Homeಜಿಲ್ಲಾ ಸುದ್ದಿಗಳುಚಿಕ್ಕಬಳ್ಳಾಪುರ : ಕರಡಿಗಳ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ

ಚಿಕ್ಕಬಳ್ಳಾಪುರ : ಕರಡಿಗಳ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ

ಚಿಕ್ಕಬಳ್ಳಾಪುರ,ಜು.11- ಜಿಲ್ಲಾ ಗಡಿ ಕಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರೆಸ್ಟೀಜ್‌ ಗ್ರೂಪ್‌ ಕಂಪನಿಯ ಆವರಣದಲ್ಲಿ ಬೃಹತ್‌ ಗಾತ್ರದ ಎರಡು ಕರಡಿಗಳು ಸಂಚರಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ರಾತ್ರಿ ಕಂಪನಿಯ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಎರಡು ಕರಡಿಗಳು ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯಗಳು ಸೆರೆ ಸಿಕ್ಕಿವೆ. ಅಲ್ಲದೆ, ಕಂಪನಿಯ ಶಟಲ್‌ ಕೋರ್ಟ್‌ (ಬ್ಯಾಡಿಂಟನ್‌ ಸ್ಟೇಡಿಯಂ) ಪ್ರದೇಶದಲ್ಲಿಯೂ ಕರಡಿಗಳು ಸಂಚರಿಸಿರುವುದು ಕಂಡುಬಂದಿದೆ.

ಕಾರಹಳ್ಳಿ ಸುತ್ತಮುತ್ತಲಿನ ಪ್ರದೇಶವು ಬೆಟ್ಟಗುಡ್ಡಗಳು ಹಾಗೂ ನಂದಿಬೆಟ್ಟದ ತಪಲು ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ. ಆದರೆ ಈ ಬಾರಿ ಬೃಹತ್‌ ಗಾತ್ರದ ಎರಡು ಕರಡಿಗಳು ಜನವಸತಿ ಸಮೀಪ ಪ್ರತ್ಯಕ್ಷವಾಗಿರುವುದು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರೆಸ್ಟೀಜ್‌ ಕಂಪನಿಗೆ ಹೊಂದಿಕೊಂಡಿರುವ ಸೊನ್ನೆಹಳ್ಳಿ, ತೈಲಗರೆ, ಕಾರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಭಯಭೀತರಾಗಿದ್ದಾರೆ. ರಾತ್ರಿ ವೇಳೆಯಲ್ಲಿ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಓಡಾಡಲು ಹಿಂಜರಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕರಡಿಗಳ ಸಂಚಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಕರಡಿಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಿ, ಯಾವುದೇ ಅನಾಹುತ ಸಂಭವಿಸದಂತೆ ನಿಗಾವಹಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

RELATED ARTICLES

Latest News