ಬೆಂಗಳೂರು, ಆ.24- ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಇಂದು ಕೂಡ ವಿಧಾನಸಭೆಯಲ್ಲಿ ಮುಂದುವರಿಯಿತು. ಸಚಿವರು ರಾಜೀನಾಮೆ ನೀಡುವವರೆಗೆ ಅಹೋರಾತ್ರಿ ಧರಣಿ ನಡೆಸುವುದಾಗಿ ಬಿಜೆಪಿ-ಜೆಡಿಎಸ್ ಶಾಸಕರು ಪ್ರಕಟಿಸಿದರು.ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಬಿಜೆಪಿ-ಜೆಡಿಎಸ್ ಶಾಸಕರು ತಮ್ಮ ತಮ್ಮ ಸ್ಥಾನಗಳಲ್ಲಿ ಎದ್ದು ನಿಂತು ಘೋಷಣೆಗಳನ್ನು ಕೂಗುತ್ತಾ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿದರು.
ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಸದನಕ್ಕೆ ಸಕಾಲಕ್ಕೆ ಆಗಮಿಸಿದ್ದ ಶಾಸಕರ ಹೆಸರನ್ನು ವಾಚಿಸುತ್ತಿದ್ದ ವೇಳೆ ಬಿಜೆಪಿ-ಜೆಡಿಎಸ್ ಶಾಸಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಗದ್ದಲ ಉಂಟುಮಾಡಿದರು. ಬಿಜೆಪಿ ಶಾಸಕ ಸುನೀಲ್‌ಕುಮಾರ್ ಮಾತನಾಡಿ, ಇಂಥ ಭಂಡ ಸರ್ಕಾರವನ್ನು ನೋಡಿರಲಿಲ್ಲ ಎಂದು ಕಿಡಿಕಾರಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಒಬ್ಬ ವ್ಯಕ್ತಿಗಾಗಿ ಈ ರೀತಿ ಸದನದ ಸಮಯವನ್ನು ಹಾಳು ಮಾಡಬಾರದು. ಸಂವಿಧಾನಕ್ಕೂ ಗೌರವ ಇಲ್ಲದಂತಾಗಿದೆ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಅವರು ರಾಜೀನಾಮೆ ನೀಡುವವರೆಗೆ ನಾವು ಹಗಲು-ರಾತ್ರಿ ಸದನದಲ್ಲೇ ಧರಣಿ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ದಲಿತರ ಹಣ ಅಕ್ರಮ ವರ್ಗಾವಣೆ ಆರೋಪದ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ನಾವು ಮಾತನಾಡುವಾಗ ವಾರ್ತಾ ಇಲಾಖೆ ಲೈವ್‌ನಲ್ಲಿ ನಮ್ಮನ್ನು ತೋರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅಶೋಕ್, ವಾರ್ತಾ ಇಲಾಖೆ ಆಯುಕ್ತರ ವಿರುದ್ಧವೂ ಹರಿಹಾಯ್ದರು.ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ಗಳನ್ನು ಹಂಚಿಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಸಚಿವರಿಂದ ರಾಜೀನಾಮೆ ಕೊಡಿಸುತ್ತಿಲ್ಲ. ಒಂದು ಕೋಟಿ ದಲಿತರು ಹೊರಗಡೆ ಇದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ವಿರೋಧ ಪಕ್ಷಗಳಿಗೆ ಸದನದಲ್ಲಿ ಜ್ವಲಂತ ಸಮಸ್ಯೆಗಳ ಚರ್ಚೆ ಮಾಡಲು ಆಸಕ್ತಿ ಇಲ್ಲ. ರೈತರ ಸಮಸ್ಯೆ, ಬಿಡದಿ ಸಮಸ್ಯೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಇವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿದ್ದಾರೆ. ಆದರೂ ಈ ಬಗ್ಗೆ ಚರ್ಚೆ ನಡೆಸದೆ ಸದನದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕೆಪಿಎಸ್‌ಸಿ ಕುರಿತು ಚರ್ಚೆ ಮಾಡಲು ನಮಗೆ ಆಸಕ್ತಿ ಇಲ್ಲ ಎಂಬ ಆರೋಪ ಸರಿಯಲ್ಲ. ನಾವು ಅದರ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ ಎಂದು ಆಡಳಿತ ಪಕ್ಷದ ಸದಸ್ಯರು ಹೇಳಿದಾಗ, ಬಿಜೆಪಿ ಶಾಸಕ ಸುನೀಲ್‌ಕುಮಾರ್ ಮಾತನಾಡಿ, ಬರ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆಗೆ ನಾವು ಸಿದ್ಧರಿದ್ದೇವೆ. ಮೊದಲು ಸಚಿವರಿಂದ ರಾಜೀನಾಮೆ ಕೊಡಿಸಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕಾಗದಪತ್ರ, ದಾಖಲೆಗಳನ್ನು ಇಟ್ಟುಕೊಂಡು ಆರೋಪಿಸುವ ವಿಚಾರದ ಬಗ್ಗೆ ಮಾತನಾಡಲು ಬಿಜೆಪಿ ಸಿದ್ಧವಿಲ್ಲ ಎಂದು ಟೀಕಿಸಿದರು.ಅಷ್ಟರಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.
ಈ ಹಂತದಲ್ಲಿ ಮಾತನಾಡಿದ ಅಬಕಾರಿ ಸಚಿವ ಶಿವಲಿಂಗೇಗೌಡ, ಸಾವಿರಾರು ಜನರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಆರೋಪ ಮಾಡಿದ ತಕ್ಷಣ ಯಾರೂ ಅಪರಾಧಿಯಾಗುವುದಿಲ್ಲ. ದೇಶದಲ್ಲಿ ಆರೋಪ ಎದುರಿಸುತ್ತಿರುವ ಸಚಿವರು 150 ಮಂದಿ ಇದ್ದಾರೆ. ನೀವು ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಬಂದು ಕೂಗುತ್ತಿದ್ದೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಆಡಳಿತ ಮತ್ತು ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪ, ಗದ್ದಲದ ನಡುವೆ ಸಭಾಧ್ಯಕ್ಷರು ಅಧಿಕೃತ ಕಾರ್ಯಕಲಾಪಗಳನ್ನು ಕೈಗೆತ್ತಿಕೊಂಡು ವರದಿಗಳನ್ನು ಮಂಡಿಸಲು ಅವಕಾಶ ನೀಡಿದರು. ಬಳಿಕ ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು. ಪ್ರತಿಪಕ್ಷಗಳ ಧರಣಿ ಹಾಗೂ ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ನಡೆಯಿತು.
