Homeಬೆಂಗಳೂರುಬೆಂಗಳೂರಿನ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಶುಭ ಸುದ್ದಿ

ಬೆಂಗಳೂರಿನ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಶುಭ ಸುದ್ದಿ

Good news for apartment residents in Bengaluru

ಬೆಂಗಳೂರು, ಜು.14- ರಾಜಧಾನಿ ಬೆಂಗಳೂರಿನಲ್ಲಿ ಪುಟ್‌ ಪಾತ್‌ ಒತ್ತುವರಿ ತೆರವು ಮತ್ತು ಬೀದಿಬದಿ ವ್ಯಾಪಾರಿಗಳ ಸ್ಥಳಾಂತರ ಕಾರ್ಯಾಚರಣೆ ಮೂಲಕ ಜನ ಮನ್ನಣೆ ಗಳಿಸಿರುವ ಗ್ರೇಟರ್‌ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಇದೀಗ ಬಹು ದಿನಗಳ ಬೇಡಿಕೆಗೆ ಸ್ಪಂದಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್‌ ಗಳ ನಿರ್ವಹಣೆ ಮತ್ತು ಮಾಲೀಕತ್ವಕ್ಕೆ ಚಾಲ್ತಿಯಲ್ಲಿರುವ ಕಾನೂನುಗಳು ಸಮರ್ಪಕವಾಗಿಲ್ಲ. ಒಂದು ರೀತಿಯ ತಂತಿಯ ಮೇಲಿನ ನಡಿಗೆಯಂತೆ ಅಪಾರ್ಟ್‌ ಮೆಂಟ್‌ ವಾಸಿಗಳು ಜೀವಿಸುತ್ತಿದ್ದಾರೆ. ಗೊಂದಲಗಳಿಂದಾಗಿಯೇ ಬೆಂಗಳೂರಿನಲ್ಲಿ ನಿವೇಶನ ಖರೀದಿ ದುಬಾರಿಯಾದರೂ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ಗಳ ಖರೀದಿಯತ್ತ ಹೆಚ್ಚು ಜನ ಆಸಕ್ತಿ ವಹಿಸುತ್ತಿಲ್ಲ.

ಅಪಾರ್ಟ್‌ಮೆಂಟ್‌ಗಳ ಮಾಲೀಕತ್ವ ಹಾಗೂ ನಿರ್ವಹಣೆ ವಿಷಯವಾಗಿ ಕರಾರುವಕ್ಕಾದ ಕಾನೂನು ರೂಪುಗೊಳ್ಳಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಅದಕ್ಕೆ ಸ್ಪಂದಿಸಲು ಸಚಿವ ಕೃಷ್ಣ ಬೈರೇಗೌಡ ಮುಂದಾಗಿದ್ದಾರೆ.

ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಸಚಿವ ಕೃಷ್ಣಬೈರೇಗೌಡ, ಅಪಾರ್ಟ್‌ಮೆಂಟ್‌‍ ಮಾಲೀಕರು ತಮ ಮಾಲೀಕತ್ವ, ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದ ಅಗತ್ಯತೆಗಳನ್ನು ಉತ್ತಮವಾಗಿ ಪರಿಹರಿಸುವ ಹೊಸ ಕಾಯ್ದೆಗಾಗಿ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ನಮ ಸರ್ಕಾರವು ನಾಗರಿಕರ ಈ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಾರ್ಗದರ್ಶನದಲ್ಲಿ, ಸರ್ಕಾರವು ಕರಡು ವಿಧೇಯಕವನ್ನು ಸಿದ್ಧಪಡಿಸಿದೆ. ಇದನ್ನು ಮುಂದುವರಿಸುವ ಮುನ್ನ, ನಾವು ಎಲ್ಲಾ ಪಾಲುದಾರರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಡೆಯಲು ಬಯಸುತ್ತೇವೆ. ಅದಕ್ಕಾಗಿ ಜುಲೈ 15ರ ಬುಧವಾರದಂದು ಪೂರ್ವಾಹ್ನ 11 ಗಂಟೆಗೆ ಜವಾಹರಲಾಲ್‌ ನೆಹರು ತಾರಾಲಯದ ಸಭಾಂಗಣದಲ್ಲಿ ಭಾಧ್ಯಸ್ಥರ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.

ಈ ಸಮಾಲೋಚನಾ ಸಭೆಯಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ. ಈ ಪ್ರಮುಖ ಶಾಸನವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು, ನಂತದ ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆಯಲಾಗುವುದು.ಉತ್ತಮ ಶಾಸನ ರೂಪಿಸಲು ಸಂಬಂಧಪಟ್ಟವರು ತಮ ಸಲಹೆ ಹಾಗೂ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ.

RELATED ARTICLES

Latest News