ನವದೆಹಲಿ,ಜು.26- ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿರುವ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಮತ್ತು ವಿದ್ಯಾರ್ಥಿ ಸಂಘಟನೆಗಳ ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪರೀಕ್ಷಾ ವ್ಯವಸ್ಥೆಯನ್ನು ಶುದ್ಧೀಕರಿಸಲು ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ವಿವಾದದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ, 2026 ಅನ್ನು ಮಂಡಿಸಲು ಅಧಿಕೃತವಾಗಿ ಸಜ್ಜಾಗಿದೆ.
ಲೋಕಸಭೆಯ ಶಾಸನೀಯ ಕಾರ್ಯಸೂಚಿಯ ಪ್ರಕಾರ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ಮಾರ್ಗಗಳ ತಡೆಗಟ್ಟುವಿಕೆ) ಕಾಯ್ದೆ, 2024ಕ್ಕೆ ತಿದ್ದುಪಡಿ ತರುವ ಈ ನೂತನ ಮಸೂದೆಯನ್ನು ಸದನದಲ್ಲಿ ಮಂಡಿಸಲಿದ್ದಾರೆ.
ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026ರ ಪ್ರಮುಖ ಮುಖ್ಯಾಂಶಗಳು:
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಈ ಮಸೂದೆಯು ಅತ್ಯಂತ ಕಠಿಣ ಕಾನೂನು ಚೌಕಟ್ಟನ್ನು ಪ್ರಸ್ತಾಪಿಸಿದೆ.
ಭಾರೀ ದಂಡ ಮತ್ತು ಜೈಲು ಶಿಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ವ್ಯವಸ್ಥಿತ ಅಕ್ರಮಗಳಲ್ಲಿ ಭಾಗಿಯಾಗುವ ಸಂಘಟಿತ ಜಾಲಗಳು ಹಾಗೂ ದೋಷಿಗಳಿಗೆ ಕನಿಷ್ಠ 5ರಿಂದ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ 10 ಕೋಟಿ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಕಾಲಮಿತಿಯ ತನಿಖೆ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಯನ್ನು ಕೇವಲ ಎರಡು ತಿಂಗಳೊಳಗೆ (60 ದಿನಗಳು) ಪೂರ್ಣಗೊಳಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮ ರೂಪಿಸಲಾಗಿದೆ.
ವಿಶೇಷ ತ್ವರಿತಗತಿ ನ್ಯಾಯಾಲಯಗಳು ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ಆರೋಪಪಟ್ಟಿ ಸಲ್ಲಿಕೆಯಾದ ಮೂರು ತಿಂಗಳೊಳಗೆ ದಿನನಿತ್ಯದ ವಿಚಾರಣೆ ನಡೆಸಿ ತೀರ್ಪು ನೀಡಲು ಈ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ.
ವಿಶೇಷ ಕಾರ್ಯಪಡೆ
ಅಗತ್ಯಬಂದಾಗಲೆಲ್ಲಾ ಪರೀಕ್ಷಾ ಅಕ್ರಮಗಳ ತನಿಖೆಗಾಗಿ ಕೇಂದ್ರ ಸರ್ಕಾರವು ಪ್ರತ್ಯೇಕ ವಿಶೇಷ ಕಾರ್ಯಪಡೆಯನ್ನು ರಚಿಸುವ ಅಧಿಕಾರವನ್ನು ಈ ಕಾನೂನು ನೀಡುತ್ತದೆ. ವಿಶೇಷ ಕಾರ್ಯಪಡೆ ಅಗತ್ಯವಿದ್ದಾಗಲೆಲ್ಲಾ ಪರೀಕ್ಷಾ ಹಗರಣಗಳ ತನಿಖೆಗಾಗಿ ಪ್ರತ್ಯೇಕ ವಿಶೇಷ ಕಾರ್ಯಪಡೆ ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಅಧಿಕೃತ ಅನುಮೋದನೆ ದೊರೆತಿದೆ. ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸ್ಪರ್ಧಾತಕ ಪರೀಕ್ಷೆಗಳ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವುದೇ ಪ್ರಭಾವಿ ಜಾಲಗಳು ಅಥವಾ ನಕಲು ಸಿಂಡಿಕೇಟ್‌ಗಳು ಪರೀಕ್ಷಾ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ಈ ನೂತನ ಕಾಯ್ದೆಯು ಬಲವಾದ ಅಸ್ತ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮೇ 3ರಂದು ನಡೆದ ನೀಟ್-ಯುಜಿ 2026 ಪರೀಕ್ಷೆಯಲ್ಲಿ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದ ನಂತರ, ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಜನರು ವಾರಗಟ್ಟಲೆ ನಿರಂತರ ಪ್ರತಿಭಟನೆಗಳನ್ನು ನಡೆಸಿದ್ದರು. ಸಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ವಿದ್ಯಾರ್ಥಿ ಮುಖಂಡರು ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು. ವಿದ್ಯಾರ್ಥಿಗಳ ಆಕ್ರೋಶ ಹಾಗೂ ಪ್ರತಿಭಟನೆಯ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ದೇಶದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಮತ್ತು ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ತಡೆಯಲು ಈ ಕಠಿಣ ತಿದ್ದುಪಡಿ ಮಸೂದೆಯನ್ನು ಮುನ್ನಡೆಸುತ್ತಿದೆ.
