ಬೆಂಗಳೂರು, ಜು.8- ಜಿಟಿಜಿಟಿ ಮಳೆಯ ನಡುವೆ ಲೋಕಾಯುಕ್ತ ಪೊಲೀಸರು ಇಂದು ಬೆಳಿಗ್ಗೆ ರಾಜ್ಯದ ಹಲವೆಡೆ ಮಿಂಚಿನ ದಾಳಿ ನಡೆಸಿ 10 ಸರ್ಕಾರಿ ಅಧಿಕಾರಿಗಳ ಅಕ್ರಮ ಸಂಪಾದನೆಯನ್ನು ಬಯಲಿಗೆಳೆದಿದ್ದಾರೆ.ಅಕ್ರಮ ಸಂಪತ್ತಿನ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಇಂದು ರಾಜ್ಯದ 30ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಬೆಂಗಳೂರು, ಚಿತ್ರದುರ್ಗ, ತುಮಕೂರು, ಕಲಬುರಗಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ನಡೆದಿದೆ.ರಾಯಚೂರಿನಲ್ಲಿ ಕೃಷ್ಣಾ ಜಲಭಾಗ್ಯ ನಿಗಮ ನಾರಾಯಣಪುರ ಬಲದಂಡೆ ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಬಸನಗೌಡ ಪಾಟೀಲ್ ಅವರ ಎಚ್‌ಆರ್‌ಬಿ ಲೇಔಟ್‌ನಲ್ಲಿರುವ ಮನೆ ಚಿಕ್ಕಹೊನ್ನಕುಣಿಯಲ್ಲಿರುವ ಇಇ ಕಚೇರಿ, ಇವರ ಅಣ್ಣನ ಮನೆ ಹಾಗೂ ಇವರ ಪತ್ನಿಯವರ ಹೆಸರಿನಲ್ಲಿರುವ ಶ್ರೀ ಫಿಲ್ಲಿಂಗ್ ನಯಾರ ಪೆಟ್ರೋಲ್‌ಬಂಕ್ ಹಾಗೂ ಪಕ್ಕದಲ್ಲೇ ಇರುವ ಬಾರ್ ರೆಸ್ಟೋರೆಂಟ್ ಮತ್ತು ಗೋಡನ್‌ಗಳ ಮೇಲೆಯೂ ದಾಳಿ ನಡೆದಿದೆ.
ಇವರ ಯಕ್ಲಾಸಪುರ ಪಕ್ಕದ ತೋಟದ ಮನೆಯಲ್ಲೂ ಕೂಡ ತಪಾಸಣೆ ನಡೆದಿದ್ದು, ಅಪಾರ ಪ್ರಮಾಣದ ಆಸ್ತಿ ದಾಖಲೆಗಳು, ನಗದು ಹಣ, ಚಿನ್ನಾಭರಣ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.ಅಧಿಕಾರಿಗಳು ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿ ಮಹಡಿ ಮೇಲೆ ಓಡಿಹೋದ ಘಟನೆ ನಡೆದಿದೆ. ಮನೆ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಅಕ್ರಮ ಸಂಪತ್ತು ಬೆಳಕಿಗೆ ಬಂದಿರುವುದು ತಿಳಿದುಬಂದಿದೆ.
ಕಲಬುರಗಿಯಲ್ಲಿ ಜೇಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಕಚೇರಿ ಸೇರಿ 7 ಕಡೆ ದಾಳಿ ನಡೆಸಲಾಗಿದೆ. ಕಲಬುರಗಿ ನಗರದಲ್ಲಿರುವ ಜಾಗೃತಿ ಕಾಲೋನಿಯ ಮನೆ, ಬಸವ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್, ಕೊತ್ತಂಬರಿ ಲೇಔಟ್‌ನಲ್ಲಿರುವ ಕಚೇರಿ, ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಗ್ರಾಮದಲ್ಲಿರುವ ಮನೆ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ.
ಇವರು ಕೈಗಾರಿಕಾ ಪ್ರದೇಶದಲ್ಲೂ ಕಾರ್ಖಾನೆಯೊಂದಕ್ಕೆ ತಮ ಜಾಗವನ್ನು ನೀಡಿದ್ದಾರೆ ಮತ್ತು ಜಾಗೃತಿ ಕಾಲೋನಿಯಲ್ಲಿ ಪ್ಲಾಟಿನಂ ಸ್ಟುಡಿಯೋವನ್ನು ಕೂಡಾ ಅಮೃತರಾವ್ ಹೊಂದಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ 20 ಎಕರೆಗೂ ಹೆಚ್ಚು ಕೃಷಿ ಭೂಮಿ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ಇವರು ತೊಡಗಿರುವುದು ಬೆಳಕಿಗೆ ಬಂದಿದೆ.
ಮನೆಯಲ್ಲಿ ನಗದು, ಚಿನ್ನಾಭರಣ ಸೇರಿದಂತೆ ಚರ ಚಿರಾಸ್ತಿಗಳನ್ನು ಪತ್ತೆ ಹಚ್ಚಿರುವ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರಕುಮಾರ್, ಕೆ.ಆರ್.ಐ.ಡಿ.ಎಲ್‌ನ ಬೆಂಗಳೂರು ನಗರ ವಲಯದ ಸೂಪರಿಡೆಂಡೆಂಟ್ ಇಂಜಿನಿಯರ್ ಪ್ರವೀಣ್ ಬಿ.ಶ್ರೀಹರಿ ಹಾಗೂ ಕುಂಬಳಗೋಡು ಪಂಚಾಯಿತಿಯ ಪಿಡಿಒ ತಿಮೇಗೌಡ ಅಲಿಯಾಸ್ ತಿಮಯ್ಯ ಅವರ ತೋಟದ ಮನೆ, ಅಣ್ಣ ಹಾಗೂ ಅಕ್ಕನ ಮನೆಯ ಮೇಲೂ ಬೆಂಗಳೂರು ದಕ್ಷಿಣ ಎಸ್ಪಿ ಸ್ನೇಹ ನೇತೃತ್ವದಲ್ಲಿ 4ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ.
ಪಿಡಬ್ಲ್ಯೂಡಿಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರಕುಮಾರ್ ಅವರ ನಿವಾಸದಲ್ಲೂ ಕೂಡಾ ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಅದರ ಮೌಲ್ಯವನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಕೆಆರ್‌ಡಿಐಎಲ್‌ನ ಸೂಪರಿಡೆಂಡೆಂಟ್ ಇಂಜಿನಿಯರ್ ಪ್ರವೀಣ್ ಬಿ.ಶ್ರೀಹರಿ ಅವರ ಮನೆಯಲ್ಲಿ ಕೆಲವು ವಿದೇಶಿ ಕರೆನ್ಸಿಗಳು, ಅಪಾರ ಚಿನ್ನಾಭರಣ ಹಾಗೂ ಕೃಷಿ ಜಮೀನು ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹಲವೆಡೆ ವಾಣಿಜ್ಯ ಸಂಕಿರಣಗಳು ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಜಮೀನು ಹೊಂದಿರುವುದು ಕೂಡಾ ಬೆಳಕಿಗೆ ಬಂದಿದೆ.
ತುಮಕೂರಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಧುಸೂದನ್ ಅವರ ನಗರದಲ್ಲಿರುವ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಇವರ ಸಂಬಂಧಿಗಳ ಮನೆಯ ಮೇಲೂ ದಾಳಿ ನಡೆಸಲಾಗಿದ್ದು, ಹಲವೆಡೆ ಕೃಷಿ ಜಮೀನು ಹಾಗೂ ವಾಸದ ಮನೆಗಳನ್ನು ಹೊಂದಿರುವುದು ಗೊತ್ತಾಗಿದೆ.
ಶಿವಮೊಗ್ಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಅಂಗಡಿ ಅವರ ಮನೆ, ಕಚೇರಿ ಸೇರಿದಂತೆ ಒಟ್ಟು ಐದು ಕಡೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆಲವು ಹಣಕಾಸು ವ್ಯವಹಾರದಲ್ಲಿ ಭಾಗಿಯಾಗಿರುವುದು ಸೇರಿದಂತೆ ಅವರ ಪತ್ನಿಯ ಹೆಸರಿನಲ್ಲಿ ಕೈಗಾರಿಕಾ ಘಟಕವೂ ಕೂಡಾ ಪತ್ತೆಯಾಗಿದೆ. ಬ್ಯಾಂಕ್ ದಾಖಲೆಗಳು, ಚಿರಾಸ್ತಿ ದಾಖಲೆಗಳು, ಹೂಡಿಕೆ ಸೇರಿದಂತೆ ಪ್ರಮುಖ ಗಳಿಕೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಅಪಾರ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿತ್ರದುರ್ಗದ ತೋಟಗಾರಿಕಾ ಇಂಜಿನಿಯರಿಂಗ್ ವಿವಿಯ ಸಹಾಯಕ ಪ್ರೊಫೆಸರ್ ಎಂ.ಶಂಕರ್ ಅವರ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದಲ್ಲಿರುವ ಮನೆ, ಚಿತ್ರದುರ್ಗದಲ್ಲಿರುವ ನಿವಾಸ ಹಾಗೂ ಕಚೇರಿಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಿವಿಧೆಡೆ ಕೃಷಿ ಜಮೀನು, ನಿವೇಶನಗಳು, ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ದಾಖಲೆ ಪತ್ರಗಳು ಪತ್ತೆಯಾಗಿವೆ.ಚಿತ್ರದುರ್ಗದ ಜಲಾನಯನ ಅಭಿವೃದ್ಧಿ ಇಲಾಖೆಯ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರಿಗೂ ಲೋಕಾಯುಕ್ತ ಬಿಸಿ ಮುಟ್ಟಿಸಿದೆ.
ಬಲೆಗೆ ಬಿದ್ದವರು :
*ಬಸನಗೌಡ ಪಾಟೀಲ್- ಕಾರ್ಯಕಾರಿ ಎಂಜಿನಿಯರ್-ಕೃಷ್ಣ ಜಲಭಾಗ್ಯ ನಿಗಮ, ರಾಯಚೂರು
- ಎಂ.ಶಂಕರ್- ಸಹಾಯಕ ಉಪನ್ಯಾಸಕ ಕೃಷಿ ಮತ್ತು ತೋಟಗಾರಿಕಾ ವಿವಿ, ಚಿತ್ರದುರ್ಗ
- ಬಿ.ಎಚ್.ದುಗ್ಗಪ್ಪ- ವಲಯ ಅರಣ್ಯ ಸಂರಕ್ಷಣಾಧಿಕಾರಿ, ಜಲಾನಯನ ಅಭಿವೃದ್ಧಿ ವಿಭಾಗ, ಚಿತ್ರದುರ್ಗ
- ನರೇಂದ್ರಕುಮಾರ್- ಕಾರ್ಯಪಾಲಕ ಅಭಿಯಂ ತರ, ಲೋಕೋ ಪಯೋಗಿ ಇಲಾಖೆ, ಬೆಂಗಳೂರು
- ಪ್ರವೀಣ್ ಬಿ.ಶ್ರೀಹರಿ – ಸೂಪರಿಡೆಂಡೆಂಟ್ ಎಂಜಿನಿ ಯರ್, ಬೆಂಗಳೂರು ವಲಯ ಕಚೇರಿ
- ಡಿ.ಆರ್.ಪುಷ್ಪ – ಉಪನಿರ್ದೇ ಶಕರು(ಆಡಳಿತ), ಎಪಿಎಂಸಿ, ಬೆಂಗಳೂರು
- ಎನ್.ಮಧುಸೂದನ್- ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ತುಮಕೂರು
- ತಿಮೇಗೌಡ- ಪಿಡಿಒ ಕುಂಬಳ ಗೋಡು, ಬೆಂಗಳೂರು ದಕ್ಷಿಣ
- ಕಿರಣ್ ಅಂಗಡಿ- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ
- ಅಮೃತರಾವ್- ಸಹಾಯಕ ಕಾರ್ಯಪಾಲಕ ಅಭಿಯಂತರ ಜೆಸ್ಕಾಂ, ಕಲಬುರಗಿ
