Homeರಾಜ್ಯಗೃಹ ಸಚಿವರ ತವರಲ್ಲೇ ಜೈಲಿನಿಂದ ಪರಾರಿಯಾದ ಮೂವರು ಖೈದಿಗಳು

ಗೃಹ ಸಚಿವರ ತವರಲ್ಲೇ ಜೈಲಿನಿಂದ ಪರಾರಿಯಾದ ಮೂವರು ಖೈದಿಗಳು

ಬೆಂಗಳೂರು,ಜು.14- ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಜಿಲ್ಲೆಯಲ್ಲಿರುವ ಕೇಂದ್ರ ಕಾರಾಗೃಹದಿಂದ ಮೂವರು ಖೈದಿಗಳು ಇಂದು ಮುಂಜಾನೆ ಪರಾರಿಯಾಗಿದ್ದಾರೆ.
ಬೀದರ್‌ ನಿವಾಸಿಗಳಾದ ಮಸ್ತಾನ್‌, ಸಂತೋಷ್‌ ಹಾಗೂ ಸಾಗರ್‌ ತಪ್ಪಿಸಿಕೊಂಡಿರುವ ಖೈದಿಗಳು.

ಬೀದರ್‌ನಲ್ಲಿ ನಡೆದಿದ್ದ ಪ್ರಕರಣಗಳಲ್ಲಿ ಈ ಮೂವರು ಆರೋಪಿಗಳನ್ನು ಬೀದರ್‌ ಜಿಲ್ಲಾ ಪೊಲೀಸರು ಬಂಧಿಸಿದ್ದು,ಶಿಕ್ಷೆಗೆ ಒಳಪಟ್ಟಿದ್ದರು. ಹಾಗಾಗಿ ಈ ಮೂವರನ್ನು ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು. ಇಂದು ಬೆಳಗಿನ ಜಾವ 4.30 ರ ಸುಮಾರಿನಲ್ಲಿ ಈ ಮೂವರು ಖೈದಿಗಳು ಕಾರಾಗೃಹದ ಶೌಚಾಲಯದ ಕಂಬಿಗಳನ್ನು ಕತ್ತರಿಸಿ ಹೊರಗೆ ಜಿಗಿದಿದ್ದಾರೆ. ನಂತರ ಕಾರಾಗೃಹದ ಗೋಡೆಯನ್ನು ಹತ್ತಿ ಅಲ್ಲಿಂದ ಇಳಿದು ಪರಾರಿಯಾಗಿದ್ದಾರೆ.

ತಕ್ಷಣ ಜೈಲು ಸಿಬ್ಬಂದಿ ಗಮನಿಸಿ ಜೈಲು ಸುತ್ತಾಮುತ್ತ ಹಾಗೂ ನಗರಾದ್ಯಂತ ಹುಡುಕಾಡಿದ್ದಾರೆ. ಆದರೆ ಅವರುಗಳ ಸುಳಿವು ಸಿಕ್ಕಿಲ್ಲ. ನಂತರ ಕಲ್ಬುರ್ಗಿ ನಗರದ ಫರ್ತಾಬಾದ್‌ ಪೊಲೀಸ್‌‍ ಠಾಣೆಗೆ ವಿಷಯ ತಿಳಿಸಿದ್ದಾರೆ.

ಆಯುಕ್ತರ ಭೇಟಿ:ಪರಿಶೀಲನೆ
ಸುದ್ದಿ ತಿಳಿದು ಕಲ್ಬುರ್ಗಿ ನಗರ ಪೊಲೀಸ್‌‍ ಆಯುಕ್ತ ಶರಣಪ್ಪ ಅವರು ಕಾರಾಗೃಹಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪರಾರಿಯಾಗಿರುವ ಮೂವರು ಖೈದಿಗಳ ಬಂಧನಕ್ಕಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ.ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿದ್ದು, ಆದಷ್ಟು ಬೇಗ ಬಂಧಿಸುತ್ತೇವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Latest News