ಬೆಂಗಳೂರು, ಜು.8- ಫುಟ್‌ಪಾತ್ ಒತ್ತುವರಿ ಹಾಗೂ ಬೀದಿಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕ್ರಮವನ್ನು ವಿರೋಧಿಸಿ, ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.2023-24ರಲ್ಲಿ ಸಮೀಕ್ಷೆ ನಡೆಸಿ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ.
ಸಮೀಕ್ಷೆಯೂ ಸಮರ್ಪಕವಾಗಿ ನಡೆದಿಲ್ಲ. ಅರೆಬರೆ ಮಾಹಿತಿ ಕಲೆ ಹಾಕಿ ಗುರುತಿನ ಕಾರ್ಡ್ ನೀಡಲಾಗಿದೆ. ಇನ್ನೂ ಕೆಲವರಿಗೆ ಯಾವುದೇ ದಾಖಲೆಗಳಿಲ್ಲ. 2014ರ ಬೀದಿಬದಿಯ ವ್ಯಾಪಾರಿಗಳ ಹಿತರಕ್ಷಣೆ ಕಾಯ್ದೆಯ ಸೆಕ್ಷನ್ 18ರ ಪ್ರಕಾರ ಯಾವ ರಸ್ತೆಯಲ್ಲಿ ವ್ಯಾಪಾರ ಮಾಡಬೇಕು ಎಂಬುದನ್ನು ಸ್ಥಳೀಯ ಸಂಸ್ಥೆಯಲ್ಲಿರುವ ಸಮಿತಿ ನಿರ್ಧರಿಸಬೇಕು. ಸಚಿವರು, ಶಾಸಕರಿಗೆ ಈ ಅಧಿಕಾರ ಇಲ್ಲ. ಸಚಿವ ಕೃಷ್ಣಭೈರೇಗೌಡ ಅವರು, ತೆಗೆದುಕೊಂಡಿರುವ ನಿರ್ಧಾರ ನಿಯಮ ಬಾಹಿರವಾಗಿದೆ ಎಂದು ಆರೋಪಿಸಿದರು.
ಬೀದಿಬದಿಯ ವ್ಯಾಪಾರಿಗಳಿಗೆ ನಿರ್ಧಿಷ್ಟ ಜಾಗ ಗುರುತಿಸಬೇಕು ಮತ್ತು ಅಗತ್ಯ ನೆರವು ನೀಡಬೇಕೆಂದು ಬಿಬಿಎಂಪಿಯ ವಲಯ ಆಯುಕ್ತರಿಗೆ ಮತ್ತು ವಿಶೇಷ ನ್ಯಾಯಾಧಿಕಾರಿಗಳಿಗೆ ಹಲವಾರು ಬಾರಿ ಈ ಬಗ್ಗೆ ಮನವಿ ಮಾಡಿದ್ದೇವೆ.
ಈಗ ಏಕಾಏಕಿ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವು ಮಾಡಿಸಲಾಗಿದೆ. ನಮಗೂ ಗೌರವಯುತವಾಗಿ ಬದುಕುವ ಹಕ್ಕಿದೆ. ಜೀವನೋಪಾಯಕ್ಕೆ ಧಕ್ಕೆ ಮಾಡಿದರೆ, ಮರಣಶಾಸನ ಮಾಡಿದಂತೆ. ನಾವು ಕಳ್ಳರಲ್ಲ, ಭ್ರಷ್ಟಚಾರಿಗಳಲ್ಲ, ನಯವಂಚಕರಲ್ಲ. ಬೀದಿಬದಿ ವ್ಯಾಪಾರ ಮಾಡಿ ಗೌರವಯುತವಾಗಿ ಬದುಕುತ್ತಿದ್ದೇವೆ ಎಂದು ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ವ್ಯಕ್ತಪಡಿಸಲಾಗಿದೆ.
ಬಸವನಗುಡಿಯ ಎನ್‌ಆರ್ ಕಾಲೋನಿಯಲ್ಲಿ ಬೀದಿಬದಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಾವು ರಾಜೀವ್‌ಗಾಂಧಿ ಕಾಲದಿಂದಲೂ 35 ವರ್ಷಗಳಿಂದ ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದೇನೆ. ನಾಲ್ಕು ಹೆಣ್ಣು ಮಕ್ಕಳನ್ನು ಓದಿಸಿ, ಇಬ್ಬರಿಗೆ ಮದುವೆ ಮಾಡಿದ್ದೇನೆ. ನನಗೆ ಈ ವೃತ್ತಿ ಬಿಟ್ಟು ಬೇರೆ ಗೊತ್ತಿಲ್ಲ , ಈಗ ಅಲ್ಲಿಂದ ತೆರವು ಮಾಡಿಸಿದರೆ, ನಾನು ಏನು ಮಾಡಬೇಕೆಂದು ಪ್ರಶ್ನಿಸಿದ್ದಾರೆ.
ಆರ್‌ಅರ್‌ನಗರದಲ್ಲಿ ಟೆಂಪೋಗಾಡಿಯಲ್ಲಿ ಈರುಳ್ಳಿ ವ್ಯಾಪಾರ ನಡೆಸುವ ವ್ಯಕ್ತಿಯೊಬ್ಬರು ನಮಗೆ ನಿರ್ಧಿಷ್ಟ ಜಾಗದಲ್ಲಿ ಗ್ರಾಹಕರು ಹೊಂದಾಣಿಕೆಯಾಗಿರುತ್ತಾರೆ. ಈಗ ಬೇರೆ ಕಡೆ ಹೋಗಿ ಎಂದರೆ ಜನ ಬರುವುದಿಲ್ಲ, ವ್ಯಾಪಾರವೂ ಆಗುವುದಿಲ್ಲ ಮುಂದಿನ ಬದುಕು ಹೇಗೆ? ಎಂಬ ಚಿಂತೆ ಕಾಡುತ್ತಿದೆ ಎಂದಿದ್ದಾರೆ.
ಮತ್ತೊಬ್ಬ ಮಹಿಳೆ ಮಾತನಾಡಿ, ನಾವು ದೈನಂದಿನ ಜೀವನ ನಿರ್ವಹಣೆಗಾಗಿ ಬೀದಿಬದಿ ವ್ಯಾಪಾರ ಮಾಡಿ, ಬದುಕುತ್ತಿದ್ದೇವೆ. ಸರ್ಕಾರ ಯಾವ ಉದ್ದೇಶದಿಂದ ನಮನ್ನು ತೆರವು ಮಾಡಿದೆಯೋ ಗೊತ್ತಿಲ್ಲ. ಆದರೆ ಮುಂದಿನ ದಿನಗಳು ಮಾತ್ರ ಆತಂಕಕಾರಿಯಾಗಿವೆ ಎಂದು ಹೇಳಿದ್ದಾರೆ.ಅಸಾಹಾಯಕರ ಮೇಲೆ ಅನ್ಯಾಯ ಸರಿಯಲ್ಲ, ನಮಗೂ ಬದುಕುವ ಹಕ್ಕಿದೆ ಎಂದು ಹೇಳಿದ್ದಾರೆ.
