ಬೆಂಗಳೂರು, ಜು.14- ಬಿಡದಿ ಸಮಗ್ರ ಉಪನಗರ ಯೋಜನೆ ಯನ್ನು ಕೈಬಿಡಬೇಕು ಹಾಗೂ ರೈತರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಹಾಗೂ ತಾವು ಮುಖ್ಯಮಂತ್ರಿಯಾಗಲು ಹೈ ಕಮಾಂಡ್‌ಗೆ ಓಲೈಸಲು ನೀಡಿದ್ದ ಭರವಸೆಯನ್ನು ಈಡೇರಿಸಲು ವ್ಯವಸ್ಥೆ ಮಾಡುವ ಮಾರ್ಗ ಬಿಡದಿ ಟೌನ್‌ಶಿಪ್ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದರು.
ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸದೆ ಆರೋಪ ಮಾಡಿದ ಅವರು, ಹೈಕಮಾಂಡ್‌ಗೆ ನೀಡಿದ ಭರವಸೆಯನ್ನು ಈಡೇರಿಸಲು ಬೇಕಾದಷ್ಟು ಮಾರ್ಗಗಳಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಿ, ಬಿಡದಿ ಟೌನ್‌ಶಿಪ್ ಅನ್ನು ಕೈಬಿಡಿ ಎಂದು ಆಗ್ರಹಿಸಿದರು.
ಜೂ.25 ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ 11 ಪುಟಗಳ ಸುದೀರ್ಘ ಪತ್ರ ಬರೆದಿದ್ದು, ಅದರಲ್ಲಿ ಬಿಡದಿ ಟೌನ್‌ಶಿಪ್ ಅನ್ನು ಕೈಬಿಡಲು ಒತ್ತಾಯಿಸಿದ್ದೆ. ಒಂದು ವೇಳೆ ಯೋಜನೆಯನ್ನು ಕೈಬಿಡದೆ ಮುಂದುವರೆಸಿದ್ದೇ ಆದರೆ ವಿಧಾನಸೌಧದ ಆವರಣದಲ್ಲಿರುವ ಮಹಾತ ಗಾಂಧೀಜಿ ಪ್ರತಿಮೆ ಮುಂದೆ ಕುಳಿತು ರೈತರ ಪರವಾಗಿ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಅಂತಹ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ ಎಂದರು.
ಟೌನ್‌ಶಿಪ್ ವಿರೋಧಿಸಿ ರೈತರು ಮಾಡುತ್ತಿರುವ ಹೋರಾಟಕ್ಕೆ ಈಗಾಗಲೇ ಜೆಡಿಎಸ್ ಬೆಂಬಲ ನೀಡಿದೆ. ಜೊತೆಗೆ ಬಿಜೆಪಿಯೂ ಬೆಂಬಲ ನೀಡಲಿದೆ. ರೈತರ ಪರ ಹೋರಾಟವನ್ನು ಮುಂದುವರೆಸಲಾಗುವುದು ಎಂದರು.ಸುದೀರ್ಘ ವಿವರವನ್ನು ಒಳಗೊಂಡ ಪತ್ರ ಬರೆದು 20 ದಿನ ಕಳೆದರೂ ಮುಖ್ಯಮಂತ್ರಿಯವರಿಂದ ಉತ್ತರ ಬರುವುದಿರಲಿ, ಪತ್ರ ತಲುಪಿದೆ ಎಂಬ ಹಿಂಬರಹವನ್ನೂ ನೀಡಿಲ್ಲ ಎಂದು ಆರೋಪಿಸಿದರು.
ಊರುಗಳನ್ನು ಬಿಟ್ಟಿರುವ ಜನರು ಬಿಡದಿ ಟೌನ್‌ಶಿಪ್‌ಗೆ ಜಮೀನು ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಸಣ್ಣಸಣ್ಣ ರೈತರು ಹೈನುಗಾರಿಕೆ, ಕೃಷಿ, ತೋಟಗಾರಿಕೆ ಅವಲಂಬಿಸಿದ್ದು, ಅವರು ವಿರೋಧ ಮಾಡುತ್ತಿದ್ದಾರೆ. ನಿನ್ನೆ ಸರ್ವೆ ಮಾಡಲು ಕಂದಾಯ ಅಧಿಕಾರಿಗಳು ಹೋದಾಗ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್ಪಿಯವರಿಗೆ ಭದ್ರತೆ ಒದಗಿಸುವಂತೆ ಕಂದಾಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹಾಗಾಗಿ ಪೊಲೀಸರು ಹೋಗಿರುವುದಾಗಿ ಎಸ್ಪಿಯವರು ಹೇಳಿದ್ದಾರೆ. ಕಲ್ಲು ತೂರಾಟ ಮಾಡಿದ್ದರು ಎಂಬ ಆರೋಪದ ಮೇಲೆ ಎಫ್‌ಐಆರ್ ಹಾಕಿ ವಶಕ್ಕೆ ಪಡೆದಿದ್ದಾರೆ.
ಕಲ್ಲು ಹೊಡೆಯಲು ಪ್ರಚೋದನೆ ಮಾಡಿದವರು ಯಾರು?, ಸರ್ಕಾರ ಯೋಜನೆ ಅನುಷ್ಠಾನಗೊಳಿಸಲು ಮುಂದಾದರೆ ಜಿಲ್ಲಾಧಿಕಾರಿಗಳು ಅಸಹಾಯಕರಾಗುತ್ತಾರೆ ಎಂದು ಹೇಳಿದರು.
ಹಾಲು ಕರೆದು ಜೀವನ ನಡೆಸುತ್ತಿದ್ದ ಹೆಣ್ಣು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.ಬಿಡಿಎ ವತಿಯಿಂದ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳ ಸುಮಾರು 20 ಸಾವಿರ ನಿವೇಶನ ಖಾಲಿ ಇದ್ದು, ಬೇಡಿಕೆ ಇಲ್ಲದಂತಾಗಿದೆ. ಅಂತಹ ಸಂದರ್ಭದಲ್ಲಿ ರೈತರ ವಿರೋಧವಿರುವ ಬಿಡದಿ ಬಳಿ ಟೌನ್‌ಶಿಪ್ ಮಾಡುವುದರ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಚಿವ ಜಾರಕಿಹೊಳಿಯವರೇ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕೈಬಿಟ್ಟಿದ್ದ ಈ ಯೋಜನೆಯನ್ನು ಮತ್ತೆ ಅನುಷ್ಠಾನಗೊಳಿಸಲು ಮುಂದಾಗಿದ್ದೇಕೆ?, ಯಾವ ಕಾರಣದಿಂದ ಟೌನ್‌ಶಿಪ್‌ಗೆ ಕೈ ಹಾಕಿದ್ದಾರೆ ಎಂಬುದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಡದಿ ಬಳಿ ಫಲವತ್ತಾದ ಭೂಮಿಯ ಮೇಲೆ ಏಕೆ ಕಣ್ಣು?, ಯಾರು ಬೇಡಿಕೆ ಇಟ್ಟಿದ್ದಾರೆ?, ಸುಮಾರು 40 ಸಾವಿರ ನಿವೇಶನಗಳಿಗೆ ಬೇಡಿಕೆ ಇಲ್ಲದಿರುವಾಗ ಬಿಡದಿ ಬಳಿಯೇ ಏಕೆ ಟೌನ್‌ಶಿಪ್ ಮಾಡಬೇಕು? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಂಸ್ಥೆಯ ವರದಿಯ ಮುಖ್ಯಾಂಶಗಳು ಯಾವುವು?, ರಾಜ್ಯಸರ್ಕಾರ ಅನುಮೋದಿಸಿರುವ ಬಿಡಿಎ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ 6 ಬಡಾವಣೆಗಳ 6,267 ಎಕರೆ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಳ್ಳುವ ಔಚಿತ್ಯವೇನು?, ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡುವಿರಾ ಎಂದು ಪ್ರಶ್ನಿಸಿದರು.
ಗ್ರೇಟರ್ ಬೆಂಗಳೂರು ಉಪನಗರ ಯೋಜನೆ ಅನುಷ್ಠಾನ ಮಾಡುವುದರಿಂದ ದುಂದು ವೆಚ್ಚಕ್ಕೆ ದಾರಿ ಮಾಡಿಕೊಡುವುದಿಲ್ಲವೇ ಎಂದು ತಿರುಗೇಟು ನೀಡಿದರು.ನೈಸ್ ಸಂಸ್ಥೆಯಿಂದ ಬಿಡದಿ ಬಳಿ ಉಪನಗರ ನಿರ್ಮಿಸಲು ಕೈಗೊಂಡಿರುವ ಕ್ರಮಗಳೇನು? ಎಂದು ಪ್ರಶ್ನಿಸಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಯಡಿ ಲೇಔಟ್ ನಿರ್ಮಾಣ ಮಾಡುವವರಿಗೆ 8 ಸಾವಿರ ಕೋಟಿ ರೂ.ಗಳಿಗೆ ಸರ್ಕಾರ ಗ್ಯಾರಂಟಿ ಕೊಡಲು ಮುಂದಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ, ಮಾಜಿ ಶಾಸಕರಾದ ಎ.ಮಂಜುನಾಥ್, ಅಖಂಡ ಶ್ರೀನಿವಾಸಮೂರ್ತಿ, ತಿಪ್ಪೇಸ್ವಾಮಿ, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಉಪಸ್ಥಿತರಿದ್ದರು.
