ಬೆಂಗಳೂರು, ಜು.17- ಬಿಡದಿ ಉಪನಗರ ಯೋಜನೆ ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಅಲ್ಲದೆ, ರೈತರ ಪರಿವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡೂ ಹೋರಾಟ ನಡೆಸಲಿವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಉಪನಗರ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ರೈತರ ಪರವಾಗಿ ಕಾನೂನು ಹೋರಾಟ ಮಾಡಲಾಗುವುದು ಎಂದರು.
ರೈತರ ಹೋರಾಟಕ್ಕೆ ಬಿಜೆಪಿ ನಾಯಕರು ಬೆಂಬಲ ನೀಡಿ, ಹೋರಾಟ ಮಾಡುತ್ತಿದ್ದು, ಅವರಿಗೆ ಸಂರ್ಪೂ ನಮ ಬೆಂಬಲವಿದೆ. ಬಿಡದಿ ಉಪನಗರ ಯೋಜನೆ ವಿಚಾರದಲ್ಲಿ ಬಿಜೆಪಿ ನಾಯಕರು ರೈತರ ಪರ ನಿಂತಿದ್ದಾರೆ. ರೈತರ ಹೋರಾಟದಲ್ಲಿ ಬಿಜೆಪಿ ಜೊತೆ ಕೈಜೋಡಿಸುತ್ತೇವೆ. ಎರಡೂ ಪಕ್ಷಗಳು ಜಂಟಿಯಾಗಿ ಹೋರಾಟ ಮಾಡುತ್ತೇವೆ. ರೈತರ ಪರವಾಗಿ ಒಳ್ಳೆಯ ಕೆಲಸವನ್ನು ಬಿಜೆಪಿ ಪ್ರಾರಂಭಿಸಿದೆ ಎಂದು ಅವರು ಹೇಳಿದರು.
ಆನೇಕಲ್ ತಾಲ್ಲೂಕಿನ ಸುಮಾರು ಐನೂರು ರೈತರು ಬಂದಿದ್ದು, ಭೂಸ್ವಾಧೀನದಿಂದಾಗುವ ಸಮಸ್ಯೆ ಹೇಳಿಕೊಂಡಿದ್ದಾರೆ. ಸರ್ಜಾಪುರದ ಬಳಿ ಎರಡೂವರೆ ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಭೂ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಹಲವು ತಿಂಗಳುಗಳಿಂದ ಆ ರೈತರೂ ಹೋರಾಟ ಮಾಡುತ್ತಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
