Homeರಾಜ್ಯಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಎಸ್‌ಐಆರ್‌ ತರಬೇತಿ ಇಲ್ಲ : ಶಾಸಕ ಎಚ್‌.ಡಿ.ರಂಗನಾಥ್‌

ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಎಸ್‌ಐಆರ್‌ ತರಬೇತಿ ಇಲ್ಲ : ಶಾಸಕ ಎಚ್‌.ಡಿ.ರಂಗನಾಥ್‌

Anganwadi workers do not have proper SIR training: MLA H.D. Ranganath

ಬೆಂಗಳೂರು, ಜು.4- ಮತದಾರರ ಪಟ್ಟಿ ಪರಿಷ್ಕರಣೆಗೆ ನಡೆಯುತ್ತಿರುವ ಎಸ್‌‍ಐಆರ್‌ನಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಸಿಬ್ಬಂದಿಗಳಿಗೆ ಸರಿಯಾದ ತರಬೇತಿ ಇಲ್ಲ ಎಂದು ಕುಣಿಗಲ್‌ ಶಾಸಕ ಎಚ್‌.ಡಿ.ರಂಗನಾಥ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ ಪಕ್ಷ ದೇಶದ ಪ್ರತಿಯೊಬ್ಬ ಪ್ರಜೆಯ ಹಿತ ಕಾಪಾಡಲು ಪ್ರಯತ್ನಿಸುತ್ತಿದೆ. ಬಿಜೆಪಿಯವರು ಪ್ರತಿಯೊಂದರಲ್ಲೂ ಕಡಿವಾಣ ಹಾಕುವಂತಹ ಮನಃಸ್ಥಿತಿ ಹೊಂದಿದ್ದಾರೆ. ಆಂತರಿಕವಾಗಿ ಸಂವಿಧಾನವನ್ನು ವಿರೋಧಿಸುತ್ತಾ, ಬಹಿರಂಗವಾಗಿ ಸಂವಿಧಾನದ ಅನುಸಾರವೇ ಮತದಾರರ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಎಲ್ಲದಕ್ಕೂ ವಿರೋಧ ಮಾಡುತ್ತಿದೆ. ನಾವು ಯಾರೂ ಕಾನೂನಿನ ವಿರುದ್ಧವಾಗಿ ಹೋಗುತ್ತಿಲ್ಲ. ಬಿಎಲ್‌ಒಗಳು ಮತ್ತು ಬಿಎಲ್‌ಎಗಳು ಮನೆ ಮನೆಗೆ ತೆರಳಿ ಅರ್ಜಿ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಕುಣಿಗಲ್‌ನಲ್ಲಿ ಎಲ್ಲಿಯೂ ಸಮುದಾಯ ಭವನಗಳಲ್ಲಿ ಎಸ್‌‍ಐಆರ್‌ ನಡೆಯುತ್ತಿಲ್ಲ ಎಂದು ಹೇಳಿದರು.

ಕುಣಿಗಲ್‌ ತಾಲ್ಲೂಕಿನಲ್ಲಿ 142 ಬೂತ್‌ಗಳಿಗೆ ಅಂಗನವಾಡಿ ಕಾರ್ಯಕರ್ತರನ್ನು ನೇಮಿಸಲಾಗಿದೆ. ಅವರಿಗೆ ಅರ್ಜಿಯನ್ನು ಭರ್ತಿ ಮಾಡಲು ಬರುತ್ತಿಲ್ಲ. ಅರ್ಜಿದಾರರ ಹೆಸರು, ತಂದೆ-ತಾಯಿಗಳ ಹೆಸರುಗಳನ್ನು ಉಲ್ಟಾಪಲ್ಟ ಮಾಡಿ ಪ್ರತಿ ಬೂತ್‌ನಲ್ಲಿ 30 ರಿಂದ 40 ಅರ್ಜಿಗಳನ್ನು ವ್ಯರ್ಥ ಮಾಡಲಾಗಿದೆ. ಚುನಾವಣಾ ಆಯೋಗ ಸರಿಯಾಗಿ ತರಬೇತಿ ನೀಡಿಲ್ಲ ಎಂದು ಹೇಳಿದರು.

ಶಿಕ್ಷಕರನ್ನು ನೇಮಿಸಿರುವ ಕಡೆ ಸಮರ್ಪಕವಾದ ಸಮೀಕ್ಷೆ ನಡೆಯುತ್ತಿದೆ. ಅಂಗನವಾಡಿ ಕಾರ್ಯಕರ್ತರು ಸಹಾಯಕರಿಗೆ ಸರಿಯಾದ ಮಾಹಿತಿ ಇಲ್ಲ. ಎಸ್‌‍ಐಆರ್‌ನಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗಳಿಗೆ ಸರಿಯಾದ ತರಬೇತಿ ನೀಡಬೇಕು. ಅಮಾಯಕರಿಗೆ ಗೊಂದಲವಾಗುತ್ತಿದೆ. ಕೆಲವು ಕಡೆ ಫೋಟೋ ಬೇಕು ಎಂದರೆ, ಇನ್ನೂ ಕೆಲವು ಕಡೆ ಫೋಟೋ ಬೇಡ ಎನ್ನುತ್ತಿದ್ದಾರೆ ಎಂದರು.

2002ರ ಮತದಾರರ ಪಟ್ಟಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. 2002ರ ಹಿಂದಿನ ಮತದಾರರ ಪಟ್ಟಿಯಲ್ಲಿನ ಹೆಸರನ್ನು ಲಗತ್ತಿಸದೇ ಇದ್ದರೇ ವಾಸಸ್ಥಳ ದೃಢೀಕರಣ ಪತ್ರ, ಓಬಿಸಿ, ಎಸ್‌‍ಸಿ-ಎಸ್ಟಿ ಜಾತಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಇದಕ್ಕೆಲ್ಲಾ ಸಮಯ ಬೇಕಾಗಿದೆ ಎಂದು ಹೇಳಿದರು.

11 ಅಂಶಗಳ ಬಗ್ಗೆ ಅಂಗನವಾಡಿ ಸಿಬ್ಬಂದಿಗಳಿಗೆ ಅರಿವೇ ಇಲ್ಲ. ಈ ಬಗ್ಗೆ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಕೇಂದ್ರ ಸಚಿವರು ಚುನಾವಣಾ ಆಯೋಗದ ಮೇಲೆ ಒತ್ತಡ ತಂದು ಮತ್ತಷ್ಟು ಕಾಲಾವಕಾಶ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಜೆಡಿಎಸ್‌‍ನ ಮುಖಂಡ ನಿಖಿಲ್‌ ಕುಮಾರಸ್ವಾಮಿ, ಕುಣಿಗಲ್‌ನ ಜೀನ್‌್ಸ ಬಗ್ಗೆ ಮಾತನಾಡಿದ್ದಾರೆ. ಅವನ್ಯಾರೋ ಒಬ್ಬ ಡಾಕ್ಟರ್‌ ಯಾವ ಆಪರೇಷನ್‌ ಮಾಡಿದ್ದಾನೆ ಎಂದು ಕೇಳಿದ್ದಾರೆ. ನಾನು ನಿಖಿಲ್‌ ಅವರ ಸೋದರ ಮಾವನ ಜೊತೆ 15 ವರ್ಷ ಕೆಲಸ ಮಾಡಿದ್ದೇನೆ. ಹೆಚ್ಚಿನ ಮಾಹಿತಿ ಬೇಕಾದರೆ ಅವರ ಬಳಿ ಕೇಳಿ ತಿಳಿದುಕೊಳ್ಳಲಿ.

ನಾನು ಸಾಮಾನ್ಯ ರೈತ ಕುಟುಂಬದ ಮಗನಾಗಿ ಕಷ್ಟಪಟ್ಟು ಓದಿ ವೈದ್ಯನಾಗಿದ್ದೇನೆ. ಕುಣಿಗಲ್‌ನಲ್ಲಿ ಹಲವಾರು ಐಎಎಸ್‌‍ ಅಧಿಕಾರಿಗಳಿದ್ದಾರೆ. ವೈ.ಕೆ.ರಾಮಯ್ಯ ಅವರಂತಹ ಹಿರಿಯರು ಕುಣಿಗಲ್‌ನವರು. ತಾಲ್ಲೂಕಿನ ಜೀನ್‌್ಸ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.

RELATED ARTICLES

Latest News