ಬೆಂಗಳೂರು, ಜು.13-ಜಾಗತಿಕವಾಗಿ ಉಂಟಾಗುವ ವಿಫ್ಲವದ ಪರಿಣಾಮ ಚಿನಿವಾರಪೇಟೆಯ ಮೇಲಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕುಸಿತ ಮುಂದುವರೆದಿದೆ. ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಬೀರಿದೆ. ಹಾಗೆಯೇ ಚಿನಿವಾರಪೇಟೆಯ ಮೇಲಾಗುತ್ತಿರುವುದರಿಂದ ಬೆಲೆಗಳು ಸ್ಥಿರವಾಗಿರದೆ ವ್ಯತ್ಯಯವಾಗುತ್ತಿವೆ. ಇದು ಚಿನ್ನಾಭರಣ ಪ್ರಿಯರು, ಗ್ರಾಹಕರು ಹಾಗೂ ವರ್ತಕರನ್ನು ಚಿಂತೆಗೀಡು ಮಾಡಿದೆ.
ಚಿನ್ನದ ದರವು ಪ್ರಮುಖವಾಗಿ ಹೂಡಿಕೆಯನ್ನು ಅವಲಂಬಿಸಿದ್ದು, ಹೂಡಿಕೆಯಲ್ಲಾಗುವ ವ್ಯತ್ಯಾಸದ ಪರಿಣಾಮ ದರಗಳಲ್ಲೂ ಆಗುತ್ತಿದೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ದರ ಸ್ಥಿರವಾಗಿರದೇ ಏರಿಳಿತದಲ್ಲೇ ಸಾಗುತ್ತಿದೆ. ಇದೇ ರೀತಿ ಬೆಳ್ಳಿಯ ಪರಿಸ್ಥಿತಿಯೂ ಇದೆ. ಇಳಿಮುಖದ ಹಾದಿಯಲ್ಲಿರುವ ಚಿನ್ನವು ಇಂದು ಕೂಡ ಕುಸಿತ ಕಂಡಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ 24 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 142 ರೂ. ನಷ್ಟು ಕಡಿಮೆಯಾಗಿದ್ದು, 14,291 ರೂಪಾಯಿಯಷ್ಟಿದೆ. 22 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 130 ರೂ. ಇಳಿಕೆಯಾಗಿದ್ದು, 13,100 ರೂ.ನಷ್ಟಿದೆ. 18 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 107 ರೂ. ಕಡಿಮೆಯಾಗಿದ್ದು, 10,718 ರೂಪಾಯಿಯಷ್ಟಿದೆ. ಪ್ಲಾಟಿನಮ್ 10 ಗ್ರಾಂಗೆ 890 ರೂ. ಕುಸಿತವಾಗಿದ್ದು, 48,960 ರೂ.ಗೆ ತಲುಪಿದೆ.
ಇನ್ನೂ ಚೇತರಿಕೆ ಕಾಣದ ಬೆಳ್ಳಿಯು ಮೂರು ದಿನಗಳಿಂದ ಏರಿಳಿತವಿಲ್ಲದೆ ಸ್ಥಿರವಾಗಿದೆ. ಜು.11ರಂದು ಒಂದು ಕೆ.ಜಿ.ಗೆ ಐದು ಸಾವಿರ ರೂಪಾಯಿ ಕುಸಿತವಾಗಿ 2.35 ಲಕ್ಷ ರೂ.ನಷ್ಟಿದ್ದ ಬೆಳ್ಳಿ ದರವು, ಅದೇ ದರದಲ್ಲಿ ಮುಂದುವರೆದಿದೆ.
