ಹುಬ್ಬಳ್ಳಿ,ಅ.15- ತಾಲ್ಲೂಕಿನ ಛಬ್ಬಿ ಕ್ರಾಸ್ ಬಳಿ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಸ್ ಮುಂಬೈನಿಂದ ಹುಬ್ಬಳ್ಳಿ ಮಾರ್ಗವಾಗಿ ಇಂದು ಮುಂಜಾನೆ 4 ಗಂಟೆ ಸುಮಾರಿನಲ್ಲಿ ಬೆಂಗಳೂರಿಗೆ ಬರುತ್ತಿತ್ತು. ಬಸ್ನಲ್ಲಿ ಒಟ್ಟು 26 ಪ್ರಯಾಣಿಕರು ಇದ್ದರು. ಛಬ್ಬಿ ಕ್ರಾಸ್ ಬಳಿ ಬರುತ್ತಿದ್ದಂತೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಚಾಲಕ ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ.
ಕಂದಕಕ್ಕೆ ಬಸ್ ಉರುಳಿದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
ಅಪಘಾತದಲ್ಲಿ ಮೃತಪಟ್ಟಿರುವ ಇಬ್ಬರ ಗುರುತು ಪತ್ತೆಯಾಗಿಲ್ಲ. ಅಪಘಾತಕ್ಕೆ ನಿಖರ ಕಾರಣವೇನು, ಬಸ್ ಚಾಲಕ ಏನಾದರೂ ನಿದ್ದೆ ಮಂಪರಿನಲ್ಲಿದ್ದರೇ, ಅಥವಾ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಸ್ ಉರುಳಿತೇ ಎಂಬ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
