ಮೈಸೂರು,ಜು.18- ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು ವರ್ಷಪೂರ್ತಿ ಕಾರ್ಯ ನಿರ್ವಹಿಸುವ ಅಮ್ಯೂಸೆಂಟ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಪ್ರಾಧಿಕಾರದ ಮುಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರಾದ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಭಾಂಗಣದಲ್ಲಿ 2026ರ ದಸರಾ ವಸ್ತು ಪ್ರದರ್ಶನ ಆಯೋಜನೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಈ ಬಾರಿಯ ವಸ್ತು ಪ್ರದರ್ಶನವು ದಸರಾ ಹಬ್ಬದಿಂದ ಆರಂಭವಾಗಿ ಒಟ್ಟು 90 ದಿನಗಳ ಕಾಲ, ಅಂದರೆ 2027ರ ಜನವರಿ 8 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದ್ದು, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಕಳೆದ ವರ್ಷಗಳಲ್ಲಿ 8 ಮತ್ತು 9 ಲಕ್ಷದಷ್ಟಿದ್ದ ಪ್ರವಾಸಿಗರ ಸಂಖ್ಯೆಯು ಪ್ರಸ್ತುತ ಸಾಲಿನಲ್ಲಿ ಅಧಿಕಾರಿಗಳ ಉತ್ತಮ ನಿರ್ವಹಣೆಯಿಂದಾಗಿ ಬರೋಬ್ಬರಿ 15 ಲಕ್ಷದ ಗಡಿಯನ್ನು ದಾಟಿ ದಾಖಲೆ ಬರೆದಿದೆ. ಪ್ರವಾಸಿಗರ ಭೇಟಿಯನ್ನು ಮತ್ತಷ್ಟು ಸುಲಭ ಹಾಗೂ ಆರಾಮದಾಯಕವಾಗಿಸಲು 4 ಕೋಟಿ ರೂಪಾಯಿ ವೆಚ್ಚದಲ್ಲಿ 32 ಶಾಶ್ವತ ಮಳಿಗೆಗಳನ್ನು ಹಾಗೂ ಮಳೆ-ಬಿಸಿಲಿನಿಂದ ರಕ್ಷಣೆ ನೀಡುವ ಅತ್ಯಾಧುನಿಕ ಶೆಲ್ಟರ್ ಒಳಗೊಂಡ ಶಾಶ್ವತ ಫುಡ್ ಕೋರ್ಟ್ ವ್ಯವಸ್ಥೆಯನ್ನು ಆವರಣದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಪ್ರತಿ ವರ್ಷ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸುವ ವೆಚ್ಚವನ್ನು ತಪ್ಪಿಸಲು ಸಿದ್ದರಾಮಯ್ಯ ಪ್ರದರ್ಶನ ಅಂಗಳದಲ್ಲಿ ಈಗಾಗಲೇ ಕಾಯಂ ಮಳಿಗೆಗಳನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಸಾರ್ವಜನಿಕರ ನೆಚ್ಚಿನ ಆಕರ್ಷಣೆಗಳಾದ ಸಂಗೀತ ಕಾರಂಜಿ ಹಾಗೂ ಲೇಸರ್ ಶೋ, ಬೋಟಿಂಗ್ ಮತ್ತು ಬೆಂಕಿ ಉಗುಳುವ ಡ್ರ್ಯಾಗನ್ ಪ್ರದರ್ಶನ ಒಳಗೊಂಡ ರಾಜೀವ್ ಗಾಂಧಿ ಡ್ರ್ಯಾಗನ್ ಪಾಂಡ್ ಮನರಂಜನಾ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದುವರಿಸಲಾಗುತ್ತಿದ್ದು, ಮೈದಾನದ ಒಳಭಾಗದಲ್ಲಿ ರಸ್ತೆ ಮತ್ತು ಕುಡಿಯುವ ನೀರಿನಂತಹ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಹೇಳಿದರು.
ಕಳೆದ ಬಾರಿಯಂತೆ ಈ ಬಾರಿಯೂ ದಸರಾ ವಸ್ತುಪ್ರದರ್ಶನಕ್ಕೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ವಸ್ತುಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿದ್ದು, ಲಕ್ಷಾಂತರ ಜನ ಭೇಟಿ ನೀಡುವುದರಿಂದ ಅದರ ಅಭಿವೃದ್ಧಿಗೆ ಅನುದಾನದ ಅಗತ್ಯವಿದೆ.
ದಸರಾ ಶಾಶ್ವತ ಪ್ರಾಧಿಕಾರ ರಚನೆ ಮಾಡಬೇಕೆಂಬ ಬೇಡಿಕೆ ಪ್ರತಿ ವರ್ಷದಂತೆ ಈ ಬಾರಿಯೂ ಬಂದಿದ್ದು, ಮುಖ್ಯಮಂತ್ರಿಗಳು ಇದನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡು ಕೇವಲ ಒಂದು ತಿಂಗಳಷ್ಟೇ ಆಗಿರುವುದರಿಂದ, ಮುಂದಿನ ತಿಂಗಳು ಕಡ್ಡಾಯವಾಗಿ ಕೆ.ಡಿ.ಪಿ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದರ್ಶನ ಪ್ರಾಧಿಕಾರದ ಅಧಕ್ಷ ಅಯೂಬ್ ಖಾನ್ ಮತ್ತು ವಿಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
