ಬೆಂಗಳೂರು,ಜು.4- ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿರ್ದೇಶನದ ಹೊರತಾಗಿಯೂ ರಾಜ್ಯದ ನಾನಾ ಕಡೆ ಮತ್ತೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯಲ್ಲಿ ಪುನಃ ಅಕ್ರಮಗಳ ಸರಮಾಲೆ ಮುಂದುವರೆದಿದೆ.
ನಿಗದಿಪಡಿಸಿದ ಸ್ಥಳದಲ್ಲೇ ಎಸ್ಐಆರ್ ನಡೆಸಬೇಕೆಂದು ಚುನಾವಣಾ ಆಯೋಗ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಕೆಳಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.
ಆದರೆ ಆಯೋಗದ ನಿರ್ದೇಶನಕ್ಕೆ ಕ್ಯಾರೆ ಎನ್ನದ ಬಿಎಲ್ಒಗಳು ಮತ್ತೆ ರಾಜ್ಯದ ನಾನಾ ಕಡೆ ಈ ಹಿಂದೆ ನಡೆಸಿದಂತೆ ಗುಂಪು ಪ್ರಕ್ರಿಯೆ ಮೂಲಕ ಎಸ್ಐಆರ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾನಾ ಕಡೆ ಬಿಎಲ್ಒ ಅಧಿಕಾರಿಗಳು ಅಂಗನವಾಡಿಗೆ ಸಾಮೂಹಿಕವಾಗಿ ಕರೆಸಿಕೊಂಡು ನಮೂನೆಗಳನ್ನು ಭರ್ತಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಜಪುರ ಜಿಲ್ಲೆಯಲ್ಲೂ ಇದೇ ರೀತಿ ಬಿಎಲ್ಒಗಳು ಮನೆ ಮನೆಗೆ ತೆರಳದೆ ಅಂಗನವಾಡಿ ಕೇಂದ್ರದಲ್ಲಿ ಮತದಾರರನ್ನು ಸಾಮೂಹಿಕವಾಗಿ ಕೂರಿಸಿಕೊಂಡು ನಮೂನೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದರು.
ಚಿಕ್ಕಮಗಳೂರಿನಲ್ಲೂ ಇದೇ ರೀತಿ ಸಾಮೂಹಿಕವಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸುಮಾರು 200ಕ್ಕೂ ಹೆಚ್ಚು ಮತದಾರರನ್ನು ಏಕಕಾಲಕ್ಕೆ ಬಿಎಲ್ಒ ಅಧಿಕಾರಿಗಳು ಕರೆಸಿಕೊಂಡು ನಮೂನೆಗಳನ್ನು ಭರ್ತಿ ಮಾಡಿಕೊಂಡಿದ್ದಾರೆ.
ಹೀಗೆ ರಾಜ್ಯದ ನಾನಾ ಕಡೆ ಶನಿವಾರವೂ ಎಸ್ಐಆರ್ ಪ್ರಕ್ರಿಯೆ ಒಂದು ರೀತಿ ಹೇಳುವವರು, ಕೇಳುವವರು ಇಲ್ಲದಂತೆ ಬೇಕಾಬಿಟ್ಟಿಯಾಗಿ ನಡೆಯುತ್ತಿರುವುದು ಪ್ರತಿಪಕ್ಷಗಳ ಆರೋಪಕ್ಕೆ ಮತ್ತೆ ಪುಷ್ಟಿ ನೀಡುವಂತಿದೆ.
ಮನೆಗೆ ಹೋಗದ ಅಧಿಕಾರಿಗಳು :
ರಾಜ್ಯದ ಬಹುತೇಕ ಕಡೆ ಬಿಎಲ್ಒ ಅಧಿಕಾರಿಗಳು ಮನೆ ಮನೆಗೆ ತೆರಳದೆ ಅಂಗನವಾಡಿ, ಕಲ್ಯಾಣ ಮಂಟಪ ,ಖಾಸಗಿ ಕಟ್ಟಡಗಳಲ್ಲೇ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿರುವ ದೃಶ್ಯ ಎಲ್ಲೆಡೆ ಸರ್ವೇಸಾಮಾನ್ಯವಾಗಿ ಕಂಡುಬರುತ್ತಿದೆ.
ಮನೆ ಮನೆಗೆ ಕಡ್ಡಾಯವಾಗಿ ತೆರಳಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಕಟ್ಟುನಿಟ್ಟಿನ ಸೂಚನೆಯನ್ನು ಬಿಎಲ್ಒಗಳಿಗೆ ನೀಡಿದ್ದರು. ಇದ್ಯಾವುದಕ್ಕೂ ಸೊಪ್ಪು ಹಾಕದ ಅಧಿಕಾರಿಗಳು ಆಯೋಗ ನಿಗದಿಪಡಿಸಿದ ಸ್ಥಳವನ್ನು ಬಿಟ್ಟು ತಮಗೆ ಅನುಕೂಲಕರವಾದ ಸ್ಥಳದಲ್ಲಿ ಈ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಆಯೋಗದ ನಿರ್ದೇಶನಕ್ಕೆ ಕವಡೆ ಕಾಸಿನ ಕಿಮತ್ತು-ಬೆಲೆ ಕೊಡದೆ ಅಧಿಕಾರಿಗಳು ಸ್ಥಳೀಯ ರಾಜಕೀಯ ನಾಯಕರ ಪ್ರಭಾವಕ್ಕೆ ಒಳಗಾಗಿ ಎಲ್ಲೆಂದರಲ್ಲಿ ಈ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಶಾಸಕರು ಬಿಎಲ್ಒಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದು, ತಾವು ಸೂಚಿಸಿದ ಸ್ಥಳದಲ್ಲಿ ಗಣತಿ ನಮೂನೆಗಳನ್ನು ಭರ್ತಿ ಮಾಡಿಸಿಕೊಳ್ಳಬೇಕು. ನಾವು ನಿಗದಿಪಡಿಸಿದ ಸ್ಥಳಕ್ಕೆ ಬಂದು ಪ್ರಕ್ರಿಯೆ ನಡೆಸದಿದ್ದರೆ ಕ್ರಮ ಜರುಗಿಸುತ್ತೇವೆ ಎಂಬ ಬೆದರಿಕೆಯನ್ನು ಪರೋಕ್ಷವಾಗಿ ಒಡ್ಡುತ್ತಿದ್ದಾರೆ ಎನ್ನಲಾಗಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಬಹುತೇಕ ಶಿಕ್ಷಕರು, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸೇರಿದಂತೆ ಸರ್ಕಾರದ ಬಹುತೇಕ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಆಯೋಗದ ನಿರ್ದೇಶನವನ್ನು ಪಾಲನೆ ಮಾಡಲು ಸ್ಥಳೀಯ ಶಾಸಕರೇ ಬಿಎಲ್ಒಗಳಿಗೆ ತೊಡರುಗಾಲಾಗಿ ಪರಿಣಮಿಸಿದ್ದಾರೆ ಎಂಬುದು ಬಹುತೇಕರ ಅಳಲು.
ಒಂದು ವೇಳೆ ನಮ ಮಾತು ಪಾಲನೆ ಮಾಡದಿದ್ದರೆ ಎಸ್ಐಆರ್ ಮುಗಿದ ನಂತರ ನೋಡಿಕೊಳ್ಳುತ್ತೇವೆ… ಇನ್ನು ಮುಂತಾದ ಬೆದರಿಕೆ ಮಾತುಗಳನ್ನು ಒಡ್ಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅನೇಕರು ತಮ ನೋವು ತೋಡಿಕೊಂಡಿದ್ದಾರೆ.
