ಬೆಂಗಳೂರು, ಜು.8- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜು.11ರಂದು ಬೆಳಿಗ್ಗೆ 11 ಗಂಟೆಗೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಮಭಿಮಾನದ ಅಭಿನಂದನೆ ಕಾರ್ಯಕ್ರಮವನ್ನು ಹಮಿಕೊಳ್ಳ ಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹತ್ವದ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಹಾಗೂ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ 2026ನೇ ವರ್ಷದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವ 10 ಜಿಲ್ಲೆಗಳ ಸುಮಾರು 3,000 ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಈ ವರ್ಷದ ಪುರಸ್ಕಾರಕ್ಕೆ ರಾಜ್ಯಾದ್ಯಂತ ಒಟ್ಟು 11,000 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ವಿವಿಧ ಇಲಾಖೆಗಳ ಪದಾಧಿಕಾರಿಗಳು, ನೌಕರರು ಮತ್ತು ಪೋಷಕರು ಆಗಮಿಸಲಿದ್ದಾರೆ. ಅಭಿನಂದನಾ ಕಾರ್ಯಕ್ರಮದಲ್ಲಿ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗುವುದು ಎಂದು ಷಡಕ್ಷರಿ ತಿಳಿಸಿದರು. ಹಳೆ ಪಿಂಚಣಿ ಯೋಜನೆ ಮರುಜಾರಿ : ಎನ್.ಪಿ.ಎಸ್. ಸಮಿತಿಯಿಂದ ತಕ್ಷಣವೇ ವರದಿ ಪಡೆದುಕೊಂಡು, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರು ಜಾರಿಗೊಳಿಸಬೇಕು ಮತ್ತು ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಪತ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿವಿಧ ಇಲಾಖೆಗಳ ಎಸ್ಐಆರ್ ಸಮೀಕ್ಷಾ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿ ಎದುರಿಸುತ್ತಿರುವ ತೀವ್ರ ಮಾನಸಿಕ ಒತ್ತಡ, ಆರೋಗ್ಯ ಮತ್ತು ಸುರಕ್ಷತೆಯ ಸಮಸ್ಯೆಗಳ ಕುರಿತು ಸಂಘವು ಕಳವಳ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ.
ಒತ್ತಡ ಮುಕ್ತ ಕಾರ್ಯದಿನ :
ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ಸಮೀಕ್ಷೆಯ ಕಾರ್ಯದಿನಗಳನ್ನು ನಿಗದಿಪಡಿಸಿ, ನೌಕರರ ಮೇಲಿನ ಅನಗತ್ಯ ಒತ್ತಡವನ್ನು ತಪ್ಪಿಸಬೇಕು. ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಸಂಘಟನೆಗಳು ಹಸ್ತಕ್ಷೇಪ ಮಾಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಷಡಕ್ಷರಿ ಅವರು ಆಗ್ರಹಿಸಿದರು.
