ಬೆಂಗಳೂರು,ಜು.21- ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಡ್ರಗ್ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ 7 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ 28 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದೆಹಲಿಯ ನಾಲ್ವರು, ಕೇರಳದ ಒಬ್ಬ ಹಾಗೂ ರಾಜಸ್ಥಾನದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12.925 ಕೆಜಿ ಎಂಡಿಎಂಎ ಕ್ರಿಸ್ಟೆಲ್, 60 ಕೊಕೇನ್,32.470 ಕೆಜಿ ಗಾಂಜಾ, 7 ಕೆಜಿ ಅಫೀಮು, 225 ಗ್ರಾಂ ಮೆಫೆ ಡ್ರೋನ್ ಹಾಗೂ ಕೃತ್ಯಕ್ಕೆ ಬಳಸಿದ 6 ಮೊಬೈಲ್‌ಗಳು, ಕಾರು ಮತ್ತು ಬೈಕ್‌ನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಇನ್‌್ಸಪೆಕ್ಟರ್ ಪ್ರವೀಣ್ ಯಲಿಗಾರ್ ನೇತೃತ್ವದ ತಂಡ ಕೈಗೊಂಡು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ದೆಹಲಿಯಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಬಳಿ ಈ ನಾಲ್ವರು ಸಬ್ ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಪೂರ್ವ ಯೋಜನೆಯಂತೆ ಬೆಂಗಳೂರಿನ ಗಿರಾಕಿಗಳಿಗೆ ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದ ನಾಲ್ವರು ಇದೀಗ ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಬಂಧಿತರಿಂದ 26.45 ಕೋಟಿ ಮೌಲ್ಯದ 12.925 ಕೆಜಿ ಎಂಡಿಎಂಎ ಕ್ರಿಸ್ಟೆಲ್, 60 ಗ್ರಾಂ ಕೊಕೇನ್, ಕೃತ್ಯಕ್ಕೆ ಬಳಸಿದ 5 ಮೊಬೈಲ್‌ಗಳು, ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.ಅದೇ ರೀತಿ ವಿಲ್ಸನ್‌ಗಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಕೇರಳದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳೆದ 20 ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದುಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದುದ್ದಾಗಿ ಬಾಯ್ಬಿಟ್ಟಿದ್ದಾನೆ.ಈತನಿಂದ 32.47 ಲಕ್ಷ ಮೌಲ್ಯದ 32.470 ಕೆಜಿ ಗಾಂಜಾ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಈತನ ವಿರುದ್ಧ 2023 ರಲ್ಲಿ ಸಂಜಯನಗರ ಠಾಣೆಯಲ್ಲಿ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿದ್ದು, ಬಂಧಿತನಾಗಿ ಬಿಡುಗಡೆಯಾದ ನಂತರವು ಮತ್ತೆ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.
ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಮೂಲತಃ ರಾಜಸ್ಥಾನದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ 1.15 ಕೋಟಿ ಮೌಲ್ಯದ 7 ಕೆಜಿ ಅಫೀಮು, 225 ಗ್ರಾಂ ಮೆಫೆಡ್ರೋನ್ ಜಪ್ತಿ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.ನಗರದಲ್ಲಿರುವ ಡ್ರಗ್ ಪೆಡ್ಲರ್‌ಗಳೊಂದಿಗೆ ಈ ಆರೋಪಿಗಳಿಗಿರುವ ನೆಟ್‌ವರ್ಕ್ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ರಾಜಸ್ಥಾನದ ಮೂವರ ಬಂಧನ : 33.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಬೆಂಗಳೂರು,ಜು.21-ಮನೆಗಳ್ಳತನ ಮಾಡುತ್ತಿದ್ದ ರಾಜಸ್ಥಾನದ ಮೂವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ 33.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನದ ರಾಜನವಾಡಿ ಗ್ರಾಮದಲ್ಲಿ ಒಬ್ಬಾತನನ್ನು ಹಾಗೂ ಗುಜರಾತ್‌ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಬೈರೇಗೌಡ ಲೇಔಟ್‌ನ ನಿವಾಸಿ ಯೊಬ್ಬರ ಮನೆಯ ಬೀಗ ಮುರಿದು ಒಳನುಗ್ಗಿದ ಚೋರರು ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.ಮನೆ ಕಳವು ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಮುಂದುವರೆಸಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ, ಒಂದು ತಂಡ ರಾಜಸ್ಥಾನಕ್ಕೆ ತೆರಳಿ ಅಲ್ಲಿನ ರಾಜನವಾಡಿ ಗ್ರಾಮದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗುಜರಾತ್‌ನಲ್ಲಿ ಇನ್ನಿಬ್ಬರು ಇರುವುದಾಗಿ ಬಾಯ್ಬಿಟ್ಟಿದ್ದಾನೆ.
ಮತ್ತೊಂದು ತಂಡ ಗುಜರಾತ್‌ಗೆ ತೆರಳಿ ಅಲ್ಲಿನ ಸರ್ದಾರ್ ನಗರದಲ್ಲಿ ಮತ್ತೋಬ್ಬನನ್ನು, ಹಾಗೂ ವಲ್ಸಾಡ್ ಜಿಲ್ಲೆಯ ನಾನಾ ಪಂಡ್ ನಲ್ಲಿ ಇನ್ನೊಬ್ಬನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾರೆ. ಈ ಮೂವರು ಆರೋಪಿ ಗಳನ್ನು ಸುಧೀರ್ಘವಾಗಿ ವಿಚಾರಣೆ ಗೊಳಪಡಿಸಿದಾಗ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡುವ ಸಲುವಾಗಿ ಚೆನ್ನೈನಲ್ಲಿ ವಾಸವಿರುವ ಸ್ನೇಹಿತನ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ 187 ಗ್ರಾಂ ಚಿನ್ನಾಭರಣಗಳು, 1 ಕೆಜಿ 371 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಲತೇಶ್ ಕುಮಾರ್ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.
ಚಿನ್ನವನ್ನು ಕಸದ ಗಾಡಿಯಲ್ಲಿ ಬಚ್ಚಿಟ್ಟಿದ್ದ
ಬೆಂಗಳೂರು,ಜು.21- ಜೆ.ಪಿ.ನಗರ ಠಾಣೆ ಪೊಲೀಸರು ಮನೆಗಳ್ಳನನ್ನು ಬಂಧಿಸಿ ಕಸದ ಗಾಡಿಯಲ್ಲಿ ಅಡಗಿಸಿಟ್ಟಿದ್ದ 31.56 ಲಕ್ಷ ಮೌಲ್ಯದ 225 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.ಮನೆಯನ್ನು ಬೀಗ ಹಾಕಿ ಹೊರಗೆ ಹೋಗಿದ್ದ ವೇಳೆ, ಅಪರಿಚಿತ ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿ ಪರಾರಿಯಾಗಿದ್ದ ಬಗ್ಗೆ ಜೆ.ಪಿ.ನಗರ ಪೊಲೀಸ್ ಠಾಣೆಗೆ ಮನೆ ಮಾಲೀಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಖಚಿತ ಮಾಹಿತಿಯ ಮೇರೆಗೆ ಜುಲೈ 16ರಂದು ಸಾರಕ್ಕಿ ಮಾರ್ಕೆಟ್ ಸಮೀಪ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳುವು ಘಟನೆ ಬೆಳಕಿಗೆ ಬಂದಿದೆ.
ಕಳವು ಮಾಡಿದ ಚಿನ್ನಾಭರಣವನ್ನು ಜೆ.ಪಿ.ನಗರ 1ನೇ ಹಂತದ ದೇವಾಲಯವೊಂದರ ಹಿಂಭಾಗದಲ್ಲಿದ್ದ ಕಸದ ಗಾಡಿಯಲ್ಲಿ ಅಡಗಿಸಿಟ್ಟಿರುವ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಜುಲೈ 18ರಂದು ಪೊಲೀಸರು 225 ಗ್ರಾಂ ಚಿನ್ನಾಭರಣವವಶಪಡಿಸಿಕೊಂಡಿದ್ದಾರೆ.ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಕೆ. ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಲಕ್ಷ್ಮೀನಾರಾಯಣಅವರ ನೇತೃತ್ವದಲ್ಲಿ, ಜೆ.ಪಿ.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಹರೀಶ್ ವಿ. ಹಾಗೂ ಸಿಬ್ಬಂದಿಯ ತಂಡ ಯಶಸ್ವಿಯಾಗಿ ನಡೆಸಿದೆ.
ಕೇರಳದ ನಾಲ್ವರು ಶ್ರೀಗಂಧ ಚೋರರ ಬಂಧನ
ಬೆಂಗಳೂರು,ಜು.21-ಶ್ರೀಗಂಧದ ಮರಗಳ ತುಂಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಕೇರಳದ ನಾಲ್ವರು ಚೋರರನ್ನು ಸಿಸಿಬಿ ಪೊಲೀಸರು ಬಂಧಿಸಿ 20.90 ಲಕ್ಷ ಮೌಲ್ಯದ 82 ಕೆಜಿ 615 ಗ್ರಾಂ ಶ್ರೀಗಂಧ ಮರದ ತುಂಡುಗಳು, 2 ಕಾರು ಮತ್ತು 5 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ನಾಗರಭಾವಿಯ ಎನ್‌ಜಿಇಎಪ್ ಲೇಔಟ್‌ನ ಹೋಟೆಲ್‌ವೊಂದರ ಹತ್ತಿರ ಶ್ರೀಗಂಧದ ಮರಗಳನ್ನು ಕಳುವು ಮಾಡಿಕೊಂಡು ಬಂದು ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದರ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡರು.
ಸ್ಥಳದ ಮೇಲೆ ದಾಳಿ ಮಾಡಿ ಶ್ರೀಗಂಧದ ಮರದ ತುಂಡುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಶ್ರೀಗಂಧ ಚೋರರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ಧೇಶದಿಂದ ಕೇರಳ ರಾಜ್ಯದಿಂದ ಶ್ರೀಗಂಧದ ಮರದ ತುಂಡುಗಳನ್ನು ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.
ಆರೋಪಿಗಳ ವಶದಲ್ಲಿದ್ದ 2 ಕಾರುಗಳು ಹಾಗೂ ಅದರಲ್ಲಿದ್ದ 46 ಕೆಜಿ 950 ಗ್ರಾಂ ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಕೇರಳ ರಾಜ್ಯದ ಮಹಾನಂತವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡಿಕಡವು ಗ್ರಾಮದ ಮನೆಯೊಂದರ ಬಳಿ 35 ಕೆಜಿ 665 ಗ್ರಾಂ ಶ್ರೀಗಂಧ ಮರದ ತುಂಡುಗಳನ್ನು ಇಟ್ಟಿರುವುದಾಗಿ ಬಾಯ್ಬಿಟ್ಟಿದ್ದು ಈ ಮಾಹಿತಿ ಮೇರೆಗೆ ಅವುಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
ಮನೆಗಳ್ಳನ ಬಂಧನ:36 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಬೆಂಗಳೂರು,ಜು.21- ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ, 36 ಲಕ್ಷ ಮೌಲ್ಯದ 297 ಗ್ರಾಂ ಚಿನ್ನಾಭರಣವನ್ನು ವಶಪಡಿಸಿ ಕೊಂಡಿದ್ದಾರೆ.ಜುಲೈ 11ರ ರಾತ್ರಿ, ಸರ್‌ಎಂ.ವಿ. ನಗರದ ನಿವಾಸಿಯೊಬ್ಬರ ಮನೆಯ ಬಾಗಿಲಿನ ಲಾಕ್ ಮುರಿದು ಒಳಗೆ ನುಗ್ಗಿ ಕೋಣೆಯ ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಲಾಗಿತ್ತು.
ಈ ಬಗ್ಗೆ ಮನೆ ಮಾಲೀಕರು ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಖಚಿತ ಮಾಹಿತಿಯ ಮೇರೆಗೆ ಜು.13ರಂದು ಹೆಣ್ಣೂರು ಬಂಡೆ ಸಮೀಪ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ವಿಚಾರಣೆ ವೇಳೆ, ಆರೋಪಿ ಯು ಈ ಕಳ್ಳತನದಲ್ಲಿ ಬಾಗಿಯಾಗಿ ರುವುದು ಗೊತ್ತಾಗಿದೆ.ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಇದೇ ರೀತಿಯ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ವೇಳೆ, ಕಳವು ಮಾಡಿದ್ದ ಚಿನ್ನಾಭರಣವನ್ನು ಮಾರಾಟ ಮಾಡುವ ಉದ್ದೇಶ ದಿಂದ ಕೆಜಿಎಫ್ ಸಮೀಪದ ಆಂಡರ್ಸನ್‌ಪೇಟೆಯಲ್ಲಿರುವ ತನ್ನ ಮನೆಯಲ್ಲಿ ಇರಿಸಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ.
ಈ ಮಾಹಿತಿಯ ಆಧಾರದ ಮೇಲೆ ಆರೋಪಿಯ ಮನೆ ಯಲ್ಲಿ ಶೋಧ ನಡೆಸಿದ ಪೊಲೀಸರು, 297 ಗ್ರಾಂ ವಿವಿಧ ಮಾದರಿಯ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ವಿಕ್ರಮ್ ಅಮಟೆ ಅವರ ಮಾರ್ಗದರ್ಶನದಲ್ಲಿ, ಬಾಣಸವಾಡಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ.ಅವರ ನೇತೃತ್ವದಲ್ಲಿ, ರಾಮಮೂರ್ತಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ. ಹಾಗೂ ಸಿಬ್ಬಂದಿಯ ತಂಡ ಯಶಸ್ವಿಯಾಗಿ ನಡೆಸಿದೆ.
