Homeಅಂತಾರಾಷ್ಟ್ರೀಯನ್ಯಾಟೋ ಮಾದರಿಯ ಮುಸ್ಲಿಂ ರಾಷ್ಟ್ರಗಳ ಮೆಕ್ಕಾ ರಕ್ಷಣಾ ಒಕ್ಕೂಟಕ್ಕೆ ಇರಾನ್‌ಗೆ ಆಹ್ವಾನ

ನ್ಯಾಟೋ ಮಾದರಿಯ ಮುಸ್ಲಿಂ ರಾಷ್ಟ್ರಗಳ ಮೆಕ್ಕಾ ರಕ್ಷಣಾ ಒಕ್ಕೂಟಕ್ಕೆ ಇರಾನ್‌ಗೆ ಆಹ್ವಾನ

Iran reportedly invited to join Makkah Defence Pact amid Saudi-Houthi tensions

ಟೆಹ್ರಾನ್, ಆ.24- ಅಮೆರಿಕದೊಂದಿಗೆ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳು ಆ.7ರಂದು ಸಹಿ ಹಾಕಿರುವ ಮಹತ್ವದ ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದಕ್ಕೆ ಸೇರ್ಪಡೆಗೊಳ್ಳುವಂತೆ ಇರಾನ್‌ಗೆ ಅಧಿಕೃತ ಆಹ್ವಾನ ನೀಡಲಾಗಿದೆ.ಟೆಹ್ರಾನ್‌ಗೆ ಈ ಆಹ್ವಾನ ಬಂದಿದ್ದು, ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಇರಾನ್ ಸಂಸತ್ತಿನ ಸುದ್ದಿ ಸಂಸ್ಥೆಯ ಮುಖ್ಯಸ್ಥ ಮೆಹ್ದಿ ರಹೀಮಿ ತಿಳಿಸಿದ್ದಾರೆ ಎಂದು ಅಲ್‌ ಮಯಾದೀನ್ ವರದಿ ಮಾಡಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಶೀಘ್ರದಲ್ಲೇ ಟೆಹ್ರಾನ್‌ಗೆ ಭೇಟಿ ನೀಡಲಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹೀಗಾಗಿ ರಕ್ಷಣಾ ಒಕ್ಕೂಟದ ವಿಸ್ತರಣೆಯ ಕುರಿತ ಚರ್ಚೆಗೆ ಹೆಚ್ಚಿನ ಮಹತ್ವ ಬಂದಿದೆ.

ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ಸಹಿ ಹಾಕಿರುವ ಒಪ್ಪಂದದ ಪ್ರಕಾರ, ಮೂರು ದೇಶಗಳ ಪೈಕಿ ಯಾವುದೇ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೂ ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಈ ಐತಿಹಾಸಿಕ ಹೆಜ್ಜೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ್ದಾರೆ.

ಏನಿದು ‘ಮುಸ್ಲಿಂ ನ್ಯಾಟೋ’?

ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನ ದೇಶಗಳ ನಡುವೆ ಏರ್ಪಟ್ಟಿರುವುದು ತ್ರಿಪಕ್ಷೀಯ ಕಾರ್ಯತಂತ್ರದ ರಕ್ಷಣಾ ಮತ್ತು ಮಿಲಿಟರಿ ಸಹಕಾರ ಒಪ್ಪಂದ. ಆ.7ರಂದು ಸೌದಿ ಅರೇಬಿಯಾದ ಮೆಕ್ಕಾದ ಅಲ್-ಸಫಾ ಅರಮನೆಯಲ್ಲಿ ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಹಾಗೂ ಯುದ್ಧದ ಸನ್ನಿವೇಶಗಳ ಹಿನ್ನೆಲೆಯಲ್ಲಿ ಈ ಮೂರು ಪ್ರಮುಖ ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ಈ ನಿರ್ಧಾರ ಕೈಗೊಂಡಿವೆ.

ಒಪ್ಪಂದದ ಪ್ರಮುಖ ಅಂಶವೆಂದರೆ, ಮೈತ್ರಿಕೂಟದ ಯಾವುದೇ ಒಂದು ಸದಸ್ಯ ರಾಷ್ಟ್ರದ ಮೇಲೆ ಹೊರಗಿನಿಂದ ಸಶಸ್ತ್ರ ದಾಳಿ ನಡೆದರೆ, ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸುವುದು. ಈ ವ್ಯವಸ್ಥೆಯು ನ್ಯಾಟೋದ ಸಾಮೂಹಿಕ ರಕ್ಷಣಾ ತತ್ವವನ್ನು ಹೋಲುತ್ತದೆ. ಹೀಗಾಗಿ ಇದನ್ನು ಕೆಲವರು ‘ಮುಸ್ಲಿಂ ನ್ಯಾಟೋ’ ಅಥವಾ ‘ಸುನ್ನಿ ಭದ್ರತಾ ಒಕ್ಕೂಟ’ ಎಂದು ಕರೆಯುತ್ತಿದ್ದಾರೆ.

ಬಾಂಗ್ಲಾದೇಶಕ್ಕೂ ಒಲವು

ಇತ್ತ ಬಾಂಗ್ಲಾದೇಶವೂ ಈ ಒಕ್ಕೂಟಕ್ಕೆ ಸೇರುವ ಬಗ್ಗೆ ಸಕಾರಾತ್ಮಕ ಒಲವು ತೋರಿದೆ ಎನ್ನಲಾಗಿದೆ. ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ನೂತನ ರಾಜ್ಯ ಸಚಿವ ಹುಮಾಯೂನ್ ಕಬೀರ್ ಅವರು ಒಪ್ಪಂದದ ಭಾಗವಾಗುವ ಸಾಧ್ಯತೆಗಳ ಕುರಿತು ಮಾತನಾಡಿದ್ದು, ರಾಜತಾಂತ್ರಿಕ ಮಾತುಕತೆಗಳ ಮೂಲಕ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಬಯಸುವುದಾಗಿ ತಿಳಿಸಿದ್ದಾರೆ.

ಇರಾನ್ ಸೇರ್ಪಡೆಗೊಂಡರೆ ಒಕ್ಕೂಟದ ಭೌಗೋಳಿಕ ವ್ಯಾಪ್ತಿ ಮತ್ತು ಕಾರ್ಯತಂತ್ರದ ಮಹತ್ವ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಇದೇ ವೇಳೆ, ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಭದ್ರತಾ ಸಮೀಕರಣಗಳು ಹಾಗೂ ಭಾರತದ ಮೇಲೆ ಉಂಟಾಗಬಹುದಾದ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಪರಿಣಾಮಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ.

RELATED ARTICLES
spot_img

Latest News