Homeರಾಜ್ಯಕಾಡಾನೆ ಸ್ಥಳಾಂತರಕ್ಕೆ ಶಾಸಕರ ವಿರೋಧ : ರಾಜೀನಾಮೆ ಎಚ್ಚರಿಕೆ

ಕಾಡಾನೆ ಸ್ಥಳಾಂತರಕ್ಕೆ ಶಾಸಕರ ವಿರೋಧ : ರಾಜೀನಾಮೆ ಎಚ್ಚರಿಕೆ

ಚಿಕ್ಕಮಗಳೂರು, ನ.23- ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಅಟ್ಟಿರುವ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್‌ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜನರ ಜೀವ ರಕ್ಷಣೆಗಾಗಿ ಅಗತ್ಯವಿದ್ದರೆ ರಾಜೀನಾಮೆ ನೀಡುವುದಕ್ಕೂ ಸಿದ್ಧ ಎಂದು ಶಾಸಕರಾದ ತಮ್ಮಯ್ಯ, ನಯನ ಮೋಟಮ್ಮ ಹಾಗೂ ಟಿ.ಡಿ. ರಾಜೇಗೌಡ ಎಚ್ಚರಿಕೆ ನೀಡಿದ್ದಾರೆ.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಾನವ-ಕಾಡಾನೆ ಸಂಘರ್ಷದಿಂದ 16 ಮಂದಿ ಮೃತಪಟ್ಟಿದ್ದಾರೆ. ಒಟ್ಟು 58 ಕಾಡಾನೆಗಳ ಪೈಕಿ ಎರಡು ಆನೆಗಳನ್ನು ಸೆರೆಹಿಡಿಯಲಾಗಿದ್ದು, ಉಳಿದ 56 ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಗೆ ಆನೆಗಳನ್ನು ಕಳುಹಿಸಬಾರದೆಂದು ಸರ್ಕಾರಕ್ಕೆ ಪತ್ರ ನೀಡಿದ್ದರೂ, ತಮ್ಮ ಗಮನಕ್ಕೆ ಬಾರದಂತೆ ಆನೆಗಳನ್ನು ಮೂಡಿಗೆರೆ ಭಾಗಕ್ಕೆ ಅಟ್ಟಲಾಗಿದೆ ಎಂದು ಆರೋಪಿಸಿದರು.

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಮುತ್ತೋಡಿ ಭಾಗದಲ್ಲೇ 450ಕ್ಕೂ ಹೆಚ್ಚು ಆನೆಗಳಿದ್ದು, ಮತ್ತಷ್ಟು ಆನೆಗಳನ್ನು ಈ ಭಾಗಕ್ಕೆ ಓಡಿಸುವುದು ಸರಿಯಲ್ಲ. ಜನರ ಜೀವಕ್ಕೆ ಅಪಾಯ ಉಂಟುಮಾಡುವ ಕ್ರಮವನ್ನು ಸಹಿಸುವುದಿಲ್ಲ ಎಂದರು.

ಶಾಸಕಿ ನಯನ ಮೋಟಮ್ಮ ಮಾತನಾಡಿ, ಜನರ ಹಿತಕ್ಕಾಗಿ ಅಧಿಕಾರ ತ್ಯಜಿಸಲು ಸಿದ್ಧರಿದ್ದೇವೆ. ಕಾಡಾನೆಗಳನ್ನು ವಾಪಸ್‌ ಕಳುಹಿಸದಿದ್ದರೆ ರಾಜೀನಾಮೆ ನೀಡುವುದು ಖಚಿತ ಎಂದು ತಿಳಿಸಿ, ಸಿದ್ಧಪಡಿಸಿಕೊಂಡಿದ್ದ ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದರು.

ಶಾಸಕ ತಮ್ಮಯ್ಯ ಮಾತನಾಡಿ, ಬಲವಂತವಾಗಿ ಆನೆಗಳನ್ನು ಅಟ್ಟುವ ಕಾರ್ಯಾಚರಣೆಯಿಂದ ರೈತರು ಹಾಗೂ ಜನಸಾಮಾನ್ಯರ ಜೀವಕ್ಕೆ ಅಪಾಯ ಎದುರಾಗಿದೆ. ಸರ್ಕಾರ ಕೂಡಲೇ ಸ್ಥಳಾಂತರ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.

RELATED ARTICLES

Latest News