Homeರಾಜ್ಯಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲು ಅಧಿಕಾರಿಗಳಿಗೆ ಸಮಸ್ಯೆಗಳಿವೆ : ಸಿಎಂ ಡಿಕೆಶಿ

ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲು ಅಧಿಕಾರಿಗಳಿಗೆ ಸಮಸ್ಯೆಗಳಿವೆ : ಸಿಎಂ ಡಿಕೆಶಿ

Officials have problems in conducting GBA municipal elections: CM DK Shivakumar

ಬೆಳಗಾವಿ, ಜು.10- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಮಹಾನಗರ ಪಾಲಿಕೆಗಳಿಗೆ ಆಗಸ್ಟ್‌ ಒಳಗೆ ಚುನಾವಣೆ ನಡೆಸಲು ಅಧಿಕಾರಿಗಳಿಗೆ ಸಮಸ್ಯೆಗಳಿವೆ. ಆದರೆ ಸುಪ್ರೀಂಕೋರ್ಟ್‌ ನಿರ್ದೇಶನದ ಪ್ರಕಾರ ನಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯ ಮಹಾನಗರ ಪಾಲಿಕೆಗಳ ಚುನಾವಣೆಗೆ ನಾವು ಸಿದ್ಧತೆ ಕೈಗೊಂಡಿದ್ದೇವೆ ಎಂದರು.ಚುನಾವಣಾ ಆಯೋಗದಿಂದ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಂಗವಾಗಿ ತೊಂದರೆಯಾಗಿದೆ. ಚುನಾವಣೆಗಳನ್ನು ನಡೆಸಲು ಸುಪ್ರೀಂಕೋರ್ಟ್‌ ಈ ಮೊದಲು ನಿಗದಿ ಪಡಿಸಿರುವ ಆಗಸ್ಟ್‌ ತಿಂಗಳ ಗಡುವಿನ ಬದಲಾಗಿ ಡಿಸೆಂಬರ್‌ವರೆಗೂ ಕಾಲವಾಕಾಶ ಕೊಡಬೇಕೆಂದು ಜಿಬಿಎ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿರುವುದಕ್ಕೆ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದರು.

ಸುಪ್ರೀಂಕೋಟ್‌ ಕಾಲಾವಕಾಶ ವಿಸ್ತರಿಸುವುದಿಲ್ಲ ಎಂದು ಹೇಳುತ್ತಿದೆ. ವಾಸ್ತವವಾಗಿ ಅಧಿಕಾರಿಗಳಿಗೆ ಈ ವಿಷಯದಲ್ಲಿ ಸಮಸ್ಯೆಗಳಿವೆ. ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ, ಎಲ್ಲವನ್ನೂ ಅಧಿಕಾರಿಗಳ ಮಟ್ಟಕ್ಕೆ ಬಿಟ್ಟಿದ್ದೇನೆ ಎಂದು ತಿಳಿಸಿದರು.

ಮತ್ತಷ್ಟು ಕಠಿಣ ನಿರ್ಧಾರ:
ತಾವು ಬೆಂಗಳೂರಿನ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬಿಜೆಪಿ, ಜೆಡಿಎಸ್‌‍ ಮತ್ತು ಕಾಂಗ್ರೆಸ್‌‍ ಶಾಸಕರಗಳ ಜೊತೆ ಸಭೆ ನಡೆಸಿ, ಬೀದಿಬದಿ ವ್ಯಾಪಾರಿಗಳು ಹಾಗೂ ಫುಟ್‌ಪಾತ್‌ ಒತ್ತುವರಿಯ ಬಗ್ಗೆ ಚರ್ಚೆ ನಡೆಸಲಾಗಿತ್ತು. ಸಂಚಾರ ವ್ಯವಸ್ಥೆಗೆ ತೊಂದರೆಯಾಗುವ ರಸ್ತೆಗಳಲ್ಲಿ ಒತ್ತುವರಿಯನ್ನು ತೆರವು ಮಾಡಬೇಕೆಂದು ಎಲ್ಲರೂ ಸಲಹೆ ನೀಡಿದ್ದರು. ಈಗ ಆ ಕೆಲಸ ನಡೆಯುತ್ತಿದೆ ಎಂದರು.

ಫುಟ್‌ಪಾತ್‌ ವ್ಯಾಪಾರಿಗಳ ಬಗ್ಗೆ ಹಿಂದೆ ಸಮೀಕ್ಷೆ ನಡೆಸಲಾಗಿತ್ತು. 60 ಸಾವಿರ ಜನರನ್ನು ಗುರುತಿಸಲಾಗಿದೆ. ಅವರಲ್ಲಿ 30 ಸಾವಿರ ಜನ ತಳ್ಳುವಗಾಡಿ ಹಾಗೂ ಫುಟ್‌ಪಾತ್‌ ವ್ಯಾಪಾರಕ್ಕೆ ಅನುಕೂಲವಾಗುವ ವಾಹನಗಳನ್ನು ನೀಡಲು ಮನವಿ ಮಾಡಿದ್ದಾರೆ.ಈಗಾಗಲೇ ಟೆಂಡರ್‌ ಕರೆದು ಈ ರೀತಿಯ ವಾಹನಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಸಚಿವ ಕೃಷ್ಣಭೈರೇಗೌಡ ಅವರು ಶೀಘ್ರದಲ್ಲೇ ವಾಹನಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ ಎಂದರು.

ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಕೊಡುವುದು ಸರ್ಕಾರದ ಉದ್ದೇಶವಲ್ಲ. ಸರ್ಕಾರ ನಿಗದಿ ಮಾಡಿದ ರಸ್ತೆಗಳಲ್ಲಿ ವ್ಯಾಪಾರ ಮುಂದುವರೆಸಲಿ, ಬೀದಿಬದಿ ವ್ಯಾಪಾರ ಇರಬೇಕು. ಆದರೆ ಮುಖ್ಯರಸ್ತೆಯಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿಲ್ಲ. ಈ ವಿಚಾರವಾಗಿ ಸುಪ್ರೀಂಕೋರ್ಟ್‌ನ ಸ್ಪಷ್ಟ ಆದೇಶ ಇದೆ. ಸರ್ಕಾರಕ್ಕೆ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು, ಜನರ ಅಭಿಪ್ರಾಯಗಳನ್ನೂ ಕೇಳುವ ಜವಾಬ್ದಾರಿಯಿದೆ ಎಂದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಚಿವ ಕೃಷ್ಣಭೈರೇಗೌಡ ನಡೆಸುತ್ತಿರುವ ಕಾರ್ಯಾಚರಣೆಗೆ ಬೆಂಗಳೂರಿನ ಎಲ್ಲಾ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರ ನಿಗದಿ ಪಡಿಸಿರುವ ರಸ್ತೆ ಪಕ್ಕದಲ್ಲಿ ತಳ್ಳುವಗಾಡಿ ತಂದು ವ್ಯಾಪಾರ ಮಾಡಿಕೊಂಡು ಹೋಗಬಹುದು, ಅಲ್ಲಿಯೇ ಟೆಂಟ್‌ ಹಾಕಿಕೊಂಡು ಇರಲು ಅವಕಾಶ ಇಲ್ಲ ಎಂದರು.

ಫುಟ್‌ಪಾತ್‌ ವ್ಯಾಪಾರದ ಬಗ್ಗೆ ಪೊಲೀಸ್‌‍ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರ ಆಸ್ತಿಗಳಲ್ಲಿ ಹಾಗೂ ಮನೆಗಳ ಮುಂದೆ ಟೆಂಟ್‌ ಹಾಕಿದರೆ ಯಾರೂ ಸುಮನಿರುವುದಿಲ್ಲ ಎಂದರು.ಬೆಳಗಾವಿಯಲ್ಲಿ ನಡೆಯುತ್ತಿರುವ ಆರ್‌ಎಸ್‌‍ಎಸ್‌‍ನ ರಾಷ್ಟ್ರೀಯ ಪ್ರಾಂತೀಯ ಕಾರ್ಯಕರ್ತರ ಸಭೆ ಬಗ್ಗೆ ತಮಗೆ ಮಾಹಿತಿ ಇಲ್ಲ. ಈ ಬಗ್ಗೆ ವರದಿ ಕೇಳಿದ್ದೇನೆ. ಕಾನೂನಿನಲ್ಲಿರುವ ಅವಕಾಶಗಳು ಎಲ್ಲರಿಗೂ ದೊರೆಯುತ್ತವೆ. ಕಾನೂನಿನಲ್ಲಿ ಇಲ್ಲದ ಅವಕಾಶಗಳನ್ನು ನೀಡಲಾಗುವುದಿಲ್ಲ. ಒಬ್ಬರಿಗೆ ಒಂದು ರೀತಿ, ಮತ್ತೊಬ್ಬರಿಗೆ ಇನ್ನೊಂದು ರೀತಿ ಮಾಡಲು ಸಾಧ್ಯವಿಲ್ಲ ಎಂದರು.

ಮೋಡ ಬಿತ್ತನೆಗೆ ಪರಿಶೀಲನೆ:
ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ವ್ಯಾಪಕ ಬೇಡಿಕೆ ಇದೆ. ಕಾನೂನು ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕಿದೆ. ಶಾಸಕರ ಒತ್ತಾಯವನ್ನು ಪರಿಶೀಲಿಸುವುದಾಗಿ ಹೇಳಿದರು.

ಕಿತ್ತೂರು ಕರ್ನಾಟಕದ 7 ಜಿಲ್ಲೆಗಳ ಶಾಸಕರ ಬೇಡಿಕೆಗಳಿಗೆ ನಿನ್ನೆ ಸುವರ್ಣ ಸೌಧದಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ 2 ವರ್ಷದಲ್ಲಿ ಅನುಷ್ಠಾನಕ್ಕೆ ಬರುವ ನಿರ್ಧಾರಗಳನ್ನು ಮಾಡಿದ್ದೇವೆ. ಹಾಗೆಯೇ ದೇವಸ್ಥಾನದಲ್ಲಿರುವ ಎಲ್ಲಾ ಹುಂಡಿಗಳ ಹಣವನ್ನು ಎಚ್ಚರಿಕೆಯಿಂದ ರಕ್ಷಿಸುವಂತೆ ಆದೇಶಿಸಿದ್ದೇನೆ ಎಂದರು.ಬೆಳಗಾವಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವುದಕ್ಕೆ ಪರಿಶೀಲಿಸುವುದಾಗಿ ಹೇಳಿದರು.

RELATED ARTICLES

Latest News