Homeರಾಷ್ಟ್ರೀಯಸರ್ಕಾರಿ ಆಸ್ಪತ್ರೆಯ ಎನ್‌ಐಸಿಯುನಲ್ಲಿ ಅಗ್ನಿ ಅವಘಡ, ಮೂರು ನವಜಾತ ಶಿಶುಗಳ ಸಾವು

ಸರ್ಕಾರಿ ಆಸ್ಪತ್ರೆಯ ಎನ್‌ಐಸಿಯುನಲ್ಲಿ ಅಗ್ನಿ ಅವಘಡ, ಮೂರು ನವಜಾತ ಶಿಶುಗಳ ಸಾವು

3 Newborns Die After Ventilator Blast Triggers Fire At Maharashtra Hospital

ಅಮರಾವತಿ, ಆ.24- ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ನವಜಾತ ಶಿಶುಗಳು ಮೃತಪಟ್ಟಿವೆ.

ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ಎನ್‌ಐಸಿಯುನಲ್ಲಿ ಮುಂಜಾನೆ ಸುಮಾರು 3.15ಕ್ಕೆ ವೆಂಟಿಲೇಟರ್‌ನಲ್ಲಿ ಏಕಾಏಕಿ ಕಿಡಿ ಕಾಣಿಸಿಕೊಂಡಿದ್ದು, ಬಳಿಕ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಕರ್ತವ್ಯದಲ್ಲಿದ್ದ ವೈದ್ಯರು, ನರ್ಸ್‌ಗಳು ಹಾಗೂ ಇತರ ಸಿಬ್ಬಂದಿ ಎನ್‌ಐಸಿಯುನಲ್ಲಿದ್ದ 36 ಶಿಶುಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ಆದರೆ, ಈ ವೇಳೆ ಮೂವರು ನವಜಾತ ಶಿಶುಗಳು ಮೃತಪಟ್ಟಿವೆ. ಇನ್ನು ಆರು ಶಿಶುಗಳನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ದಟ್ಟ ಹೊಗೆಯಿಂದ ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಸಿಬ್ಬಂದಿ ಆತಂಕಗೊಂಡಿದ್ದರು. ಆದರೆ, ಪರಿಸ್ಥಿತಿಯನ್ನು ತಕ್ಷಣ ನಿಯಂತ್ರಣಕ್ಕೆ ತಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯಾಚರಣೆ ನಡೆಸಲಾಯಿತು ಎಂದು ಅಮರಾವತಿ ಪೊಲೀಸ್ ಆಯುಕ್ತ ರಾಕೇಶ್ ಓಲಾ ತಿಳಿಸಿದ್ದಾರೆ.

ಅವಧಿಪೂರ್ವ ಜನನವಾಗಿರುವ ಹಾಗೂ ಗಂಭೀರ ಸ್ಥಿತಿಯಲ್ಲಿರುವ ಶಿಶುಗಳಿಗೆ ಈ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ ಎಂದು ಕಂದಾಯ ಸಚಿವ ಹಾಗೂ ಅಮರಾವತಿ ಉಸ್ತುವಾರಿ ಸಚಿವ ಚಂದ್ರಶೇಖರ ಬಾವನಕುಳೆ ಭರವಸೆ ನೀಡಿದ್ದಾರೆ.

ವೆಂಟಿಲೇಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ

ಎನ್‌ಐಸಿಯುನಲ್ಲಿ ಮೂರು ವಿಭಾಗಗಳಿದ್ದು, ಆಸ್ಪತ್ರೆಯಲ್ಲೇ ಜನಿಸಿದ ಶಿಶುಗಳು, ಹೊರಗಿನಿಂದ ಕರೆತರಲಾದ ಶಿಶುಗಳು ಹಾಗೂ ಆಸ್ಪತ್ರೆಯಿಂದ ಬಿಡುಗಡೆಗೆ ಸಿದ್ಧವಾಗಿರುವ ಮಕ್ಕಳಿಗಾಗಿ ಸ್ಟೆಪ್‌ಡೌನ್ ಕೇರ್ ವಿಭಾಗಗಳಿವೆ. ಈ ಮೂರು ವಿಭಾಗಗಳಲ್ಲಿ ಒಟ್ಟು 39 ಶಿಶುಗಳು ದಾಖಲಾಗಿದ್ದವು ಎಂದು ಪೊಲೀಸ್ ಆಯುಕ್ತ ರಾಕೇಶ್ ಓಲಾ ತಿಳಿಸಿದ್ದಾರೆ. ಹೊರಗಿನಿಂದ ಕರೆತರಲಾದ ಶಿಶುಗಳ ವಿಭಾಗದಲ್ಲಿದ್ದ ವೆಂಟಿಲೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿದ್ದ ಮೂವರು ನವಜಾತ ಶಿಶುಗಳು ಮೃತಪಟ್ಟಿದ್ದಾರೆ. ಇತರ ಆರು ಶಿಶುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ವಿದ್ಯುತ್ ವಿಭಾಗಕ್ಕೆ ಮಾಹಿತಿ ನೀಡಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಮೂವರು ನವಜಾತ ಶಿಶುಗಳ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಬಾವನಕುಳೆ, “ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ನನ್ನ ಹೃದಯ ಭಾರವಾಗಿದೆ” ಎಂದು ಹೇಳಿದ್ದಾರೆ.

ಮೃತ ಮಕ್ಕಳ ಕುಟುಂಬಗಳೊಂದಿಗೆ ಸರ್ಕಾರ ನಿಂತಿದ್ದು, ಸರ್ಕಾರ ಮತ್ತು ಆಡಳಿತವು ಸಾಧ್ಯವಿರುವ ಎಲ್ಲ ನೆರವನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಘಟನೆ ಕುರಿತು ಚರ್ಚಿಸಿದ್ದು, ಪರಿಸ್ಥಿತಿಯನ್ನು ಆಡಳಿತವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

RELATED ARTICLES
spot_img

Latest News