Homeಮನರಂಜನೆಗಂಧದಗುಡಿ ಸಿನಿ ಹಬ್ಬದಲ್ಲಿ ನಟಿ ಸುಧಾರಾಣಿಗೆ ಜೀವಮಾನ ಸಾಧನೆ ಪ್ರಶಸ್ತಿ ಗರಿ

ಗಂಧದಗುಡಿ ಸಿನಿ ಹಬ್ಬದಲ್ಲಿ ನಟಿ ಸುಧಾರಾಣಿಗೆ ಜೀವಮಾನ ಸಾಧನೆ ಪ್ರಶಸ್ತಿ ಗರಿ

ಬೆಂಗಳೂರು, ನ.23- ಕಳೆದ ಐದು ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಮೈಸೂರು ಸಿನಿಮಾ ಸೊಸೈಟಿ, ಈ ಬಾರಿ ಬೆಂಗಳೂರಿನಲ್ಲಿ ಗಂಧದಗುಡಿ ಸಿನಿಹಬ್ಬ ಹೆಸರಿನಲ್ಲಿ ಎರಡು ದಿನಗಳ ಕಿರುಚಿತ್ರೋತ್ಸವವನ್ನು ಆಯೋಜಿಸಿತ್ತು.

ನಗರದ ಎಫ್‌.ಕೆ.ಸಿ.ಸಿ.ಐ. ಆವರಣದಲ್ಲಿರುವ ‘ಸರ್‌. ಎಂ. ವಿಶ್ವೇಶ್ವರಯ್ಯ ಆಡಿಟೋರಿಯಂ’ನಲ್ಲಿ ಇತ್ತೀಚೆಗೆ ನಡೆದ ‘ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವವನ್ನು ನಟ ರೋರಿಂಗ್‌ ಸ್ಟಾರ್‌ ಶ್ರೀಮುರಳಿ, ನಟಿ ಕಾರುಣ್ಯಾ ರಾಮ್‌, ಹಿರಿಯ ನಟ ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಗಣ್ಯರು ಉದ್ಘಾಟಿಸಿದರು.

ಗಂಧದಗುಡಿ ಸಿನಿಹಬ್ಬ ಕಿರುಚಿತ್ರೋತ್ಸವದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ಸುಮಾರು 30ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರದರ್ಶನಗೊಂಡವು. ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಂದ ಸುಮಾರು 12 ವಿಭಾಗಗಳಿಗೆ ಆಯ್ಕೆಯಾದ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ನಮ್ಮ ಸಂಸ್ಕೃತಿ, ಜನಪದ, ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಸಿನಿಮಾದ ಮೂಲಕ ತಲುಪಿಸಬಹುದು. ಮೈಸೂರು ಸಿನಿಮಾ ಸೊಸೈಟಿ ಇಂತಹ ಪರಿಣಾಮಕಾರಿ ಮಾಧ್ಯಮವನ್ನು ಬಳಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಮೈಸೂರು ಸಿನಿಮಾ ಸೊಸೈಟಿಯ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ಸುಧಾರಾಣಿ, ಮೈಸೂರು ಸಿನಿಮಾ ಸೊಸೈಟಿಯ ಮೂಲಕ ಇಂತಹದ್ದೊಂದು ಗೌರವ ಸಿಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಾನು ಮಾಡಿದ ಪ್ರತಿಯೊಂದು ಪಾತ್ರವೂ ನನಗೆ ಜೀವ ತುಂಬಿದೆ. ನನ್ನ ಜೀವನಕ್ಕೆ ಹೊಸ ಅಧ್ಯಾಯ ಕೊಟ್ಟಿವೆ. ಚಿತ್ರರಂಗಕ್ಕೆ ಬಾಲನಟಿಯಾಗಿ ಬಂದು ನಲವತ್ತು ವರ್ಷವಾದರೂ, ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ, ಅಭಿಮಾನ ಹೆಚ್ಚಾಗುತ್ತಿದೆ. ಅದಕ್ಕೆ ನಾನು ಯಾವಾಗಲೂ ಚಿರಋಣಿ. ಇದನ್ನು ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಮಾರೋಪ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ನಿರ್ದೇಶಕರಾದ ಪ್ರವೀಣ್‌ ಕೃಪಾಕರ್‌, ನಂದಕಿಶೋರ್‌, ಚೇತನ್‌ ಕುಮಾರ್‌, ಮಯೂರ್‌ ರಾಘವೇಂದ್ರ, ನಟಿಯರಾದ ಹರಿಣಿ ಶ್ರೀಕಾಂತ್‌, ಐಶ್ವರ್ಯಾ ನಾಗ್‌, ರೆಮೋಲಾ, ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌, ಮೈಸೂರು ಸಿನಿಮಾ ಸೊಸೈಟಿ ಅಧ್ಯಕ್ಷ ಚೇತನ್‌ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದರು.

RELATED ARTICLES

Latest News