ಬೆಂಗಳೂರು,ಜು.13- ತಮ್ಮ ಪುತ್ರಿಗೆ ಸರಕಾರಿ ಹುದ್ದೆ ನೀಡಲು ಮೀಸಲಾತಿ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್ಸಿ) ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಸೇವೆಯಿಂದ ಅಮಾನತುಗೊಳಿಸಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಅವರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಶಿಫಾರಸು ಮಾಡಿದ್ದು, ಈ ಮೂಲಕ ಕೆಪಿಎಸ್ಸಿ ಇತಿಹಾಸದಲ್ಲೇ ಅಧ್ಯಕ್ಷರೊಬ್ಬರು ಭ್ರಷ್ಟಾಚಾರ ಅಥವಾ ಅಕ್ರಮದ ಆರೋಪದ ಮೇಲೆ ಅಮಾನತುಗೊಂಡ ಮೊದಲ ಪ್ರಕರಣ ಇದಾಗಿದೆ.
ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಮತ್ತು ನಕಲಿ ದಾಖಲೆಗಳ ಸೃಷ್ಟಿ ಆರೋಪದ ಹಿನ್ನೆಲೆಯಲ್ಲಿ ಈ ಹಠಾತ್ ಕ್ರಮ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ಉಲ್ಲೇಖ ಹಾಗೂ ರಾಷ್ಟ್ರಪತಿಗಳ ಮುಂದಿನ ನಿರ್ಧಾರದ ಮೇಲೆ ಈ ಪ್ರಕರಣದ ಅಂತಿಮ ತೀರ್ಪು ಆಧಾರಿತವಾಗಿದೆ ಎಂದು ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಸಂವಿಧಾನದ ವಿಧಿ 317ರಡಿ ಲೋಕಸೇವಾ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರನ್ನು ಹುದ್ದೆಯಿಂದ ತೆಗೆದುಹಾಕುವ ಅಧಿಕಾರ ರಾಷ್ಟ್ರಪತಿಗಿರುತ್ತದೆ. ಆದರೆ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ಅವರನ್ನು ಅಮಾನತುಗೊಳಿಸುವ ವಿಶೇಷ ಅಧಿಕಾರವನ್ನು ರಾಜ್ಯಪಾಲರು ಚಲಾಯಿಸಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷರು ಅವರ ಇಬ್ಬರು ಪುತ್ರಿಯರನ್ನು ನಿಯಮಬಾಹಿರವಾಗಿ ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ದೂರುಗಳು ದಾಖಲಾಗಿದ್ದವು. ಈ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಪುರಾವೆಗಳು ಮತ್ತು ದೂರುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ರಾಜ್ಯಪಾಲರು, ಸಾಂವಿಧಾನಿಕ ಅಧಿಕಾರವನ್ನು ಬಳಸಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ತಮ ನೇರ ಅವಲಂಬಿತರು (ಪುತ್ರಿಯರು) ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ, ಅಧ್ಯಕ್ಷರು ನಿಯಮಾವಳಿಗಳ ಪ್ರಕಾರ ಆ ಪ್ರಕ್ರಿಯೆಯಿಂದ ದೂರವಿರಬೇಕಾಗಿತ್ತು ಅಥವಾ ಹಿತಾಸಕ್ತಿ ಸಂಘರ್ಷವನ್ನು ಔಪಚಾರಿಕವಾಗಿ ಘೋಷಿಸಬೇಕಾಗಿತ್ತು. ಆದರೆ, ಅವರು ಇದರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅಧ್ಯಕ್ಷರ ಪುತ್ರಿಯೊಬ್ಬರು ತಮ ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ 40,000 ಎಂದು ಸುಳ್ಳು ಘೋಷಣೆ ನೀಡಿ, ಆದಾಯ ಮತ್ತು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ತಂದೆ ಕೆಪಿಎಸ್ಸಿ ಅಧ್ಯಕ್ಷರಾಗಿದ್ದರೂ, ನಿಗದಿತ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿದ್ದರೂ ಉದ್ದೇಶಪೂರ್ವಕವಾಗಿ ಸತ್ಯಾಂಶಗಳನ್ನು ಮರೆಮಾಚಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಮೀಸಲಾತಿ ದುರುಪಯೋ: ಸುಳ್ಳು ಆದಾಯ ಘೋಷಣೆಯ ಮೂಲಕ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಮತ್ತು ಕ್ರೀಮಿ ಲೇಯರ್ ವಿನಾಯಿತಿಯ ಲಾಭವನ್ನು ಅಕ್ರಮವಾಗಿ ಪಡೆಯಲು ಯತ್ನಿಸಲಾಗಿದೆ.ದಿನಾಂಕ 30-03-2002ರ ಸರ್ಕಾರಿ ಆದೇಶ ಸಂಖ್ಯೆ ಎಸ್ ಡಬ್ಲುಡಿ 225ಬಿಸಿಎ 2000ರ ಪ್ರಕಾರ, ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲಾತಿ ಪಡೆಯಲು ಅರ್ಹರಾಗಿರುವುದಿಲ್ಲ. ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂಬ ಆಪಾದನೆ ಕೇಳಿ ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ಆದಾಯ, ಆಸ್ತಿ ವಿವರಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದ ರಾಜ್ಯಪಾಲರು, ಈ ಕೃತ್ಯವು ಅಧ್ಯಕ್ಷರ ಮೇಲ್ವಿಚಾರಣೆಯ ಕೊರತೆ ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯವಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಸದ್ಯದ ಸಾಕ್ಷ್ಯಗಳು ಅವರ ದುರ್ನಡತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ ಎಂದು ರಾಜ್ಯಪಾಲರು ತಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೈಗೊಂಡಿರುವ ಕಾನೂನು ಕ್ರಮಗಳು:
ಭಾರತದ ಸಂವಿಧಾನದ ವಿಧಿ 317(1)ರಡಿ ಕೆಪಿಎಸ್ಸಿ ಅಧ್ಯಕ್ಷರ ವಿರುದ್ಧದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಭಾರತದ ಸುಪ್ರೀಂಕೋರ್ಟ್ಗೆ ಉಲ್ಲೇಖಿಸುವಂತೆ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ. ಮುಂದಿನ ಆದೇಶ ಬರುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.ಹಂಗಾಮಿ ಅಧ್ಯಕ್ಷರ ನೇಮಕ: ಆಯೋಗದ ದೈನಂದಿನ ಕಾರ್ಯಕಲಾಪಗಳಿಗೆ ತೊಂದರೆಯಾಗದಂತೆ, ಮುಂದಿನ ಆದೇಶದವರೆಗೆ ಕೆಪಿಎಸ್ಸಿಯ ಹಿರಿಯ ಸದಸ್ಯರೊಬ್ಬರು ಹಂಗಾಮಿ ಅಧ್ಯಕ್ಷರನ್ನಾಗಿ ಕಾರ್ಯ ನಿರ್ವಹಿಸಲು ಆದೇಶಿಸಲಾಗಿದೆ.
ಅಧಿಕಾರ ದುರುಪಯೋಗದ ಆರೋಪ :
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ತಮ ಪುತ್ರಿಗೆ ಸರ್ಕಾರಿ ಹುದ್ದೆ ಕೊಡುವ ಸಲುವಾಗಿ, ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ಹಾಕಲು ಸಹಕರಿಸಿದ್ದಾರೆ ಎಂಬ ಆರೋಪವಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ 50 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳಿಗೆ 2024ರ ಮಾರ್ಚ್ 15ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಾಗಿ ಅಧ್ಯಕ್ಷರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರು 3ಬಿ ಮೀಸಲಾತಿಯಡಿ ಅರ್ಜಿ ಸಲ್ಲಿಸಿದ್ದರು. 1:3 ಅನುಪಾತದ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರು ಫೆಬ್ರವರಿ 19ರಂದು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿದ್ದರು.
ರಾಜ್ಯಪಾಲರ ಆದೇಶದಲ್ಲೇನಿದೆ?
ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿರುವ ಆರೋಪಗಳು ಕೇಳಿಬಂದಿವೆ. ವಿಶೇಷವಾಗಿ ತಮ ಪುತ್ರಿ ಸುಮಾ ಎಸ್.ಸಾಹುಕಾರ್ ಅವರಿಗೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಪಡೆಯಲು ಅನುಕೂಲವಾಗುವಂತೆ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಬಳಸಿಕೊಂಡು ಮೀಸಲಾತಿಯ ಲಾಭ ಪಡೆಯಲು ಅವಕಾಶ ಮಾಡಿಕೊಟ್ಟಿರುವ ಆರೋಪವನ್ನೂ ಉಲ್ಲೇಖಿಸಲಾಗಿದೆ.
ಈ ಆರೋಪಗಳು ಗಂಭೀರ ಸ್ವರೂಪದ್ದಾಗಿರುವ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನದ 317(1) ನೇ ವಿಧಿಯ ಅನ್ವಯ ಪ್ರಕರಣವನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸಲು ಶಿಫಾರಸು ಮಾಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯಪಾಲರ ಆದೇಶದ ಕುರಿತು ಲೋಕಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಶಂಕರಪ್ಪ ಪುತ್ರಿಗೆ ನೋಟೀಸ್ :
ಬೆಂಗಳೂರು,ಜು.13- ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಅವರ ಪುತ್ರಿ ಸುಮಾ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ. ಹಾಕೆ ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡುತ್ತಿದ್ದ ಅವರು, ಸುಮಾ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ನೀಡಿರುವ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ ಎಂದು ಹೇಳಿದರು.ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಸುಮಾ ಎಸ್ ಸಹುಕಾರ್ ಅವರು ಅರ್ಜಿ ಸಲ್ಲಿಸುವಾಗ ನಕಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಲ್ಲಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುಮಾ ಅವರು ತಮ ಕುಟುಂಬದ ವಾರ್ಷಿಕ ಆದಾಯವನ್ನು 40 ಸಾವಿರ ರೂ.ಗಳೆಂದು ನಮೂದಿಸಿರುವುದು ಅಭ್ಯರ್ಥಿಗಳ ದಾಖಲೆ ಪರಿಶೀಲನೆ ವೇಳೆ ವಂಚನೆ ಬಯಲಾಗಿದೆ.
ಸುಮಾ ತಂದೆ ಶಿವಶಂಕರಪ್ಪ ಅವರ ಮಾಸಿಕ ವೇತನವೇ 2.25 ಲಕ್ಷ ರೂ. ಆಗಿದ್ದು, ಸುಳ್ಳು ದಾಖಲೆಗಳನ್ನು ನೀಡಿ ಮೀಸಲಾತಿ ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
