ಬೆಂಗಳೂರು, ಆ.24- ಪ್ರಸಕ್ತ ಅಧಿವೇಶನದ ಕಾರ್ಯಕಲಾಪಗಳಲ್ಲಿ ವಿರೋಧಪಕ್ಷದ ನಾಯಕರು ಹಾಗೂ ಶಾಸಕರ ಹೇಳಿಕೆಗಳು, ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತಾರತಮ್ಯವಿಲ್ಲದೆ ಬಿಡುಗಡೆಗೊಳಿಸಲು ಸೂಚಿಸಬೇಕು ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಈ ಸಂಬಂಧ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ತಾರತಮ್ಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಅಶೋಕ್ ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.
ಆ.13ರಿಂದ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ವಿರೋಧಪಕ್ಷದ ನಾಯಕರು ಹಾಗೂ ಶಾಸಕರ ಹೇಳಿಕೆಗಳು, ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಬಿಡುಗಡೆಗೊಳಿಸುತ್ತಿಲ್ಲ. ಇದರಿಂದ ವಿರೋಧಪಕ್ಷದ ಸದಸ್ಯರ ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ, ಸಚಿವರು ಹಾಗೂ ಆಡಳಿತ ಪಕ್ಷದ ಶಾಸಕರ ಎಲ್ಲ ಹೇಳಿಕೆಗಳು, ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಈ ರೀತಿಯ ತಾರತಮ್ಯ ಹಿಂದೆಂದೂ ನಡೆದಿಲ್ಲ ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಇಂದು ಸದನದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಶಾಸಕರೊಂದಿಗೆ ಪ್ರಸ್ತಾಪಿಸಿದ ಅಶೋಕ್, ಬಳಿಕ ತಮ್ಮ ಪತ್ರವನ್ನು ಸಭಾಧ್ಯಕ್ಷರಿಗೆ ತಲುಪಿಸಿದರು.
