Homeರಾಜ್ಯ'ಸ್ಟಿಂಗ್‌ ಆಪರೇಷನ್‌' ವಿವಾದ : ನನ್ನನ್ನು ತನಿಖೆಗೆ ಒಳಪಡಿಸಿ ಎಂದು ಪೊಲೀಸ್‌‍ ಆಯುಕ್ತರ ಕಚೇರಿ ಮುಂದೆ...

‘ಸ್ಟಿಂಗ್‌ ಆಪರೇಷನ್‌’ ವಿವಾದ : ನನ್ನನ್ನು ತನಿಖೆಗೆ ಒಳಪಡಿಸಿ ಎಂದು ಪೊಲೀಸ್‌‍ ಆಯುಕ್ತರ ಕಚೇರಿ ಮುಂದೆ ಎಚ್‌ಡಿಕೆ ಧರಣಿ

ಬೆಂಗಳೂರು,ಅ.15- ಸ್ಟಿಂಗ್‌ ಆಪರೇಷನ್‌ ಆರೋಪದ ಹಿನ್ನೆಲೆಯಲ್ಲಿ ತಮನ್ನು ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ನಗರ ಪೊಲೀಸ್‌‍ ಆಯುಕ್ತರ ಕಚೇರಿಯ ಮೆಟ್ಟಿಲುಗಳ ಮೇಲೆ ಇಂದು ಧರಣಿ ನಡೆಸಿದರು.

ಜೆಡಿಎಸ್‌‍ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ನಂತರ ಕುಮಾರಸ್ವಾಮಿ ಅವರು, ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ವಿಧಾನಪರಿಷತ್‌ ಸದಸ್ಯ ಟಿ.ಎನ್‌.ಜವರಾಯಿಗೌಡ, ಮಾಜಿ ಶಾಸಕರಾದ ಡಾ.ಅನ್ನದಾನಿ, ಸುರೇಶ್‌ಗೌಡ, ರಮೇಶ್‌ಗೌಡ, ಚೌಡರೆಡ್ಡಿ ಮೊದಲಾದ ಜೆಡಿಎಸ್‌‍ ಮುಖಂಡರೊಂದಿಗೆ ನಗರ ಪೊಲೀಸ್‌‍ ಆಯುಕ್ತರ ಕಚೇರಿಗೆ ತೆರಳಿದರು.

ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ಸಿಂಗ್‌ರವರನ್ನು ಭೇಟಿಯಾಗಿ ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದರು. ಕಚೇರಿಯಿಂದ ಹೊರಬಂದ ಬಳಿಕ ತಮನ್ನು ತನಿಖೆಗೊಳಪಡಿಸುವಂತೆ ಪಕ್ಷದ ಮುಖಂಡರೊಂದಿಗೆ ಆಯುಕ್ತರ ಕಚೇರಿಯ ಮುಂದಿನ ಮೆಟ್ಟಿಲುಗಳ ಮೇಲೆೆ ಧರಣಿ ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನ ಮೇಲೆ ಸಂಶಯ ಬರುವವರೆಗೂ ಏಕೆ ಕಾಯುತ್ತೀರಿ?, ಏನು ತನಿಖೆ ಮಾಡಬೇಕು ಎಂಬುದನ್ನು ಈಗಲೇ ತನಿಖೆ ಮಾಡಿ. ನಾನೇ ಬಂದಿದ್ದೇನೆ ಎಂದು ಆಗ್ರಹಿಸಿದರು.ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್‌‍ ಸಾಮಾಜಿಕ ಜಾಲತಾಣ ವಿಭಾಗದ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿರುವುದು, ಎಫ್‌ಐಆರ್‌ ದಾಖಲಿಸಿರುವ ಬಗ್ಗೆ ಕೆರಳಿ ಕೆಂಡಾಮಂಡಲರಾಗಿದ್ದರು.

ಸಂಶಯ ಬಂದರೆ ತಮನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಗೃಹಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನಮ ಸಿಬ್ಬಂದಿಯನ್ನು ವಶಕ್ಕೆ ಪಡೆದು, ಹೆದರಿಸಿ, ಬೆದರಿಸಿ ಏಕೆ ವಿಚಾರಣೆ ಮಾಡತ್ತೀರಿ?, ಆರೋಪ ಮಾಡಿರುವುದು ನಾನು, ನಾನೇ ಪೊಲೀಸ್‌‍ ಆಯುಕ್ತರ ಕಚೇರಿಗೆ ಬರುತ್ತೇನೆ. ಬನ್ನಿ ಬಂಧಿಸಿ ಎಂದು ಸವಾಲು ಹಾಕಿದರು.

ಹೋರಾಟಕ್ಕೆ ಸಿದ್ಧನಿದ್ದೇನೆ. ಅಖಾಡಕ್ಕೆ ಬನ್ನಿ. ಸತ್ಯಾಂಶ ಹೊರಬರಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅವರು ಒತ್ತಾಯಿಸಿದರು.ಸಾಮಾಜಿಕ ಜಾಲತಾಣದ ಸಿಬ್ಬಂದಿಯನ್ನು ವಿನಾಕಾರಣ ವಶಕ್ಕೆ ಪಡೆದು ಹೆದರಿಸಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ನಮ ಸಿಬ್ಬಂದಿಯ ಮನೆಗೆ ಹೋಗಿ ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ. ಅ.13ರ ದಿನಾಂಕ ನಮೂದಾಗಿರುವ ನೋಟೀಸ್‌‍ ನೀಡಿ ಅ.14 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಪೊಲೀಸರು ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿಯ ಮನೆಯವರು ಫೋಟೊ ತೆಗೆದಿರುವುದನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ವಾರ್‌ ರೂಂನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯೊಬ್ಬರ ಮನೆಗೆ ಹೋಗಿ ಮೊಬೈಲ್‌, ವಿದ್ಯುನಾನ ಸಾಮಗ್ರಿಯನ್ನು ವಶಕ್ಕೆ ನೀಡುವಂತೆ ಪೊಲೀಸರು ಕೇಳಿದ್ದಾರೆ. ಅಲ್ಲದೆ ಆತನನ್ನು ಬೆಳಗ್ಗೆ 6.30ಕ್ಕೆ ಕರೆದುಕೊಂಡು ಹೋಗಿ ರಾತ್ರಿಯವರೆಗೂ ಗೋಡೌನ್‌ ಒಂದರಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ಮತ್ತೊಬ್ಬರಿಗೆ ಸೈಬರ್‌ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ಅದನ್ನು ಪೊಲೀಸ್‌‍ ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಿಲ್ಲ. ಈ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವರ ವಿರುದ್ಧ ಹರಿಹಾಯ್ದರು.

ಸ್ಟಿಂಗ್‌ ಆಪರೇಷನ್‌ನ ರೂವಾರಿ ಹಾಗೂ ಹನಿಟ್ರ್ಯಾಪ್‌ ಆರೋಪಿಯು ಪೊಲೀಸ್‌‍ ಅಧಿಕಾರಿಗಳ ಕಚೇರಿಗಳಲ್ಲೇ ಓಡಾಡಿಕೊಂಡು ಹೋಗಿದ್ದರೂ ಬಂಧಿಸಿಲ್ಲ. ಆ ವ್ಯಕ್ತಿ ಕಾಂಗ್ರೆಸ್‌‍ ನಾಯಕರು, ಮುಖಂಡರ ಒಡನಾಟದಲ್ಲೇ ಇದ್ದಾರೆ ಎಂದು ಆರೋಪಿಸಿದರು.ಆ ವ್ಯಕ್ತಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

RELATED ARTICLES
spot_img

Latest News