ಬೆಂಗಳೂರು, ಜು.14- ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಂದು ನಡೆದ ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಕರ್ನಾಟಕವನ್ನು ಎಐ-ನೇಟಿವ್ ರಾಜ್ಯವನ್ನಾಗಿ ರೂಪಿಸುವುದು ಮತ್ತು ಆಡಳಿತ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನವನ್ನು ಸಂಯೋಜಿಸುವುದು ತಮ ಸರ್ಕಾರದ ಆದ್ಯತೆ ಎಂದರು.
ಎಐ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು, ಸುಧಾರಿತ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಸಹಯೋಗವನ್ನು ಬೆಳೆಸಲು ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಎಐ-ಸಹಾಯದ ಬೋಧನೆಯ ಮೂಲಕ ಶಿಕ್ಷಣ ಕ್ಷೇತ್ರ, ರೋಗಗಳ ಮುಂಚಿತ ಪತ್ತೆ ಮತ್ತು ಉತ್ತಮ ವೈದ್ಯಕೀಯ ಬೆಂಬಲದ ಮೂಲಕ ಆರೋಗ್ಯ ಕ್ಷೇತ್ರ, ರೈತರಿಗೆ ಎಐ-ಚಾಲಿತ ಸಲಹಾ ಸೇವೆಗಳ ಮೂಲಕ ಕೃಷಿ ಕ್ಷೇತ್ರ, ವೇಗದ ಮತ್ತು ಜನಸ್ನೇಹಿ ವಿತರಣೆಯ ಮೂಲಕ ಸರ್ಕಾರಿ ಸೇವೆಗಳು, ಎಐ ಪರಿಕರಗಳನ್ನು ಬಳಸಿಕೊಂಡು ಸ್ಪರ್ಧಾತಕತೆಯನ್ನು ಹೆಚ್ಚಿಸುವ ಮೂಲಕ ಸಣ್ಣ ಉದ್ಯಮಗಳಲ್ಲಿ ಬದಲಾವಣೆ ತರಲಾಗುವುದು ಎಂದು ತಿಳಿಸಿದರು.
ಭಾರತದ ನಾವೀನ್ಯತೆಯ ರಾಜಧಾನಿ ಮತ್ತು ವಿಶ್ವದ ಅತ್ಯಂತ ರೋಮಾಂಚಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳಲ್ಲಿ ಬೆಂಗಳೂರು ಒಂದಾಗಿದೆ. ಗೂಗಲ್ ಐಓ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮವು ಸಹಜವಾಗಿ ಮೂಡಿ ಬಂದಿದೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಎಂಬುದು ದೈನಂದಿನ ಜೀವನದ ಭಾಗವಾಗಿದೆ. ಪ್ರತಿ ಪೀಳಿಗೆಯೂ ಮಾನವ ನಾಗರಿಕತೆಯ ಹಾದಿಯನ್ನೇ ಬದಲಾಯಿಸುವ ಒಂದು ತಂತ್ರಜ್ಞಾನವನ್ನು ಬಳುವಳಿಯಾಗಿ ಪಡೆಯುತ್ತದೆ ಎಂದು ಹೇಳಿದರು.
ಸ್ಟೀಮ್ ಇಂಜಿನ್ ಕೈಗಾರಿಕಾ ರಂಗವನ್ನು ಕ್ರಾಂತಿಗೊಳಿಸಿತು. ವಿದ್ಯುತ್ ನಗರಗಳನ್ನು ಮಾರ್ಪಡಿಸಿತು. ಇಂಟರ್ನೆಟ್ ಸಂಪರ್ಕ ಮಾಧ್ಯಮವನ್ನೇ ಬದಲಾಯಿಸಿತು. ಮೊಬೈಲ್ ತಂತ್ರಜ್ಞಾನವು ಎಲ್ಲವನ್ನೂ ಸುಲಭವಾಗಿ ಲಭ್ಯವಾಗುವಂತೆ ಮಾಡಿತು. ಇಂದು, ಕೃತಕ ಬುದ್ಧಿಮತ್ತೆಯು ಸ್ವತಃ ಮಾನವ ಸಾಮರ್ಥ್ಯವನ್ನೇ ಮಾರ್ಪಡಿಸುವ ಭರವಸೆ ನೀಡುತ್ತಿದೆ ಎಂದರು.
ಬೆಂಗಳೂರಿನಲ್ಲಿ ತಂತ್ರಜ್ಞಾನವು ಕೇವಲ ಕಚೇರಿ ಕಟ್ಟಡಗಳಿಗೆ ಸೀಮಿತವಾಗಿಲ್ಲ. ಇದು ಕಾಫಿ ಶಾಪ್‌ಗಳ ಸಂಭಾಷಣೆಗಳಲ್ಲಿ, ನಮ ತರಗತಿ ಕೋಣೆಗಳಲ್ಲಿ ಮತ್ತು ಸಂಶೋಧನಾ ಪ್ರಯೋಗಾಲಯಗಳಲ್ಲಿ ಪ್ರಾರಂಭವಾಗುತ್ತದೆ. ಮುಂದೆ ಅದು ಒಂದು ನವೋದ್ಯಮವಾಗಿ ರೂಪುಗೊಳ್ಳುತ್ತದೆ. ಕೆಲವು ಬಾರಿ ಯುನಿಕಾರ್ನ್ (ಪ್ರತಿಷ್ಠಿತ ಕಂಪನಿ) ಆಗುತ್ತದೆ ಮತ್ತು ಅಪರೂಪಕ್ಕೆ ಇಡೀ ಪ್ರಪಂಚವನ್ನೇ ಬದಲಾಯಿಸುತ್ತದೆ ಎಂದು ವಿಶ್ಲೇಷಿಸಿದರು.
ಭಾರತದ ಸಾಫ್‌್ಟವೇರ್ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.40 ರಷ್ಟಿದೆ. ಬೆಂಗಳೂರು 17 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ, ಈ ಮೂಲಕ ಭಾರತದ ಸ್ಟಾರ್ಟ್ ಅಪ್ ರಾಜಧಾನಿಯಾಗಿದೆ. ಇಡೀ ಪ್ರಪಂಚಕ್ಕಾಗಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು, ಇಂಜಿನಿಯರಿಂಗ್ ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ಸಾವಿರಾರು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಕರ್ನಾಟಕವನ್ನು ಆರಿಸಿಕೊಂಡಿವೆ ಎಂದು ವಿವರಿಸಿದರು.
ಈ ಪ್ರಯಾಣದಲ್ಲಿ ಗೂಗಲ್ ಅತ್ಯದ್ಭುತ ಪಾಲುದಾರನಾಗಿದೆ. ಕಳೆದ ಎರಡು ದಶಕಗಳಿಂದ, ಗೂಗಲ್ ಬೆಂಗಳೂರನ್ನು ಕೇವಲ ಒಂದು ಕಚೇರಿಯ ಸ್ಥಳವಾಗಿ ಮಾತ್ರವಲ್ಲದೆ, ಇಂಜಿನಿಯರಿಂಗ್, ಸಂಶೋಧನೆ ಮತ್ತು ನಾವೀನ್ಯತೆಗಾಗಿ ತನ್ನ ಅತ್ಯಂತ ಪ್ರಮುಖ ಜಾಗತಿಕ ಕೇಂದ್ರಗಳಲ್ಲಿ ಒಂದಾಗಿ ಆಯ್ಕೆ ಮಾಡಿಕೊಂಡಿದೆ. ಭಾರತದಲ್ಲಿ ಗೂಗಲ್ 18 ಸಾವಿರ ಸಿಬ್ಬಂದಿ ಹೊಂದಿದ್ದು, ಅದರಲ್ಲಿ 12 ಸಾವಿರ ಸಿಬ್ಬಂದಿ ಬೆಂಗಳೂರಿನಲ್ಲಿದ್ದಾರೆ. ಇದರೊಂದಿಗೆ ಭಾರತದಲ್ಲಿ ಗೂಗಲ್ ನ ಸಿಬ್ಬಂದಿಯ 2/3 ಪ್ರಮಾಣ ಬೆಂಗಳೂರಿನಲ್ಲಿದೆ. ಇದು ನಮ ನಗರದ ಸಾಮರ್ಥ್ಯಕ್ಕೆ ಸಾಕ್ಷಿ ಎಂದರು.
ಗೂಗಲ್ ಜೊತೆಗಿನ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೋಯ್ಯಲು, ಬಯಸುತ್ತೇವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ. ಎಐ ತಂತ್ರಜ್ಞಾನದ ಮೂಲಕ ನಮ ನಗರದ ಸಂಚಾರ ಸಮಸ್ಯೆಗಳನ್ನು ನಿವಾರಿಸೋಣ. 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 70 ಲಕ್ಷ ಜನಸಂಖ್ಯೆ ಇತ್ತು. ಈಗ 1.40 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಸಮಸ್ಯೆ ಇದ್ದು, ಇದನ್ನು ನಿವಾರಿಸಲು ನಾವು ಪರಿಹಾರ ಹುಡುಕುತ್ತಿದ್ದೇವೆ ಎಂದು ಭರವಸೆ ನೀಡಿದರು.
