ಬೆಂಗಳೂರು,ಆ.24-ನಗರದ ದಕ್ಷಿಣ ತಾಲ್ಲೂಕು ಸಿ.ಕೆ ತಾಂಡ್ಯದ ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧಿ ತಯಾರಿಕಾ ಜಾಲ ಪತ್ತೆಯಾದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಖಾಸಗಿ ಆಸ್ಪತ್ರೆಗಳ ಒಕ್ಕೂಟ ರೋಗಿಗಳ ಸುರಕ್ಷತಾ ದೃಷ್ಟಿಯಿಂದ ತನ್ನ ವ್ಯಾಪ್ತಿಯ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿದೆ.
ಸುಮಾರು 4 ಸಾವಿರಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳ ಮೆಡಿಸಿನ್ ಸ್ಟೋರ್, ಫಾರ್ಮಸಿ, ಔಷಧ ಖರೀದಿ ವಿಭಾಗ ಹಾಗೂ ಕ್ಲಿನಿಕಲ್ ವಿಭಾಗಗಳಲ್ಲಿ ಔಷಧಿಗಳ ದಾಖಲೆ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಲಾಗಿದೆ.ಈ ಖಾಸಗಿ ಆಸ್ಪತ್ರೆಗಳಿಗೆ ಸರಬರಾಜಾಗುವ ಔಷಧಿಗಳ ಬ್ಯಾಚ್ ನಂಬರ್, ಬ್ರ್ಯಾಂಡ್, ತಯಾರಿಕೆ ಹಾಗೂ ಮುಕ್ತಾಯದ ಅವಧಿಯನ್ನು ಕೂಲಂಕುಶವಾಗಿ ಪರಿಶೀಲಿಸುವಂತೆ ಮಾರ್ಗ ಸೂಚಿಯಲ್ಲಿ ವಿವರಿಸಲಾಗಿದೆ.
ನಕಲಿ ಔಷಧಿ ಪ್ರಕರಣದಲ್ಲಿ ಜಪ್ತಿಯಾಗಿರುವ ಔಷಧಿಗಳ ಬ್ಯಾಚ್ ನಂಬರ್‌ಗಳನ್ನು ಆಸ್ಪತ್ರೆಯಲ್ಲಿರುವ ಸ್ಟಾಕ್‌ನೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸಬೇಕು ಒಂದು ವೇಳೆ ಹೊಂದಾಣಿಕೆ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಔಷಧದ ಪ್ಯಾಕೇಜಿಂಗ್, ಲೇಬಲ್ ಅಥವಾ ವಯಲ್‌ನಲ್ಲಿ ಯಾವುದೇ ಅನುಮಾನಾಸ್ಪದ ಬದಲಾವಣೆ ಕಂಡು ಬಂದರೂ ಅವುಗಳನ್ನು ರೋಗಿಗಳಿಗೆ ನೀಡಬಾರದೆಂದು ಕಟ್ಟು ನಿಟ್ಟಿನ ಸೂಚನೆಯ ಅಂಶವನ್ನು ಮಾರ್ಗ ಸೂಚಿಯಲ್ಲಿ ಸೂಚಿಸಲಾಗಿದೆ.ಒಂದು ವೇಳೆ ಅನುಮಾನ ಕಂಡು ಬಂದರೆ ಅಂತಹ ಔಷಧಿಗಳನ್ನು ಸ್ಟಾಕ್‌ನಿಂದ ಪ್ರತ್ಯೇಕಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡ ಬೇಕು.
ಆಸ್ಪತ್ರೆಗಳಲ್ಲಿರುವ ಪ್ರತಿಯೊಂದು ಔಷಧಿ ಖರೀದಿಯ ಇನ್ವಾಯ್ಸನ್ನು ಕಡ್ಡಾಯವಾಗಿ ಸಂರಕ್ಷಿಸಬೇಕು. ಯಾವ ಬ್ಯಾಚ್‌ನ ಔಷಧಿ ಆಸ್ಪತ್ರೆಗೆ ಬಂದಿದೆ, ಅದರ ಬಳಕೆ ಎಲ್ಲಿ ಆಗಿದೆ ಎಂಬುವುದನ್ನು ಸುಲಭವಾಗಿ ಪತ್ತೆಹಚ್ಚುವ ವ್ಯವಸ್ಥೆ ಇರಬೇಕು.ಒಟ್ಟಾರೆ ನಗರದ ಹೊರ ವಲಯದಲ್ಲಿ ಪತ್ತೆಯಾಗಿರುವ ನಕಲಿ ಔಷಧ ಜಾಲದಿಂದ ಒಕ್ಕೂಟ ಮುನ್ನೆಚ್ಚರಿಕೆ ವಹಿಸಿ ದ್ದು, ಔಷಧಿ ಬಳಕೆ ಹಾಗೂ ಸಂಗ್ರಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದೆಂದು ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
