ಬೆಂಗಳೂರು, ಜು.14- ಮುಂದಿನ ತಿಂಗಳ ಆಗಸ್ಟ್ 6ರಿಂದ ಆರಂಭವಾಗಲಿರುವ ಕರ್ನಾಟಕ ವಿಧಾನಮಂಡಲದ ಮಳೆಗಾಲದ ಅಧಿವೇಶನವು ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಮತ್ತು ಕುತೂಹಲಕಾರಿ ತಿರುವಿಗೆ ಸಾಕ್ಷಿಯಾಗಲಿದೆ. ಏಕೆಂದರೆ ವಿಧಾನ ಪರಿಷತ್‌ನಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಆಡಳಿತಾರೂಢ ಕಾಂಗ್ರೆಸ್ ಹಾಲಿ ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದೆ.
ಒಂದು ವೇಳೆ ಸರ್ಕಾರ ಅಧಿವೇಶನ ಆರಂಭವಾಗುವ ಮುನ್ನವೇ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅವರೇ ಸ್ವಯಂ ಪ್ರೇರಿತರಾಗಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಇಲ್ಲವೇ ಸದನದಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಬಹುದು. ಈ ಹಿಂದೆ ಸ್ವತಃ ಹೊರಟಿಯವರೇ ಹೇಳಿರುವಂತೆ ಸರ್ಕಾರ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಒಂದು ಕ್ಷಣವೂ ಕೂಡ ನಾನು ಪೀಠದಲ್ಲಿ ಕೂರುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.ಹೀಗಾಗಿ, ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಅವಿಶ್ವಾಸ ನಿರ್ಣಯ? :
ಮೇಲನೆಯಲ್ಲಿ ಸಂಖ್ಯಾಬಲದ ಬದಲಾವಣೆಯು ನೇರವಾಗಿ ಹಾಲಿ ಸಭಾಪತಿಗಳ ಕುರ್ಚಿಗೆ ಕಂಟಕ ತಂದೊಡ್ಡಿದೆ. ಸದ್ಯ ಸಭಾಪತಿಯಾಗಿರುವ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಬೆಂಬಲದೊಂದಿಗೆ ಆ ಸ್ಥಾನದಲ್ಲಿದ್ದಾರೆ. ಈಗ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿರುವುದರಿಂದ, ತಮದೇ ಪಕ್ಷದವರನ್ನು ಸಭಾಪತಿ ಮಾಡಲು ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ತರುವುದು ಬಹುತೇಕ ನಿಶ್ಚಿತವಾಗಿದೆ.
ಇವರಲ್ಲಿ ಇದೇ ತಿಂಗಳ 21ರಿಂದ ಹಾಲಿ ಸದಸ್ಯರಾದ ಅಡಗೂರು ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತಾರಾಮ್ ಬುಡ್ನ ಸಿದ್ದಿ, ಡಾ.ತಳವಾರ ಸಾಬಣ್ಣ ಹಾಗೂ ರಮೇಶ್ ಬಾಬು ಅವರ ಅಧಿಕಾರಾವಧಿ ಮುಕ್ತಾಯವಾಗಲಿದೆ. ತೆರವಾಗಲಿರುವ ಐದು ಸ್ಥಾನಗಳಿಗೆ ಕಾಂಗ್ರೆಸ್ ನಾಮ ನಿರ್ದೇಶನ ಮಾಡಲಿದ್ದು ಆಗ ಆ ಪಕ್ಷದ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.
ಸಂಸದೀಯ ಇತಿಹಾಸದಲ್ಲೇ ಸುದೀರ್ಘ ಅನುಭವ ಹೊಂದಿರುವ ಹೊರಟ್ಟಿ ಅವರನ್ನು ಕೆಳಗಿಳಿಸುವುದು ಕಾಂಗ್ರೆಸ್‌ಗೆ ಸಂಖ್ಯಾಬಲದ ದೃಷ್ಟಿಯಿಂದ ಸುಲಭವಿದ್ದರೂ, ರಾಜಕೀಯವಾಗಿ ಇದು ತೀವ್ರ ಚರ್ಚೆಗೆ ಗ್ರಾಸವಾಗಲಿದೆ.
ಒಟ್ಟು 75 ಸದಸ್ಯ ಬಲದ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಬಹುಮತಕ್ಕೆ 38 ಸದಸ್ಯರ ಬೆಂಬಲದ ಅಗತ್ಯವಿದೆ. ಮತ್ತೊಂದು ಕಡೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಎದುರಾಗುತ್ತಿರುವ ಮೊದಲ ವಿಧಾನಮಂಡಲ ಅಧಿವೇಶನ ಇದಾಗಿದೆ. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಆಕ್ರಮಣಕಾರಿ ದಾಳಿಯನ್ನು ಸದನದಲ್ಲಿ ಹೇಗೆ ಎದುರಿಸುತ್ತಾರೆ ಎಂಬುದು ಅವರ ನಾಯಕತ್ವದ ಶಕ್ತಿಗೆ ದಿಕ್ಸೂಚಿಯಾಗಲಿದೆ.
ಸಭಾಪತಿ ಮತ್ತು ಉಪಸಭಾಪತಿ ಸ್ಥಾನಗಳು ಕಾಂಗ್ರೆಸ್ ಮುಡಿಗೆ :
ಮೇಲನೆಯಲ್ಲಿ ಗರಿಷ್ಠ ಸಂಖ್ಯಾಬಲ ಹೊಂದಿರುವುದರಿಂದ ಸಭಾಪತಿ ಮತ್ತು ಉಪಸಭಾಪತಿ ಎರಡೂ ಸಾಂವಿಧಾನಿಕ ಹ್ದುೆಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳುವುದು ಸದ್ಯದ ರಾಜಕೀಯ ಲೆಕ್ಕಾಚಾರದಲ್ಲಿ ನಿಚ್ಚಳವಾಗಿದೆ.
ಪಕ್ಷದ ನಿಷ್ಠಾವಂತ ಹಿರಿಯ ನಾಯಕರೊಬ್ಬರಿಗೆ ಸಭಾಪತಿ ಸ್ಥಾನ ಹಾಗೂ ಮತ್ತೊಬ್ಬರಿಗೆ ಉಪಸಭಾಪತಿ ಸ್ಥಾನ ನೀಡುವ ಮೂಲಕ ಪಕ್ಷದ ಆಂತರಿಕ ವಲಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹೈಕಮಾಂಡ್ ಮುಂದಾಗಬಹುದು.ಎರಡೂ ಸ್ಥಾನಗಳು ಆಡಳಿತ ಪಕ್ಷದ ವಶವಾದರೆ, ಸದನದ ಕಲಾಪಗಳನ್ನು ಸಂಪೂರ್ಣವಾಗಿ ಸರ್ಕಾರದ ಕಾರ್ಯಸೂಚಿಗೆ ತಕ್ಕಂತೆ ನಡೆಸಲು ಸುಲಭವಾಗುತ್ತದೆ.
ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ?
ಒಟ್ಟು ಸದಸ್ಯರು- 75
ಕಾಂಗ್ರೆಸ್- 39
ಬಿಜೆಪಿ- 28
ಜೆಡಿಎಸ್ -6
ಪಕ್ಷೇತರರು -1
ಸಭಾಪತಿ-1
