ಬೆಂಗಳೂರು, ಜು.4- ಮತದಾರರ ಪಟ್ಟಿ ಪರಿಷ್ಕರಣೆ ಗೊಂದಲಗಳ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದೇ ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯೇ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆರೋಪ ಮಾಡುತ್ತಿರುವ ಕೇಂದ್ರ ಸಚಿವರು ಯಾವ ಪಕ್ಷ?, ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಯಾವ ಪಕ್ಷ? ಎಂದು ಖಾರವಾಗಿ ಪ್ರಶ್ನಿಸಿದರು.
ಚುನಾವಣಾ ಆಯೋಗಕ್ಕೆ ನಿಷ್ಪಪಕ್ಷಪಾತವಾದ ಚುನಾವಣೆ ನಡೆಸುವುದು ಮತ್ತು ಶುದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದನ್ನು ಬಿಟ್ಟರೆ ಬೇರೆ ಯಾವ ಕೆಲಸವಿದೆ? ಅದನ್ನು ಸರಿಯಾಗಿ ಮಾಡದೇ ಇದ್ದ ಮೇಲೆ ಇನ್ನೇನು ಮಾಡುತ್ತಾರೆ? ಎಂದು ಪ್ರಶ್ನಿಸಿದರು.ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಎಚ್.ಡಿ.ಕುಮಾರಸ್ವಾಮಿ ಎಲ್ಲರೂ ಆರೋಪ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಅವರು ಅಧಿಕಾರದಲ್ಲಿರುವುದನ್ನು ಮರೆತಂತಿದೆ. ಎಲ್ಲವೂ ಅವರ ಕೈಯಲ್ಲೇ ಇದೆ.
ಕೇಂದ್ರ ಚುನಾವಣಾ ಆಯೋಗದ ಉಸ್ತುವಾರಿಯಲ್ಲೇ ಎಸ್‌ಐಆರ್ ಮಾಡಲಿ, ಯಾರು ಬೇಡ ಎಂದಿದ್ದಾರೆ? ಎಂದರು.ಈಗ ಸೃಷ್ಟಿಯಾಗಿರುವ ಗೊಂದಲಗಳಿಗೆ ಯಾರು ಕಾರಣ? ಕಾಂಗ್ರೆಸ್ ಪಕ್ಷವಂತೂ ಗೊಂದಲ ಮಾಡಿಲ್ಲ, ರಾಜ್ಯ ಸರ್ಕಾರ ಎಸ್‌ಐಆರ್‌ಗೆ ವಿರುದ್ಧವಿಲ್ಲ ಪಾರದರ್ಶಕವಾಗಿ ಎಸ್‌ಐಆರ್ ನಡೆಯಬೇಕೆಂಬುದು ನಮ ಒತ್ತಾಯ. ಇದಕ್ಕಾಗಿಯೇ ಆಯೋಗಕ್ಕೆ ಕೆಲ ಸ್ಪಷ್ಟನೆಗಳನ್ನು ಕೇಳಿ ಪತ್ರ ಬರೆದಿದ್ದೇವೆ. ಈವರೆಗೂ ಏಕೆ ಉತ್ತರ ಕೊಟ್ಟಿಲ್ಲ? ನಾಗರಿಕರಿಗೆ ಮತದಾನದ ಹಕ್ಕುಗಳು ತಪ್ಪಬಾರದು ಎಂಬುದಷ್ಟೇ ನಮ ಉದ್ದೇಶ ಎಂದರು.
ಎಸ್‌ಐಆರ್‌ಗೆ ಚುನಾವಣಾ ಆಯೋಗದ ವೀಕ್ಷಕರು ಇರುತ್ತಾರೆ. ಲೋಪಗಳಿದ್ದರೆ ಆಯೋಗವೇ ಕ್ರಮ ಕೈಗೊಳ್ಳುತ್ತದೆ. ರಾಜ್ಯ ಸರ್ಕಾರ ಸಮುದಾಯ ಭವನ ಅಥವಾ ಕಚೇರಿಗಳಲ್ಲಿ ಎಸ್‌ಐಆರ್ ಮಾಡಿ ಎಂದು ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದರು.
ಜನರಲ್ಲಿ ಎಸ್‌ಐಆರ್ ಬಗ್ಗೆ ಅನುಮಾನ, ಗೊಂದಲಗಳಿದ್ದರೆ ಅದಕ್ಕೆ ಯಾರು ಹೊಣೆ? ನಿಯಮಗಳನ್ನು ರೂಪಿಸುವುದು ಯಾರು? ರಾಜ್ಯ ಸರ್ಕಾರಕ್ಕೆ ಏನಾದರೂ ಸಂಬಂಧವಿದೆಯೇ? ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂದರೆ ಏನು ಎಂದು ಅವರ ಬಳಿ ಈವರೆಗೂ ಉತ್ತರ ಇಲ್ಲ ಎಂದರು.ಎಸ್‌ಐಆರ್ ಮಾಡುತ್ತಿರುವವರು ರಾಜ್ಯ ಸರ್ಕಾರದ ಅಧಿಕಾರಿಗಳೇ ಇರಬಹುದು. ಆದರೆ ನಿರ್ದೇಶನ ಕೊಡುವುದು ಯಾರು? ಒಂದು ವೇಳೆ ನಿರ್ದೇಶನದಂತೆ ನಡೆಯದೇ ಇದ್ದರೆ, ಕ್ರಮ ಕೈಗೊಳ್ಳಬೇಕಿರುವವರು ಯಾರು? ಎಂದು ಪ್ರಶ್ನಿಸಿದರು.ಎಸ್‌ಐಆರ್‌ಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು ಶ್ರಮಿಸುತ್ತಿದ್ದಾರೆ. ಜಯನಗರದಲ್ಲಿ ಏನಾಗಿದೆ? ಅಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆಯೇ? ಎಂದು ತಿರುಗೇಟು ನೀಡಿದರು.
ಕೆಲವು ಕಡೆ ಒಂದು ಸಮುದಾಯದ ಮಸೀದಿಗಳಲ್ಲಿ ಎನ್ಯುಮರೇಷನ್ ಅರ್ಜಿ ಹಂಚುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವು ಕಡೆ ಹಿಂದುಳಿದ ವರ್ಗದವರು ಆಯಾ ಸಮುದಾಯ ಭವನದಲ್ಲಿ ಸಭೆ ಸೇರಿ ಎನ್ಯುಮರೇಷನ್ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಹಂಚುವ ಮೂಲಕ ಎಸ್‌ಐಆರ್‌ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇದಕ್ಕೆ ಏನೆಂದು ಹೇಳಲು ಸಾಧ್ಯವಾಗುತ್ತದೆ? ಎಂದರು.
ಎಸ್‌ಐಆರ್‌ನಿಂದ ದಲಿತರಿಗೆ, ಅಲ್ಪ ಸಂಖ್ಯಾತರಿಗೆ, ಹಿಂದುಳಿದವರಿಗೆ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಆತಂಕ ಇದೆ. ಈ ಹಿಂದೆ ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಎಸ್‌ಐಆರ್ ಬಳಿಕ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡವರಿಗೆ ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ದೊರೆಯುತ್ತವೆ ಎಂದು ಹೇಳಲಾಗಿತ್ತು. ಹೀಗಾಗಿ ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ಇದನ್ನು ನಿವಾರಣೆ ಮಾಡುವುದು ಎಲ್ಲಾ ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದರು.
ಎಸ್‌ಐಆರ್ ಬಗ್ಗೆ ಚರ್ಚೆ ಮಾಡಲು ಚುನಾವಣಾ ಆಯೋಗ ಸಮಯವನ್ನೇ ನೀಡುತ್ತಿಲ್ಲ ಎಂದರೆ ಇದಕ್ಕೆ ಯಾರನ್ನು ಕೇಳಬೇಕು ಎಂದರು.ಬೆಂಗಳೂರಿನಲ್ಲಿ ಬಸ್‌ಗಳು ಹಾಗೂ ಇತರ ವಾಹನಗಳು ಕೆಟ್ಟು ನಿಲ್ಲುವುದರಿಂದ ಶೇ. 66ರಷ್ಟು ಸಂಚಾರ ದಟ್ಟಣೆಯಾಗುತ್ತಿದೆ. ಎಲೆಕ್ಟ್ರಿಕ್ ಬಸ್‌ಗಳಲ್ಲಿ ಬ್ಲಾಕ್ ಬಾಕ್ಸ್ ಅಳವಡಿಸಲಾಗಿದೆ. ಬಸ್‌ಗಳು ಕೆಟ್ಟರೆ ಅದನ್ನು ಸರಿಪಡಿಸಲು ತಂತ್ರಜ್ಞರೇ ಬರಬೇಕು. ಅಲ್ಲಿವರೆಗೂ ಬಸ್‌ಗಳು ರಸ್ತೆಯಲ್ಲಿ ನಿಂತಿರುತ್ತವೆ. ಇದಕ್ಕಾಗಿ ನಗರ ಸಂಚಾರ ವ್ಯವಸ್ಥೆಯ ಬಗ್ಗೆ ನೀಲ ನಕ್ಷೆ ತಯಾರಿಸಿ ಸುರಕ್ಷಿತವಾದ ವ್ಯವಸ್ಥೆ ರೂಪಿಸಬೇಕಿದೆ ಎಂದು ಹೇಳಿದರು.
