Homeರಾಜ್ಯಬಾಂಗ್ಲಾದವರನ್ನು ಮತಪಟ್ಟಿಗೆ ಸೇರಿಸಲು ರಾಜ್ಯಸರ್ಕಾರದ ಸಂಚು : ಪ್ರಹ್ಲಾದ್‌ ಜೋಶಿ ಆರೋಪ

ಬಾಂಗ್ಲಾದವರನ್ನು ಮತಪಟ್ಟಿಗೆ ಸೇರಿಸಲು ರಾಜ್ಯಸರ್ಕಾರದ ಸಂಚು : ಪ್ರಹ್ಲಾದ್‌ ಜೋಶಿ ಆರೋಪ

ಬೆಂಗಳೂರು,ಜು.6- ರಾಜ್ಯಸರ್ಕಾರದ ಕುಮಕ್ಕಿನಿಂದ ಅಕ್ರಮವಾಗಿ ಎಸ್‌‍ಐಆರ್‌ ಮಾಡಲಾಗುತ್ತಿದೆ. ಅಲ್ಲದೆ ಬಾಂಗ್ಲಾ ದೇಶದ ವಲಸಿಗರನ್ನು ಮತಪಟ್ಟಿಗೆ ಸೇರಿಸಲು ರಾಜ್ಯಸರ್ಕಾರದಿಂದ ಅವಕಾಶ ಮಾಡಿ ಕೊಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರಹ್ಲಾದ್‌ ಜೋಶಿ ಆರೋಪಿಸಿದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಎಸ್‌‍ಐಆರ್‌ ಪ್ರಕ್ರಿಯೆ ನಡೆದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಅವರಿಗೆ ಎನ್‌ಡಿಎ ನಿಯೋಗ ಎಸ್‌‍ಐಆರ್‌ ಅಕ್ರಮದ ಬಗ್ಗೆ ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಪು ಗುಂಪಾಗಿ ಎಸ್‌‍ಐಆರ್‌ ಪ್ರಕ್ರಿಯೆ ಮಾಡಲಾಗುತ್ತಿದೆ. ಎಲ್ಲೆಲ್ಲಿ ಇಂತಹ ಅಕ್ರಮ ಕಂಡುಬಂದಿದೆಯೋ ಅದರ ಮಾಹಿತಿಯನ್ನು ದೂರಿನಲ್ಲಿ ನೀಡಿದ್ದೇವೆ. ಅಕ್ರಮವಾಗಿ ಎಸ್‌‍ಐಆರ್‌ ಪ್ರಕ್ರಿಯೆ ಮಾಡಿರುವ ಕಡೆಗಳಲ್ಲಿ ರದ್ದುಪಡಿಸಿ ಹೊಸದಾಗಿ ಮಾಡಬೇಕು. ಸತ್ತವರ ಹೆಸರಿನಲ್ಲಿ ಮತ್ತೊಬ್ಬರನ್ನು ಸೇರಿಸುವ ಹುನ್ನಾರವು ನಡೆಯುತ್ತಿದೆ ಎಂದು ಆರೋಪಿಸಿದರು.

ಮನೆಮನೆಗೆ ಹೋಗಿ ಗಣತಿ ನಮೂನೆ ನೀಡದಿದ್ದರೆ ಅವರು ಭಾರತೀಯರೋ, ಬಾಂಗ್ಲಾ ದೇಶದವರೋ ಯಾರಿಗೆ ಗೊತ್ತಾಗಲಿದೆ ಎಂದು ಪ್ರಶ್ನಿಸಿದರು.ಮದರಸಾ, ಮಸೀದಿಗಳಲ್ಲಿ ಸಮುದಾಯ ಭವನಗಳಲ್ಲಿ ಚುನಾಯಿತ ಪ್ರತಿನಿಧಿಗಳ ಮನೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ ನಾಯಕರ ಮನೆಯಲ್ಲಿ ಅಕ್ರಮವಾಗಿ ಎಸ್‌‍ಐಆರ್‌ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನು ಪ್ರತಿಭಟಿಸಿ ನಾವು ದೂರು ಸಲ್ಲಿಸಿದ್ದೇವೆ. ಎಲ್ಲೆಲ್ಲಿ ಅಕ್ರಮ ಎಸ್‌‍ಐಆರ್‌ ಪ್ರಕ್ರಿಯೆ ನಡೆಯುತ್ತಿತ್ತೋ ಅದರ ವಿಡಿಯೋ ಇರುವ ಪೆನ್‌ಡ್ರೈವ್‌ ಕೂಡಾ ಕೊಟ್ಟಿದ್ದೇವೆ. ವಾಟ್‌್ಸಆ್ಯಪ್‌ ಗ್ರೂಪ್‌ ಮಾಡಿಕೊಂಡು ಇಂತಿಂಥ ಸ್ಥಳಕ್ಕೆ ಬನ್ನಿ ಎಂಬ ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಎಲ್‌ಓಗಳ ಐಡಿ ಕಾರ್ಡ್‌ನಲ್ಲಿ ಶಾಸಕರ ಫೋಟೊ ಹಾಕಲಾಗಿದೆ. ಈ ರೀತಿ ಮಾಡುವ ಮೂಲಕ ಎಸ್‌‍ಐಆರ್‌ ಪ್ರಕ್ರಿಯೆಯನ್ನು ವಿಫಲಗೊಳಿಸುವ ತಂತ್ರಗಾರಿಕೆಯನ್ನು ಮಾಡಲಾಗುತ್ತಿದೆ ಎಂದು ಅವರು ಆಪಾದಿಸಿದರು.ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂಬ ವಿಷಯದ ಬಗ್ಗೆ ಚರ್ಚೆಯೂ ಮಾಡುವುದಿಲ್ಲ. ಉತ್ತರ ಕೊಡುವ ಅವಶ್ಯಕತೆಯೂ ಇಲ್ಲ ಎಂದು ಜೋಶಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಎಸ್‌‍ಐಆರ್‌ ವಿಫಲಗೊಳಿಸುವ ಯತ್ನ :
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಎಸ್‌‍ಐಆರ್‌ ಪ್ರಕ್ರಿಯೆಯನ್ನು ವಿಫಲಗೊಳಿಸಿದ ರಾಜ್ಯ ಕರ್ನಾಟಕ. ಬೇರೆ ಕಡೆ ಎಷ್ಟೇ ಒತ್ತಡ ಇದ್ದರೂ ಸರಿಯಾಗಿ ಮಾಡಲಾಗಿದೆ. ಆದರೆ ಕರ್ನಾಟಕದಲ್ಲ ನಿಯಮಬದ್ಧವಾಗಿ ಎಸ್‌‍ಐಆರ್‌ ಮಾಡಲು ಬಿಡುವುದಿಲ್ಲ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.

ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ಅಧಿಕಾರಕ್ಕೆ ಬಂದು ಸಿಎಂ ಆಗಬೇಕು ಎಂಬ ಉದ್ದೇಶದಿಂದ ಅಕ್ರಮವಾಗಿ ಎಸ್‌‍ಐಆರ್‌ ಪ್ರಕ್ರಿಯೆ ನಡೆಸಲಾಗುತ್ತಿದೆಯೇ?, ಯಾರ ಮನೆಗೂ ಹೋಗಬೇಡಿ, ಅಲ್ಪಸಂಖ್ಯಾತರ ಮತ ಉಳಿಸಿ ಎಂದು ಹೇಳುತ್ತಿದ್ದಾರೆ. ಅಗತ್ಯಬಿದ್ದರೆ ಭಾರತದ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ ಎಂದರು.

RELATED ARTICLES
spot_img

Latest News