ನವದೆಹಲಿ,ಜು.18- ಸೋಮವಾರದಿಂದ ಆರಂಭವಾಗಲಿರುವ ಮುಂಗಾರಿನ ಸಂಸತ್ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಂಗಿ ಕುಸ್ತಿಗೆ ವೇದಿಕೆಯಾಗಿ ಪರಿಣಮಿಸಲಿದೆ.ಆಡಳಿತರೂಢ ಎನ್‌ಡಿಎ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮುಗಿ ಬೀಳಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸಜ್ಜಾಗಿವೆ. ಆದರೆ, ಪ್ರತಿಪಕ್ಷಗಳಲ್ಲಿ ಒಡಕು ಮೂಡಿರುವ ಕಾರಣ, ಸದನದಲ್ಲಿ ಪ್ರಸ್ತಾಪಿಸಬೇಕು ಪ್ರತಿಯೊಂದು ಆರೋಪಗಳಿಗೆ ಅಲ್ಲಿಯೇ ಪ್ರತ್ಯುತ್ತರ ನೀಡಲು ಎನ್‌ಡಿಎ ಕೂಡ ಕಾರ್ಯತಂತ್ರ ರೂಪಿಸಿದೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈವರೆಗೂ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ತಮಿಳುನಾಡಿನ ಡಿಎಂಕೆ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಪ್ರತ್ಯೇಕವಾಗಿ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲಿದೆ. ಹೀಗಾಗಿ ಡಿಎಂಕೆ ಪಕ್ಷದ ಸಂಸದರಿಗೆ ದಶಕಗಳ ನಂತರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಇನ್ನು ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಟಿಎಂಸಿ ಕೂಡ ವಿಭಜನೆ ಹಾದಿ ಹಿಡಿದಿದೆ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ ಟಿಎಂಸಿಯ ಸುಮಾರು 20ಕ್ಕೂ ಹೆಚ್ಚು ಸಂಸದರು ಎನ್‌ಸಿಪಿ ಜೊತೆ ವಿಲೀನವಾಗಿದ್ದು ಲೋಕಸಭೆಯಲ್ಲಿ ಈ ಸಂಸದರಿಗೂ ಸ್ಪೀಕರ್ ಓಂ ಬಿರ್ಲಾ ಅವರು ಪ್ರತ್ಯೇಕ ಆಸನದ ವ್ಯವಸ್ಥೆ ಒದಗಿಸಿದ್ದಾರೆ.
ಮಹಾರಾಷ್ಟ್ರದಲ್ಲೂ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆಯು ಎರಡು ಬಣಗಳಾಗಿದ್ದು,ಆರು ಜನ ಸಂಸದರು ಡಿಸಿಎಂ ಏಕನಾಥ್ ಶಿಂಧೆ ಬಣಕೆ ಸೇರ್ಪಡೆಯಾಗಿದ್ದಾರೆ. ಇನ್ನು ಶರದ್ ಪವರ್ ನೇತೃತ್ವ ಎನ್‌ಸಿಪಿ ಕೂಡ ಕೆಲವು ಸಂವಿಧಾನಿಕ ಮಸೂದೆಗಳಿಗೆ ಷರತ್ತು ಬದ್ಧ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಹೀಗಾಗಿ ಈ ಬಾರಿಯ ಮುಂಗಾರು ಅಧಿವೇಶನ ಕಾಂಗ್ರೆಸ್ಸಿಗೆ ರಾಜಕೀಯವಾಗಿ ಈ ಬಾರಿ ಹಿನ್ನಡೆ ಉಂಟುಮಾಡಿದೆ. ಈ ಅಧಿವೇಶನವು ಇತ್ತೀಚಿನ ರಾಜ್ಯ ವಿಧಾನಸಭೆ ಚುನಾವಣೆಗಳ ನಂತರ ನಡೆಯುತ್ತಿರುವ ಪ್ರಮುಖ ಅಧಿವೇಶನವಾಗಿದೆ.
ಆಡಳಿತಾರೂಢ ಎನ್‌ಡಿಎ ತನ್ನ ಶಾಸನಬದ್ಧ ಕಾರ್ಯಸೂಚಿಯನ್ನು ಜಾರಿಗೆ ತರಲು ಸಜ್ಜಾಗಿದ್ದರೆ, ಪ್ರತಿಪಕ್ಷಗಳು ವಿವಿಧ ಹಗರಣಗಳ ವಿಚಾರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧವಾಗಿವೆ. ಪ್ರಸ್ತುತ ಸಂಸತ್ತಿನ ಮುಂಗಾರು ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಬಲಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಒಂದು ಕಡೆ ಎನ್‌ಡಿಎ ಸರ್ಕಾರವು ತನ್ನ ಶಾಸನಬದ್ಧ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಮಹಿಳಾ ಮೀಸಲಾತಿ ಹಾಗೂ ಡಿಲಿಮಿಟೇಶನ್ (ಕ್ಷೇತ್ರ ವಿಂಗಡಣೆ) ನಂತಹ ಪ್ರಮುಖ ವಿಷಯಗಳಲ್ಲಿ ಸಂಖ್ಯಾಬಲವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ.
ಇನ್ನೊಂದೆಡೆ, ವಿರೋಧ ಪಕ್ಷಗಳು ತಮ ಆಂತರಿಕ ಭಿನ್ನಮತ ಮತ್ತು ಪಕ್ಷಾಂತರಗಳ ನಡುವೆಯೂ ನೀಟ್ ಹಗರಣ ಮತ್ತು ರಾಮ ಮಂದಿರ ದೇಣಿಗೆ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಜನಸಾಮಾನ್ಯರ ಮುಂದೆ ತೇಜೋವಧೆ ಮಾಡಲು ಪ್ರಯತ್ನಿಸುತ್ತಿವೆ.
ಈ ಅಧಿವೇಶನವು ದೇಶದ ರಾಜಕೀಯ ಸ್ಥಿರತೆಯ ದೃಷ್ಟಿಯಿಂದ ನಿರ್ಣಾಯಕವಾಗಿದ್ದು, ಸದನದಲ್ಲಿ ನಡೆಯುವ ಚರ್ಚೆಗಳು ಮುಂದಿನ ದಿನಗಳಲ್ಲಿ ದೇಶದ ಆಡಳಿತದ ದಿಕ್ಕನ್ನು ನಿರ್ಧರಿಸಲಿವೆ.ಪ್ರಸ್ತುತ ನವದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಸೋನಮ್ ವಾಂಗ್ಚುಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಅಧಿವೇಶನದ ಮೇಲೆ ನೇರ ಪರಿಣಾಮ ಬೀರಲಿದೆ.
ಪ್ರತಿಧ್ವನಿಸಲಿರುವ ಪ್ರಮುಖ ವಿಷಯಗಳು :
ನೀಟ್ ಪರೀಕ್ಷೆ ಅಕ್ರಮ:
2026ರ ನೀಟ್-ಯುಜಿ ಪರೀಕ್ಷೆಯ ಅಕ್ರಮ ಪ್ರಕರಣವು ಪ್ರತಿಪಕ್ಷಗಳ ಪ್ರಮುಖ ಅಸ್ತ್ರವಾಗಿದೆ. ಈ ಕುರಿತು ಈಗಾಗಲೇ ಸಂಸದೀಯ ಸಮಿತಿ ಪರಿಶೀಲನೆ ನಡೆಸುತ್ತಿದ್ದು, ಸದನದಲ್ಲಿ ಈ ವಿಷಯದ ಬಗ್ಗೆ ತೀವ್ರ ಚರ್ಚೆ ಮತ್ತು ಗದ್ದಲ ಉಂಟಾಗುವ ಸಾಧ್ಯತೆ ಇದೆ.
ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ :
ರಾಮ ಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ಕಳವು ಪ್ರಕರಣವು ಪ್ರತಿಪಕ್ಷಗಳಿಗೆ ರಾಜಕೀಯ ದಾಳವಾಗಿದೆ. ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಈ ವಿಚಾರವಾಗಿ ಸಂಸತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುವುದು ಖಚಿತ.
ರಕ್ಷಣಾ ಸಚಿವರ ವಿರುದ್ಧ ಹಕ್ಕುಚ್ಯುತಿ :
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿರುದ್ಧ ಹಕ್ಕುಚ್ಯುತಿ ನಡಾವಳಿಗಳನ್ನು ಕೈಗೊಳ್ಳುವ ವಿಷಯವೂ ಚರ್ಚೆಯಾಗಲಿದೆ.
ಐದು ಮಸೂದೆಗಳ ಮಂಡನೆ :
ಆದಾಯ ತೆರಿಗೆ (ತಿದ್ದುಪಡಿ) ಮಸೂದೆ, 2026.
ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ, 2026 (ವಂದೇ ಮಾತರಂ ಗಾಯನದ ಸಂದರ್ಭದಲ್ಲಿನ ಅಡ್ಡಿಪಡಿಸುವಿಕೆಗೆ ಶಿಕ್ಷೆ).
ಎಂಎಸ್‌ಎಂಇ ಅಭಿವೃದ್ಧಿ (ತಿದ್ದುಪಡಿ) ಮಸೂದೆ, 2026.
ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026.
ನೋಂದಣಿ (ಜನನ ಮತ್ತು ಮರಣ) ತಿದ್ದುಪಡಿ ಮಸೂದೆ.
