Homeರಾಷ್ಟ್ರೀಯರೈಲಿನೊಳಗೆ ಸೂಟ್‌ಕೇಸ್‌‍ನಲ್ಲಿ ಯುವತಿಯ ತುಂಡಾದ ಭಾಗಗಳು ಪತ್ತೆ

ರೈಲಿನೊಳಗೆ ಸೂಟ್‌ಕೇಸ್‌‍ನಲ್ಲಿ ಯುವತಿಯ ತುಂಡಾದ ಭಾಗಗಳು ಪತ್ತೆ

Decomposed Body Parts Found In Suitcase On Train,

ಚೆನ್ನೈ, ಆ.24- ಚೆನ್ನೈನಿಂದ ನವದೆಹಲಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನ ಸೂಟ್‌ಕೇಸ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ದೇಹದ ಭಾಗಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಪ್ರಕರಣದ ತನಿಖೆ ಕೈಗೊಂಡ ರೈಲ್ವೆ ಪೊಲೀಸರು ಮೃತ ಯುವತಿಯನ್ನು ಒಡಿಶಾ ಮೂಲದ ಹಯುಥನ್ ನಿಶಾ (28) ಎಂದು ಗುರುತಿಸಿದ್ದಾರೆ.

ಕಳೆದ ಆ.5ರಂದು ಚೆನ್ನೈ ಸೆಂಟ್ರಲ್‌ನಿಂದ ದೆಹಲಿಗೆ ತೆರಳುತ್ತಿದ್ದ ರೈಲು ಆಗ್ರಾ ನಿಲ್ದಾಣ ತಲುಪಿದಾಗ, ಬೋಗಿಯಲ್ಲಿದ್ದ ಸೂಟ್‌ಕೇಸ್‌ನಿಂದ ತೀವ್ರ ದುರ್ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ರೈಲ್ವೆ ಪೊಲೀಸರು ಸೂಟ್‌ಕೇಸ್ ಪರಿಶೀಲಿಸಿದಾಗ ಅದರಲ್ಲಿ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದ್ದವು.

ಆಗ್ರಾ ಪೊಲೀಸರಿಂದ ಮಾಹಿತಿ ಪಡೆದ ಚೆನ್ನೈ ಪೊಲೀಸರು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಇಬ್ಬರು ವ್ಯಕ್ತಿಗಳು ಅದೇ ಮಾದರಿಯ ಟ್ರಾಲಿ ಸೂಟ್‌ಕೇಸ್‌ನೊಂದಿಗೆ ರೈಲು ಹತ್ತಿರುವುದು ದೃಶ್ಯಾವಳಿಯಲ್ಲಿ ದಾಖಲಾಗಿತ್ತು.

ತನಿಖೆಯ ಆಧಾರದ ಮೇಲೆ ಶಂಕಿತರನ್ನು ಮಾಣಿಕ್ ಉದ್ದೀನ್ ಲಸ್ಕರ್ ಮತ್ತು ಭಾಗಬತಿ ಮಾಝಿ ಎಂದು ಗುರುತಿಸಿದ ಪೊಲೀಸರು, ಚೆನ್ನೈ ಹೊರವಲಯದ ಗೂಡುವಾಂಚೇರಿಯಲ್ಲಿರುವ ಅವರ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದರು.

ಮನೆಯ ಶೋಧದ ವೇಳೆ ಅಡುಗೆ ಪಾತ್ರೆಯೊಂದರಲ್ಲಿ ಮಹಿಳೆಯ ದೇಹದ ಮತ್ತಷ್ಟು ಕೊಳೆತ ಭಾಗಗಳು ಪತ್ತೆಯಾಗಿವೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.ಇಬ್ಬರೂ ಶಂಕಿತರು ಸದ್ಯ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.

ಆಗ್ರಾ ರೈಲಿನಲ್ಲಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿದ್ದ ದೇಹದ ಭಾಗಗಳು ಹಾಗೂ ಚೆನ್ನೈನ ಮನೆಯಲ್ಲಿ ಪತ್ತೆಯಾದ ದೇಹದ ಭಾಗಗಳು ಒಂದೇ ಮಹಿಳೆಗೆ ಸೇರಿವೆಯೇ ಎಂಬುದನ್ನು ವೈಜ್ಞಾನಿಕವಾಗಿ ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮೃತ ಮಹಿಳೆಯ ಮಗ ಚೆನ್ನೈನಲ್ಲಿ ನಾಪತ್ತೆ ದೂರು ದಾಖಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣಕಾಸಿನ ವಿವಾದ ಅಥವಾ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದೇ ಎಂಬುದೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES
spot_img

Latest News