ಬೆಂಗಳೂರು, ಆ.24- ರಾಜ್ಯದಲ್ಲಿ ಎಚ್1ಎನ್1 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮಾರ್ಗಸೂಚಿ ರವಾನಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಜನವರಿಯಿಂದ ರಾಜ್ಯದಲ್ಲಿ 4,212 ಎಚ್1ಎನ್1 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗಗಳ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಬಿಸಿ ನೀರನ್ನೇ ಕುಡಿಯಬೇಕು ಹಾಗೂ ಹೋಟೆಲ್‌ಗಳಲ್ಲಿಯೂ ಬಿಸಿನೀರನ್ನು ಒದಗಿಸಬೇಕು. ಜ್ವರ ಇರುವವರು ಜನರ ನಡುವೆ ಓಡಾಡುವುದನ್ನು ನಿಯಂತ್ರಿಸಬೇಕು. ಎರಡು-ಮೂರು ದಿನಗಳ ಬಳಿಕವೂ ಜ್ವರ ಕಡಿಮೆಯಾಗದಿದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು ಎಂದು ಸಲಹೆ ನೀಡಿದರು.
ಮಾಧ್ಯಮಗಳಲ್ಲಿ ವರದಿಯಾದಂತೆ ಯಾವುದೇ ಶಾಲೆಯಲ್ಲಿ ಎಚ್1ಎನ್1 ಸೋಂಕು ವ್ಯಾಪಕವಾಗಿ ಹರಡಿರುವ ಬಗ್ಗೆ ವರದಿಯಾಗಿಲ್ಲ. ಒಂದು ಶಾಲೆಯ ಇಬ್ಬರು ಶಿಕ್ಷಕರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಶಾಲೆಗೆ ಬಂದಿರಲಿಲ್ಲ. ಬಳಿಕ ಯಾವುದೇ ವಿದ್ಯಾರ್ಥಿಗಳಿಗೂ ಸೋಂಕು ಹರಡಿರುವುದು ಕಂಡುಬಂದಿಲ್ಲ. ಇದನ್ನೇ ಸೋಂಕು ವ್ಯಾಪಕವಾಗಿ ಹರಡಿದೆ ಎಂದು ಪ್ರಚಾರ ಮಾಡಲಾಗಿದೆ. ಇದು ಸತ್ಯವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಗೊಂದಲ ನಿವಾರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾರ್ಗಸೂಚಿ ರವಾನಿಸಲಾಗುವುದು ಎಂದರು.
ಎಚ್1ಎನ್1 ಸೋಂಕು ಪತ್ತೆಯಾದರೂ ಚಿಕಿತ್ಸೆ ನೀಡಲು ರಾಜ್ಯ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಅಗತ್ಯವಿರುವ ಕಡೆ ಪ್ರತ್ಯೇಕ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಔಷಧಿಗಳ ದಾಸ್ತಾನು ಲಭ್ಯವಿದ್ದು, ಅಗತ್ಯ ಔಷಧಿಗಳ ಖರೀದಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಲಾಗಿದೆ. 15 ದಿನಗಳಲ್ಲಿ ಅಗತ್ಯ ಔಷಧಿಗಳನ್ನು ಖರೀದಿಸಿ ಜಿಲ್ಲಾ ಕೇಂದ್ರಗಳಿಗೆ ಸರಬರಾಜು ಮಾಡಲಾಗುವುದು. ತುರ್ತು ಅಗತ್ಯವಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಔಷಧಿ ಖರೀದಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
ನಕಲಿ ಔಷಧಿ ಪ್ರಕರಣ ತನಿಖೆ ಮುಂದುವರಿಕೆ
ನಕಲಿ ಔಷಧಿಗಳ ಕುರಿತ ತನಿಖೆ ಪ್ರಗತಿಯಲ್ಲಿದೆ. ಅಧಿಕೃತ ಮಾಹಿತಿ ದೊರೆತ ಬಳಿಕ ಅದನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಾಗುವುದು. ಸದ್ಯದ ಮಾಹಿತಿಯ ಪ್ರಕಾರ ಯಾವುದೇ ಸರ್ಕಾರಿ ಆಸ್ಪತ್ರೆಗಳಿಗೆ ನಕಲಿ ಔಷಧಿಗಳು ಸರಬರಾಜಾಗಿಲ್ಲ. ಎಲ್ಲೆಲ್ಲಿ ಇಂತಹ ಔಷಧಿಗಳು ಸರಬರಾಜಾಗಿವೆ ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಮಾಹಿತಿ ದೊರೆತ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲವು ಸಂದರ್ಭಗಳಲ್ಲಿ ನಕಲಿ ಮತ್ತು ಅಸಲಿ ಔಷಧಿಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಗುಪ್ತಚರ ವಿಭಾಗದ ಅಧಿಕಾರಿಗಳು ನಕಲಿ ಔಷಧಿಗಳು ಎಲ್ಲೆಲ್ಲಿ ತಯಾರಾಗುತ್ತಿವೆ ಹಾಗೂ ಯಾವ ಪ್ರದೇಶಗಳಿಗೆ ಸರಬರಾಜಾಗುತ್ತಿವೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಹೇಳಿದರು.
ಕೃತಕ ಆಹಾರ ಪದಾರ್ಥಗಳ ವಿರುದ್ಧ ಕ್ರಮ
ಕೃತಕವಾಗಿ ಉತ್ಪಾದಿಸುವ ಆಹಾರ ಪದಾರ್ಥಗಳು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ನಿಷೇಧಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಒಂದು ವರ್ಷದವರೆಗೆ ಮಾತ್ರ ನಿಷೇಧ ವಿಧಿಸುವ ಅವಕಾಶವಿದೆ. ಈ ಕುರಿತು ಕೇಂದ್ರ ಕಾಯ್ದೆಯಲ್ಲಿಯೂ ತಿದ್ದುಪಡಿ ಅಗತ್ಯವಿದ್ದು, ಕೇಂದ್ರ ಆರೋಗ್ಯ ಸಚಿವರೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
