Homeರಾಜ್ಯತೆಂಗಿನ ಕಾಯಿ ಬೆಲೆ ಇಳಿದರೂ ಗಗನಕ್ಕೇರುತ್ತಿದೆ ಚಿಪ್ಪಿನ ಬೆಲೆ

ತೆಂಗಿನ ಕಾಯಿ ಬೆಲೆ ಇಳಿದರೂ ಗಗನಕ್ಕೇರುತ್ತಿದೆ ಚಿಪ್ಪಿನ ಬೆಲೆ

The price of coconut shells is skyrocketing.

ಕೊರಟಗೆರೆ,ಜು.18- ಒಂದು ತೆಂಗಿನ ಸಸಿ ನೆಟ್ಟು, ಬೆಳೆಸಿ ಪೋಷಿಸಿ ಮರವಾಗಿಸಿದರೆ ಕುಟುಂಬದ ಆರ್ಥಿಕತೆಗೆ ನೆರವಾಗುತ್ತದೆ ಎಂಬ ಮಾತು ಪ್ರಸ್ತುತ ಸಂದರ್ಭದಲ್ಲಿ ಅಕ್ಷರಸಹ ನಿಜವಾಗಿದೆ. ಒಂದು ಕಾಲದಲ್ಲಿ ಉರುವಲಿಗೆ ಅಥವಾ ತ್ಯಾಜ್ಯವಾಗಿ ಬಳಸಲಾಗುತ್ತಿದ್ದ ಕೊಬ್ಬರಿ ಚಿಪ್ಪು (ಕರಟ) ಇದೀಗ ರೈತರಿಗೆ ಉತ್ತಮ ಆದಾಯದ ಮೂಲವಾಗಿದೆ.ಎಳನೀರು, ಕೊಬ್ಬರಿ ಬೆಲೆ ಏರಿಕೆಯ ನಡುವೆಯೇ ಚಿಪ್ಪಿನ ಬೆಲೆಯೂ ಏರಿಕೆಯಾಗಿದ್ದು, ಒಂದು ಸಾವಿರ ಚಿಪ್ಪಿಗೆ 4,500 ರೂ.ಗೆ ಮಾರಾಟವಾಗುತ್ತಿದೆ. ಕೆಲ ತಿಂಗಳುಗಳಿಂದ ತೆಂಗಿನಕಾಯಿ ಬೆಲೆ ತುಸು ಕಡಿಮೆಯಾಗಿದ್ದು, ಕೊಬ್ಬರಿ ಮತ್ತು ಎಳನೀರು ಬೆಲೆ ಏರುತ್ತಲೇ ಇದೆ.

ಕಲ್ಪತರು ನಾಡು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಹೋಬಳಿಯ ರೈತರೊಬ್ಬರು ತೆಂಗಿನಕಾಯಿ ಚಿಪ್ಪಿನಿಂದ ಹೆಚ್ಚು ಲಾಭ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.ತುಮಕೂರು ಜಿಲ್ಲೆಯ ರೈತ ಟಿ.ಎಸ್‌‍.ಲೋಕೇಶ್‌ ಅವರು 6 ಸಾವಿರ ಕೊಬ್ಬರಿ ಚಿಪ್ಪುಗಳನ್ನು 27 ಸಾವಿರಕ್ಕೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸಿದ್ದಾರೆ.

ಈ ಕುರಿತು ರೈತ ಲೋಕೇಶ್‌ ಮಾತನಾಡಿ, ಎಣಿಕೆ ಆಧಾರದಲ್ಲಿ ಮಾರಾಟ ಮಾಡಿದರೆ ಪ್ರತಿ ಚಿಪ್ಪಿಗೆ ಸುಮಾರು 4.50 ಸಿಗುತ್ತಿದೆ. ತೂಕದ ಆಧಾರದ ಮೇಲೆ ವ್ಯಾಪಾರಿಗಳು ಕ್ವಿಂಟಲ್‌ಗೆ 3,600 ದರ ನೀಡುತ್ತಿದ್ದಾರೆ. ಹಿಂದೆ ಏನೂ ಸಿಗದಿದ್ದರೆ ಚಿಕ್ಕನಾಯಕನಹಳ್ಳಿ ಚಿಪ್ಪೇ ಗತಿ ಎಂಬ ನಾಣ್ಣುಡಿ ಈಗ ಚಿಪ್ಪಿಗೂ ಕೂಡ ಶುಕ್ರದೆಸೆ ಬಂದಿದ್ದು, ಚಿಪ್ಪನ್ನು ಕಡೆಗಣಿಸುವಂತಿಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚಾಗಿ ತೆಂಗು ಬೆಳೆಯುವ ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಕೊಬ್ಬರಿ ಚಿಪ್ಪಿನ ಉತ್ಪಾದನೆ ಕಡಿಮೆಯಾಗಿರುವುದು ಹಾಗೂ ಎಳನೀರು ಮತ್ತು ತೆಂಗಿನಕಾಯಿಗೆ ಉತ್ತಮ ಬೆಲೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ರೈತರು ಕೊಬ್ಬರಿ ಉತ್ಪಾದನೆಗೆ ಕಡಿಮೆ ಆದ್ಯತೆ ನೀಡುತ್ತಿರುವುದು ಚಿಪ್ಪಿನ ಲಭ್ಯತೆ ಕಡಿಮೆಯಾಗಲು ಕಾರಣವಾಗಿದೆ, ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿದೆ.

ಜೋನಿಗರಹಳ್ಳಿಯ ಚಿಪ್ಪು ಖರೀದಿದಾರ ಪ್ರಸಾದ್‌ ಮಾತನಾಡಿ, ಹಿಂದೆ ವಾರಕ್ಕೆ ಒಂದು ಟನ್‌ ಚಿಪ್ಪು ಖರೀದಿಸುತ್ತಿದ್ದೆವು. ಆದರೆ ಈಗ ತಿಂಗಳಿಗೆ ಒಂದು ಟನ್‌ ಚಿಪ್ಪು ಸಿಗುವುದೂ ಕಷ್ಟವಾಗಿದೆ. ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಿದರು. ಕೊಬ್ಬರಿ ಚಿಪ್ಪಿನಿಂದ ಇದ್ದಿಲು, ಸಕ್ರಿಯ ಕಾರ್ಬನ್‌, ನೀರು ಶುದ್ಧೀಕರಣ ಫಿಲ್ಟರ್‌ಗಳು, ಸೌಂದರ್ಯವರ್ಧಕ ಉತ್ಪನ್ನಗಳು, ಕರಟದ ಎಣ್ಣೆ ಸೇರಿದಂತೆ ಹಲವು ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.

ತುಮಕೂರಿನ ಸಂಸ್ಕರಣಾ ಘಟಕಗಳಲ್ಲಿ ಚಿಪ್ಪನ್ನು ಇದ್ದಿಲಾಗಿ ಪರಿವರ್ತಿಸಿ ಇತರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದ್ದು, ಅಲ್ಲಿಂದ ವಿವಿಧ ಕೈಗಾರಿಕೆಗಳಿಗೆ ಹಾಗೂ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ವ್ಯಾಪಾರಿಗಳ ಪ್ರಕಾರ ಪ್ರಸ್ತುತ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆ ಇರುವುದರಿಂದ ಕೊಬ್ಬರಿ ಚಿಪ್ಪಿನ ಬೆಲೆ ಮುಂದಿನ ದಿನಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದ್ದ ಕೊಬ್ಬರಿ ಚಿಪ್ಪು ಇಂದು ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿ ಪರಿಣಮಿಸಿರುವುದು ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.

RELATED ARTICLES

Latest News