ನವದೆಹಲಿ, ಆ.24- ಕಾವೇರಿ ನೀರು ಹರಿಸುವಂತೆ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಆ.31ಕ್ಕೆ ಮುಂದೂಡಿದೆ.ನ್ಯಾ. ವಿಕ್ರಮ್‌ನಾಥ್ ಮತ್ತು ನ್ಯಾ. ಸಂದೀಪ್ ಮೆಹತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಇಂದು ವಿಚಾರಣೆ ಕೈಗೊಂಡು ಇಲ್ಲಿಯವರೆಗೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ಕುರಿತಂತೆ ಅಂಕಿ ಅಂಶಗಳನ್ನು ಪರಿಶೀಲಿಸಿತು.
ತಮಿಳುನಾಡು ಪರ ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್ ಅವರು, ರಾಜ್ಯಕ್ಕೆ ಕಾವೇರಿ ನೀರಾವರಿ ಪ್ರಾಧಿಕಾರ ಸೂಚಿಸಿದಷ್ಟು ನೀರು ಹರಿಸುತ್ತಿಲ್ಲವೆಂದು ವಾದ ಮಂಡಿಸಿದರು. ಆದರೆ ಅಂಕಿ ಅಂಶದಲ್ಲಿ ನೀರು ಬಿಟ್ಟಿರುವ ದಾಖಲೆ ಇದೆಯಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿದ್ದಾಗ, ಇಂದು ಬೆಳಗ್ಗಿನ ಅಂಕಿ ಅಂಶ ನೀಡಲಾಗಿದೆ. ನಿನ್ನೆ ಮತ್ತು ಹಿಂದಿನ ದಿನಗಳ ಮಾಹಿತಿ ಇಲ್ಲ ಎಂದರು.
ಈ ವೇಳೆ ಕರ್ನಾಟಕ ಪರ ವಕೀಲರಾದ ಶ್ಯಾಮ್ ದಿವಾನ್ ಸದ್ಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಅಂಕಿ ಅಂಶಗಳು ಲಭ್ಯವಿವೆ. ನೀರು ಹರಿಸಿಲ್ಲ ಎಂಬುವುದು ಸುಳ್ಳು, ನಾವು ನಮ ರಾಜ್ಯದ ರೈತರ ಹಿತ ಕಾಯುವ ಅಗತ್ಯವಿದೆ. ಜೊತೆಗೆ ಕುಡಿಯುವ ನೀರಿಗೆ ಹೆಚ್ಚಿನ ಅದ್ಯತೆ ನೀಡಬೇಕಾಗಿದೆ ಎಂದು ವಾದಿಸಿದರು.
ಸದ್ಯ ಆದೇಶವನ್ನು ಪಾಲಿಸಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ ನಾಳೆ ಸಿಡಬ್ಲ್ಯುಎಂಎ ಸಭೆ ನಡೆಯಲಿದೆ. ವಾಸ್ತವಾಂಶದ ಪರಿಶೀಲನೆ ನಡೆಯಲಿದೆ. ಈ ನಡುವೆ ಕರ್ನಾಟಕದಲ್ಲಿ ಎದುರಾಗಿರುವ ಬರದ ಬಗ್ಗೆಯೂ ಪರಿಗಣಿಸಬೇಕಾಗಿದೆ.
ಸದ್ಯದ ಅಂಕಿ ಅಂಶಗಳ ಪ್ರಕಾರ ತಮಿಳುನಾಡಿಗೆ ನೀರು ಹರಿಸಿದ್ದೇವೆಂದು ಎಂದು ಹೇಳಿದರು. ಎರಡೂ ರಾಜ್ಯದ ವಾದಗಳನ್ನು ಆಲಿಸಿದ ನ್ಯಾಯಪೀಠ ನವೀಕೃತ ಅಂಕಿಅಂಶಗಳೊಂದಿಗೆ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಆ.31ಕ್ಕೆ ವಿಚಾರಣೆ ಮುಂದೂಡಿದೆ.
