ಬೆಂಗಳೂರು,ಜು.22-ನಗರಾದ್ಯಂತ ತೀವ್ರ ಆಘಾತ ಮತ್ತು ಸಂಚಲನ ಮೂಡಿಸಿದ್ದ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮತ್ತು ಬೆಚ್ಚಿಬೀಳಿಸುವ ಅಂಶಗಳನ್ನು ಪೊಲೀಸರು ತನಿಖೆಯಲ್ಲಿ ಹೊರಹಾಕಿದ್ದಾರೆ. ಕಳೆದ ತಿಂಗಳಲ್ಲಿ ನಡೆದ ಈ ಭೀಕರ ತ್ರಿವಳಿ ಹತ್ಯೆಯು ಯಾವುದೇ ಆಕಸಿಕ ಕೃತ್ಯವಲ್ಲ, ಬದಲಾಗಿ ಅತ್ಯಂತ ನಿಖರವಾಗಿ ಹಾಗೂ ಕುತಂತ್ರದಿಂದ ರೂಪಿಸಲಾದ ಪೂರ್ವಯೋಜಿತ ಸಂಚು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಕೆನತ್, ಕೊಲೆ ಮಾಡುವುದು ಹೇಗೆ? ಮತ್ತು ಮೃತದೇಹಗಳನ್ನು ವಿಲೇವಾರಿ ಮಾಡುವುದು ಹೇಗೆ ಎಂಬ ಕುರಿತು ಮಾಹಿತಿ ಪಡೆಯಲು ಗೂಗಲ್ನ ಕೃತಕ ಬುದ್ಧಿಮತ್ತೆ (ಎಐ) ಸಹಾಯಕ ಜೆಮಿನಿಯನ್ನು ವ್ಯಾಪಕವಾಗಿ ಬಳಸಿಕೊಂಡಿದ್ದನೆಂಬ ಅಂಶವನ್ನು ಪೊಲೀಸ್ ಮೂಲಗಳು ಅಧಿಕೃತವಾಗಿ ಬಹಿರಂಗಪಡಿಸಿವೆ.
ಘಟನೆಯ ಹಿನ್ನೆಲೆ :
ಕಳೆದ ಜೂನ್ ತಿಂಗಳಲ್ಲಿ ನಗರದ ಕೆಆರ್ಪುರ ಪ್ರದೇಶದ ಅಪಾರ್ಟ್ಮೆಂಟ್ ಒಂದರಲ್ಲಿ 55 ವರ್ಷದ ವ್ಯಕ್ತಿ, ಅವರ 48 ವರ್ಷದ ಪತ್ನಿ ಹಾಗೂ 20 ವರ್ಷದ ಯುವತಿಯನ್ನು ಅತ್ಯಂತ ಕ್ರೂರವಾಗಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.
ಪ್ರಾಥಮಿಕ ತನಿಖೆಯ ವೇಳೆ ಮೃತರ 25 ವರ್ಷದ ಮಗಳು ಶ್ವೇತಾ ಹಾಗೂ ಆಕೆಯೊಂದಿಗೆ ಸಹಜೀವನ ನಡೆಸುತ್ತಿದ್ದ ಕೆನತ್ ಮೇಲೆ ಪೊಲೀಸರಿಗೆ ಸಂಶಯ ಮೂಡಿತ್ತು. ಲೆಮರೆಸಿಕೊಂಡಿದ್ದ ಈ ಜೋಡಿಯನ್ನು ಪುದುಚೇರಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.ಜೂ. 24 ರಂದು ಶ್ವೇತಾಳನ್ನು ಮತ್ತು ಜೂ.25 ರಂದು ಕೆನತ್ನನ್ನು ವಶಕ್ಕೆ ಪಡೆಯಲಾಗಿತ್ತು.
ಎಐ ಚಾಟ್ಬಾಟ್ ಮೊರೆ ಹೋದ ಆರೋಪಿ:
ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಕೆನತ್ ನೇರವಾಗಿ ಕೊಲೆ ಮಾಡುವುದು ಹೇಗೆ? ಎಂದು ಹುಡುಕಾಟ ನಡೆಸಿರಲಿಲ್ಲ. ಬದಲಾಗಿ, ತಂತ್ರಗಾರಿಕೆಯಿಂದ ಪರೋಕ್ಷ ಪ್ರಶ್ನೆಗಳನ್ನು ಕೇಳುವ ಮೂಲಕ ಮಾಹಿತಿ ಕಲೆಹಾಕಿದ್ದನು.
ನನ್ನ ಮನೆಗೆ ಕಳ್ಳರು ನುಗ್ಗಿದ್ದಾರೆ, ನಾನು ಅವರ ಮೇಲೆ ಹೇಗೆ ದಾಳಿ ಮಾಡಲಿ? ಅದಕ್ಕೆ ಯಾವ ಆಯುಧಗಳನ್ನು ಬಳಸಲಿ? ಎಂಬ ರೀತಿಯಲ್ಲಿ ಆತ ಜೆಮಿನಿಯ ಸಹಾಯ ಪಡೆದಿದ್ದನು.
ಪೊಲೀಸ್ ಮೂಲಗಳ ಪ್ರಕಾರ, ಎಐ ಚಾಟ್ಬಾಟ್ ಬಳಸಿ ವ್ಯಕ್ತಿಯೊಬ್ಬರ ಕಣ್ಣಿಗೆ ಕಾಣದಂತೆ ಮಾಡಿ ನಂತರ ಅವರನ್ನು ಚಾಕುವಿನಿಂದ ಇರಿಯುವ ವಿಧಾನಗಳ ಬಗ್ಗೆಯೂ ಕೆನತ್ ಮಾಹಿತಿ ಹುಡುಕಿದ್ದನು.
ಮೂಲತಃ ಕ್ಲೌಡ್ ಕಿಚನ್ ಉದ್ಯಮಕ್ಕಾಗಿ ಖರೀದಿಸಲಾಗಿದ್ದ ಕಬ್ಬಿಣದ ಕುಲುಮೆಯನ್ನು ಹತ್ಯೆಯ ನಂತರ ಶವಗಳನ್ನು ಸುಟ್ಟು ವಿಲೇವಾರಿ ಮಾಡಲು ಬಳಸುವ ಬಗ್ಗೆಯೂ ಆತ ಯೋಚಿಸಿದ್ದನು.
ಆದರೆ, ಇದು ಪ್ರಾಯೋಗಿಕವಾಗಿ ಕಾರ್ಯಸಾಧ್ಯವಲ್ಲ ಎಂದು ಅರಿತು ಆ ಯೋಜನೆಯನ್ನು ಕೈಬಿಟ್ಟಿದ್ದನು.
ಈ ಭೀಕರ ಕೃತ್ಯದ ಹಿಂದೆ ಆರ್ಥಿಕ ಕಾರಣವಿತ್ತು. ಕುಟುಂಬವನ್ನು ಹತ್ಯೆ ಮಾಡಿ ಅವರ ಸಂಪತ್ತನ್ನು ದೋಚಿದರೆ, ತಾನು ಎದುರಿಸುತ್ತಿದ್ದ ಆರ್ಥಿಕ ಒತ್ತಡಗಳು ಹಾಗೂ ಸಾಲದ ಬಾಧೆಯಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಬಹುದು ಎಂದು ಕೆನತ್ಭಾವಿಸಿದ್ದನು. ಶ್ವೇತಾಳ ಪೋಷಕರು ಜೀವಂತವಾಗಿದ್ದರೆ ತಮಗೆ ನಿರಂತರ ಹಣದ ಸಮಸ್ಯೆ ಇರುತ್ತದೆ ಮತ್ತು ಅವರ ಮರಣದ ನಂತರ ಆ ಒತ್ತಡಗಳು ಮಾಯವಾಗುತ್ತವೆ ಎಂದು ಆತ ನಂಬಿದ್ದನು.
ಆರಂಭದಲ್ಲಿ ಕೆನತ್ ಇಂತಹ ಮಾತುಗಳನ್ನು ಆಡುವಾಗ, ಶ್ವೇತಾ ಆತನ ಮಾತನ್ನು ಕೇವಲ ಹರಟೆ ಅಥವಾ ಜೋಕ್ ಎಂದುಕೊಂಡಿದ್ದಳೇ ಹೊರತು, ಆತ ನಿಜಕ್ಕೂ ತನ್ನ ಕುಟುಂಬವನ್ನು ಹತ್ಯೆ ಮಾಡುವ ಕ್ರೂರ ಯೋಜನೆ ರೂಪಿಸುತ್ತಿದ್ದಾನೆ ಎಂಬುದನ್ನು ಊಹಿಸಿರಲಿಲ್ಲ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನವನ್ನು ಅಪರಾಧ ಕೃತ್ಯಗಳಿಗೆ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ಇಂತಹ ಪ್ರಕರಣಗಳು ಸಮಾಜದಲ್ಲಿ ತೀವ್ರ ಕಳವಳ ಮೂಡಿಸಿವೆ.
