Homeರಾಜ್ಯಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಸಾಧ್ಯತೆ, ರೆಡ್‌ ಅಲರ್ಟ್‌ ಘೋಷಣೆ

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಸಾಧ್ಯತೆ, ರೆಡ್‌ ಅಲರ್ಟ್‌ ಘೋಷಣೆ

Heavy rain likely in coastal and hilly areas, red alert declared

ಬೆಂಗಳೂರು, ಜು.7- ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ.

ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡಿನ ಹಲವು ಪ್ರದೇಶಗಳಲ್ಲಿ ಬಲವಾದ ಗಾಳಿಯೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಮತ್ತುಮೀನುಗಾರರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಹಲವು ಜಿಲ್ಲೆಗಳ ಆಯ್ದ ತಾಲ್ಲೂಕುಗಳಲ್ಲಿ ಜಿಲ್ಲಾಡಳಿತವು ರಜೆ ಘೋಷಿಸಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಇನ್ನು ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಇದರೊಂದಿಗೆ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್‌ ಜಾರಿಗೊಳಿಸಲಾಗಿದೆ.

ಹಲವು ಕಡೆಗಳಲ್ಲಿ ಭಾರೀ ಮಳೆಯಿಂದಾಗಿ ಗುಡ್ಡಕುಸಿತದ ಭೀತಿ ಎದುರಾಗಿದೆ.ಬೆಳಗಾವಿ ಮತ್ತು ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲೂ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಸತತ ಮಳೆಯ ಪರಿಣಾಮವಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ.

ಜಲಾಶಯಗಳ ಭರ್ತಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು, ಜಲಾನಯನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿರುವುದು ಸಂತಸದ ವಿಷಯವಾಗಿದ್ದರೂ, ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯ ಆರ್ಭಟ ಜೋರಾಗಿದ್ದು, ಜಿಲ್ಲೆಯ 6 ತಾಲ್ಲೂಕುಗಳಲ್ಲಿ ರಜೆ ಘೋಷಿಸಲಾಗಿದೆ. ಮೂಡಿಗೆರೆ, ಕೊಪ್ಪ ಮತ್ತು ಎನ್‌.ಆರ್‌.ಪುರ ತಾಲ್ಲೂಕುಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ. ಶೃಂಗೇರಿ ತಾಲ್ಲೂಕಿನಲ್ಲಿ ಮಳೆಯ ತೀವ್ರತೆ ಹೆಚ್ಚಿರುವ ಕಾರಣ ಶಾಲೆ ಮತ್ತು ಕಾಲೇಜುಗಳೆರಡಕ್ಕೂ ರಜೆ ಘೋಷಿಸಲಾಗಿದೆ. ಕಳಸ ತಾಲ್ಲೂಕಿನಲ್ಲಿ ಅಂಗನವಾಡಿ ಸೇರಿದಂತೆ 1ರಿಂದ 7ನೇ ತರಗತಿವರೆಗಿನ ಪ್ರಾಥಮಿಕ ಶಾಲೆಗಳಿಗೆ ಮಾತ್ರ ರಜೆ ಅನ್ವಯವಾಗಲಿದೆ.

ಜೊತೆಗೆ ಚಿಕ್ಕಮಗಳೂರು ತಾಲ್ಲೂಕಿನ ಜಾಗರ, ವಸ್ತಾರೆ, ಖಾಂಡ್ಯ, ಆಲ್ದೂರು ಹಾಗೂ ಆವತಿ ಹೋಬಳಿಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಬಿರುಸು ಪಡೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲ್ಲೂಕುಗಳ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಜಿಲ್ಲೆಯ ಹಲವೆಡೆ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ ಮತ್ತು ಯಲ್ಲಾಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲೂ ಕಳೆದ ಐದು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ತಹಶೀಲ್ದಾರ್‌ ಸುಪ್ರಿತಾ ಆದೇಶಿಸಿದ್ದಾರೆ.

ಇನ್ನೊಂದೆಡೆ, ಬೆಳಗಾವಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಬೆಳಗಾವಿ ನಗರ ಹಾಗೂ ಖಾನಾಪುರ ತಾಲ್ಲೂಕಿನ ಎಲ್ಲಾ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಮೊಹಮದ್‌ ರೋಷನ್‌ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಗಾಜನೂರು ಬಳಿಯ ತುಂಗಾ ಜಲಾಶಯವು ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭರ್ತಿಯಾಗಿದೆ.

ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಒಟ್ಟು 22 ಗೇಟ್‌‍ಗಳನ್ನು ಮುಂಜಾನೆ ತೆರೆಯಲಾಗಿದ್ದು, ಸುಮಾರು 24,ವಾಹನ ಕ್ಯೂಸೆಕ್‌ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂ ಆವರಣದಲ್ಲಿರುವ ತುಂಗಾದೇವಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಗಿದೆ.

ತುಂಗಾ ಜಲಾಶಯದ ಎಲ್ಲಾ ಗೇಟ್‌‍ಗಳಿಂದ ನೀರು ಧುಮುಕುತ್ತಿರುವುದರಿಂದ ಇಡೀ ವಾತಾವರಣ ಹಾಲಿನ ನೊರೆಯಂತೆ ಸುಂದರವಾಗಿ ಕಂಗೊಳಿಸುತ್ತಿದೆ. ಮಳೆಯ ನಡುವೆಯೂ ಡ್ಯಾಂ ಸೌಂದರ್ಯ ಇಮಡಿಯಾಗಿದೆ. ನಿರಂತರ ಮಳೆಯಿಂದಾಗಿ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಶಿವಮೊಗ್ಗ ಮಾತ್ರವಲ್ಲದೆ ದಾವಣಗೆರೆ, ಹಾವೇರಿ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರ ಕೃಷಿ ಚಟುವಟಿಕೆಗಳಿಗೆ ಭಾರೀ ಅನುಕೂಲವಾಗಲಿದೆ.

ಮಳೆ ತಡವಾಗಿದ್ದರಿಂದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಈಗ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ. ಕಬಿನಿ ಜಲಾಶಯದ ನೀರಿನ ಮಟ್ಟ 59.32 ಅಡಿಯಷ್ಟಿದೆ. ಪ್ರಸ್ತುತ ಜಲಾಶಯದಲ್ಲಿ 7.07 ಟಿಎಂಸಿ ನೀರು ಸಂಗ್ರಹವಿದ್ದು, 4,394 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ.

ನದಿಗೆ 500 ಕ್ಯೂಸೆಕ್‌ ನೀರನ್ನು ಬಿಡಲಾಗುತ್ತಿದ್ದು, ಕಾಲುವೆಗಳಿಗೆ ಸದ್ಯ ನೀರು ಹರಿಸುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಕಬಿನಿಯಲ್ಲಿ ನೀರಿನ ಮಟ್ಟ ಹಾಗೂ ಒಳಹರಿವು ಕಡಿಮೆ ಇದೆ. ಕಳೆದ 24 ಗಂಟೆಗಳಲ್ಲಿ ಇಲ್ಲಿ 30 ಮಿ.ಮೀ ಮಳೆ ದಾಖಲಾಗಿದೆ. ರಾಜ್ಯಾದ್ಯಂತ ಮುಂಗಾರು ಮಳೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೆಆರ್‌ಎಸ್‌‍, ಭದ್ರಾ ಮತ್ತು ಹೇಮಾವತಿ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆಯಾಗುವ ನಿರೀಕ್ಷೆಯಿದೆ.
ರಾಜ್ಯದ ಹಲವು ಭಾಗಗಳಲ್ಲಿ ಇನ್ನೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತಗಳು ಕಟ್ಟೆಚ್ಚರ ವಹಿಸಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್‌ ಏರಿಕೆಯಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ.

ಮಳೆಯ ಆರ್ಭಟಕ್ಕೆ ಮರಗಳು ಧರೆಗುರುಳಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರಮುಖ ಸೇತುವೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಜಿಲ್ಲಾಡಳಿತಗಳು ತಗ್ಗು ಪ್ರದೇಶದ ಜನರು, ಪ್ರವಾಸಿಗರು ಮತ್ತು ಮೀನುಗಾರರಿಗೆ ಸುರಕ್ಷಿತವಾಗಿರುವಂತೆ ಸೂಚನೆ ನೀಡಿವೆ.

RELATED ARTICLES

Latest News