Homeರಾಜ್ಯರಾಜ್ಯದಲ್ಲಿ ಇದುವರೆಗೂ ನಡೆದ ಎಸ್‌‍ಐಆರ್‌ ರದ್ದುಗೊಳಿಸುವಂತೆ ಎಚ್‌ಡಿಕೆ ಆಗ್ರಹ

ರಾಜ್ಯದಲ್ಲಿ ಇದುವರೆಗೂ ನಡೆದ ಎಸ್‌‍ಐಆರ್‌ ರದ್ದುಗೊಳಿಸುವಂತೆ ಎಚ್‌ಡಿಕೆ ಆಗ್ರಹ

HDK demands cancellation of SIR held in the state till now

ಬೆಂಗಳೂರು, ಜು.4-ಕರ್ನಾಟಕದಲ್ಲಿ ಇದುವರೆಗೂ ನಡೆದಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌‍ಐಆರ್‌)ಯನ್ನು ರದ್ದುಗೊಳಿಸಬೇಕು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭಾರತೀಯ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಈಗಾಗಲೇ ನಡೆದಿರುವ ಎಸ್‌‍ಐಆರ್‌ಗೆ ಯಾವುದೇ ಅರ್ಥವಿಲ್ಲ. ಕೆಲವೆಡೆ ಮನೆಮನೆಗೆ ತೆರಳಿ ಎಸ್‌‍ಐಆರ್‌ ಪ್ರಕ್ರಿಯೆ ಕೈಗೊಳ್ಳುವ ಬದಲು ಕಲ್ಯಾಣ ಮಂಟಪದಲ್ಲಿ ಗಣತಿ ನಮೂನೆಯನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಜೆಡಿಎಸ್‌‍ ವತಿಯಿಂದ ದೂರು ಸಲ್ಲಿಸಲಾಗಿದೆ. ಆದರೆ ಅವರು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಟ್ಟಿದ್ದು, ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸೋಮವಾರ ದೆಹಲಿಗೆ ತೆರಳಿ ಭಾರತೀಯ ಚುನಾವಣಾ ಆಯೋಗದ ಆಯುಕ್ತರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಎಸ್‌‍ಐಆರ್‌ಗೆ ಸಂಬಂಧಿಸಿದಂತೆ ನಡೆದಿರುವ ಘಟನೆಗಳ ಸಂಪೂರ್ಣ ವಿವರಗಳನ್ನು ನೀಡಿ ಈಗಾಗಲೇ ನಡೆದಿರುವ ಪ್ರಕ್ರಿಯೆಯನ್ನು ರದ್ದುಗೊಳಿಸುಂತೆ ಒತ್ತಾಯಿಸಲಾಗುವುದು ಎಂದರು.

ಪಾರದರ್ಶಕವಾಗಿ ಎಸ್‌‍ಐಆರ್‌ ಪ್ರಕ್ರಿಯೆಯನ್ನು ನಡೆಸುವಂತೆ ಮನವಿ ಮಾಡಲಾಗುವುದು ಎಂದ ಅವರು, ಪ್ರತಿನಿತ್ಯ ಹೇಳಿಕೆ ನೀಡುತ್ತಿದ್ದ ಕೆಪಿಸಿಸಿ ಅಧ್ಯಕ್ಷರು, ಗೃಹ ಸಚಿವರು ಕಲ್ಯಾಣ ಮಂಟಪಗಳಲ್ಲಿ ಎಸ್‌‍ಐಆರ್‌ಗೆ ಸಂಬಂಧಿಸಿದ ಗಣತಿ ನಮೂನೆಗಳನ್ನು ವಿತರಿಸುತ್ತಿರುವ ಬಗ್ಗೆ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ಸರ್ಕಾರಿ ಅಧಿಕಾರಿಗಳು ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಆಯೋಗದ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ. ಹಾದಿಬೀದಿಯಲ್ಲಿ ಎಸ್‌‍ಐಆರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಗೃಹಸಚಿವರು ಈಗ ಎಲ್ಲಿ ಹೋಗಿದ್ದಾರೆ? ಎಂದು ವಾಗ್ದಾಳಿ ನಡೆಸಿದರು.

ಪರ್ಯಾಯ ವ್ಯವಸ್ಥೆ ಎಲ್ಲಿ :
ಸುಪ್ರೀಂಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಲಕ್ಷಾಂತರ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿದ್ದಾರೆ. ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಏನು ಕಲ್ಪಿಸಿದ್ದಾರೆ? ಎಂದು ಪ್ರಶ್ನಿಸಿದರು.

ಕಾನೂನು ಬಗ್ಗೆ ಮಾತನಾಡುವ ಸರ್ಕಾರದವರು ಬೀದಿಬದಿ ವ್ಯಾಪಾರಿಗಳ ಬದುಕಿನ ಬಗ್ಗೆಯೂ ಚರ್ಚೆ ಮಾಡಬೇಕಲ್ಲವೇ? ಅವರಿಗೆ ಪರ್ಯಾಯದ ವ್ಯವಸ್ಥೆ ಹಾಗೂ ಪರಿಹಾರವನ್ನು ನೀಡಬೇಕಾದುದು ಸರ್ಕಾರದ ಜವಾಬ್ದಾರಿಯಲ್ಲವೇ? ಎಂದು ಕೇಳಿದರು.ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ರವರು ಒಂದು ತಿಂಗಳು ಪೂರ್ಣಗೊಳಿಸಿದ್ದಾರೆ. ಈ ಅವಧಿಯಲ್ಲಿ ಘೋಷಣೆ ಮಾಡುವುದನ್ನು ಬಿಟ್ಟರೆ ಏನೂ ಸಾಧನೆ ಮಾಡಿಲ್ಲ. ಒಂದು ತಿಂಗಳಿನಲ್ಲಿ ಅನುಷ್ಠಾನವಾಗಿರುವುದು ಯಾವುದೂ ಇಲ್ಲ.

ಭಾರತ್‌ ಜೋಡೋ ಹೆಸರಿನಲ್ಲಿ ಅವರ ಪಕ್ಷದ ಕಾರ್ಯಕರ್ತರಿಗೆ ಹಣ ನೀಡುವುದಾಗಿ ಹೇಳಿದ್ದಾರೆ. ಜನರಿಗೆ ತೆರಿಗೆ ಹೊರೆ ಹೊರಿಸುತ್ತಿದ್ದಾರೆ. ದೊಡ್ಡ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗುವ ಮೂಲಕ ದುಡ್ಡು ಹೊಡೆಯುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

RELATED ARTICLES

Latest News