ್ಟು ಲೋಪ ದೋಷಗಳು ಕಂಡುಬಂದಿದ್ದವು. ಕೊನೆಗೆ ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಮನವಿ ಮೇರೆಗೆ ಭಾರತೀಯ ಚುನಾವಣಾ ಆಯೋಗ ಎಸ್‌‍ಐಆರ್‌ ಪ್ರಕ್ರಿಯೆ ನಡೆಸಲು ಹೊರ ರಾಜ್ಯದ ಹಿರಿಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದರು. ಅಂತಿಮವಾಗಿ ಛತ್ತೀಸ್‌‍ಘಡ ಮತ್ತು ಒರಿಸ್ಸಾದ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಪಶ್ಚಿಮ ಬಂಗಾಳದಂತೆ ಎಸ್‌‍ ಐಆರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿತ್ತು.

ಆಯೋಗದ ಕ್ರಮವನ್ನು ಪ್ರಶ್ನಿಸಿ ಆಡಳಿತರೂಢ ತೃಣಮೂಲ ಕಾಂಗ್ರೆಸ್‌‍ (ಟಿಎಂಸಿ) ಕೊಲ್ಕತ್ತಾ ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿತ್ತು. ವಾದ- ಪ್ರತಿವಾದ ನಡೆಸಿದ ನಂತರ ಆಯೋಗದ ಕ್ರಮವನ್ನು ಅಲ್ಲಿನ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಕೊನೆಗೆ ಸುಪ್ರೀಂಕೋರ್ಟ್‌ ಕದತಟ್ಟಿದ್ದ ಟಿಎಂಸಿಗೆ ಅಲ್ಲಿಯೂ ಹಿನ್ನಡೆಯಾಗಿತ್ತು.

ಎಸ್‌‍ ಐಆರ್‌ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ನಿಜವಾದ ಮತದಾರರು ತಮ ಹಕ್ಕನ್ನು ಕಳೆದುಕೊಳ್ಳಬಾರದೆಂಬ ಹಿನ್ನೆಲೆಯಲ್ಲಿ ಆಯೋಗ ನಡೆಸುತ್ತಿರುವ ಈ ಪ್ರಕ್ರಿಯೆಗೆ ಹೊರ ರಾಜ್ಯದವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿಕೊಂಡರೆ ತಪ್ಪೇನಿಲ್ಲ ಎಂದು ಸರ್ವೋಚ್ಛಾ ನ್ಯಾಯಾಲಯ ಆಯೋಗದ ಕ್ರಮ ಸರಿಯಾಗಿದೆ ಎಂದು ಹೇಳಿತ್ತು. ಅಂತಿಮವಾಗಿ ಪಶ್ಚಿಮ ಬಂಗಾಳದಲ್ಲಿ ಎಸ್‌‍ಆರ್‌ ಪ್ರಕ್ರಿಯೆಯು ಟಿಎಂಸಿ ವಿರೋಧದ ನಡುವೆಯೂ ಹೊರ ರಾಜ್ಯದ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಡೆಸಲಾಗಿತ್ತು .

ಈಗ ಕರ್ನಾಟಕದಲ್ಲೂ ಎಸ್‌‍ಐಆರ್‌ ಪ್ರಕ್ರಿಯೆ ವೇಳೆ ಬೂತ್‌ ಮಟ್ಟದ ಅಧಿಕಾರಿ( ಬಿಎಲ್‌ಒ) ಗಳು ಸ್ಥಳೀಯ ನಾಯಕರ ಒತ್ತಡಕ್ಕೆ ಮಣಿದು ಮಸೀದಿ, ದರ್ಗಾ, ಕಲ್ಯಾಣ ಮಂಟಪ ಸೇರಿದಂತೆ ಮತ್ತಿತರ ಕಡೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರು ಸಾಕಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ ಆಯೋಗಕ್ಕೆ ಸಾಕ್ಷಿ ಸಮೇತ ದೂರು ನೀಡಿದ್ದಾರೆ.

ಹೊರ ರಾಜ್ಯದ ಅಧಿಕಾರಿಗಳ ನೇಮಕದಿಂದಾಗಿ ಸ್ಥಳೀಯ ಒತ್ತಡಗಳಿಗೆ ಮಣಿಯದೆ, ನಿಷ್ಪಕ್ಷಪಾತವಾಗಿ ಪರಿಷ್ಕರಣೆ ಕಾರ್ಯ ನಡೆಯಲು ಸಾಧ್ಯವಾಗುತ್ತದೆ. ಮತದಾರರ ಪಟ್ಟಿಯ ಮೇಲಿನ ಅನುಮಾನಗಳನ್ನು ದೂರಗೊಳಿಸಲು ಆಯೋಗದ ಈ ಕಟ್ಟುನಿಟ್ಟಿನ ಕ್ರಮ ಸಹಕಾರಿಯಾಗಲಿದೆ. ನಿಯಮ ಬಾಹಿರವಾಗಿ ಧಾರ್ಮಿಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಬಿಎಲ್‌ಒಗಳ ಮೇಲೆ ಕಠಿಣ ಶಿಸ್ತುಕ್ರಮ ಜರುಗಿಸುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ದಿನಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಸಂಪೂರ್ಣವಾಗಿ ಕೇಂದ್ರ ಚುನಾವಣಾ ಆಯೋಗದ ನೇರ ನಿಯಂತ್ರಣಕ್ಕೆ ಒಳಪಡುವ ಸಾಧ್ಯತೆಗಳು ಹೆಚ್ಚಾಗಿವೆ.

ಚುನಾವಣಾ ಪ್ರಕ್ರಿಯೆಯ ಮೇಲೆ ಜನಸಾಮಾನ್ಯರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಇರುವ ನಂಬಿಕೆಯನ್ನು ಹೆಚ್ಚಿಸುವುದು ಈ ಕ್ರಮದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಚುನಾವಣಾ ಆಯೋಗವು ಈ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದು, ಇದು ಇನ್ನೂ ಪೂರ್ಣ ಪ್ರಮಾಣದ ನೀತಿಯಾಗಿ ಜಾರಿಯಾಗಿಲ್ಲ. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ಆಯೋಗವು ಎಲ್ಲಾ, ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

RELATED ARTICLES

Latest News