ನವದೆಹಲಿ, ನ.23- ದೇಶದ ಜನಪ್ರಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಿಸ್ಲೆರಿ ಕಂಪನಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಬಿಗ್ ಶಾಕ್ ನೀಡಿದೆ.
ಕಂಪನಿಯ ಆವರಣದಿಂದ ಸಂಗ್ರಹಿಸಲಾದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಗಳು ಪ್ರಯೋಗಾಲಯದ ಸುರಕ್ಷತಾ ಪರೀಕ್ಷೆಗಳಲ್ಲಿ ವಿಫಲವಾಗಿದ್ದು, ನೀರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಹಾನಿಕಾರಕ ರಾಸಾಯನಿಕ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಎಫ್‌ಎಸ್‌ಎಸ್‌ಎಐ ಅನುಮತಿ ನೀಡಿದೆ.
ಎಫ್‌ಎಸ್‌ಎಸ್‌ಎಐ ನೀಡಿರುವ ಮಾಹಿತಿಯ ಪ್ರಕಾರ, ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ಆವರಣದಿಂದ ಖನಿಜಯುಕ್ತ ನೀರನ್ನು ಹೊರತುಪಡಿಸಿದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆರಂಭಿಕ ಪ್ರಯೋಗಾಲಯ ಪರೀಕ್ಷೆಯಲ್ಲಿ ನೀರಿನಲ್ಲಿ ಬ್ರೋಮೇಟ್ ಅಂಶವು ನಿಗದಿತ ಸುರಕ್ಷತಾ ಮಿತಿಯನ್ನು ಮೀರಿರುವುದು ಪತ್ತೆಯಾಗಿತ್ತು. ಹೀಗಾಗಿ ಮಾದರಿಯನ್ನು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ಅಡಿಯಲ್ಲಿ ಅಸುರಕ್ಷಿತ ಎಂದು ಘೋಷಿಸಲಾಗಿತ್ತು.
ಮರುಪರೀಕ್ಷೆಯಲ್ಲೂ ಸುರಕ್ಷತಾ ಉಲ್ಲಂಘನೆ ಪತ್ತೆ
ಆರಂಭಿಕ ಪರೀಕ್ಷೆಯ ವರದಿಯನ್ನು ಪ್ರಶ್ನಿಸಿ ಬಿಸ್ಲೆರಿ ಕಂಪನಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಮಾದರಿಯನ್ನು ಹೆಚ್ಚಿನ ಪರಿಶೀಲನೆಗಾಗಿ ಉಲ್ಲೇಖಿತ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಮರುಪರೀಕ್ಷೆಯಲ್ಲಿಯೂ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಪತ್ತೆಯಾಗಿದ್ದು, ಮಾದರಿಯನ್ನು ಮತ್ತೊಮ್ಮೆ ಅಸುರಕ್ಷಿತ ಎಂದು ಪ್ರಯೋಗಾಲಯ ಘೋಷಿಸಿದೆ ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.
ಈ ಪರೀಕ್ಷಾ ವರದಿಗಳ ಆಧಾರದ ಮೇಲೆ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಬಿಸ್ಲೆರಿ ಕಂಪನಿ ವಿರುದ್ಧ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ-2006ರ ಅಡಿಯಲ್ಲಿ ಮೊಕದ್ದಮೆ ಹೂಡಲು ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ.
