ಬೆಂಗಳೂರು, ಜು.26- ಮಹಿಳೆಯೊಬ್ಬರ ಅಶ್ಲೀಲ ಮಾರ್ಫ್ ಮಾಡಿದ ಫೋಟೊಗಳನ್ನು ಅವರಿಗೇ ಕಳುಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವು ದಾಗಿ ಬೆದರಿಕೆಯೊಡ್ಡಿದ ಸೈಬರ್ ವಂಚಕರು 48 ಲಕ್ಷ ರೂ. ಹಣವನ್ನು ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯೊಬ್ಬರು ಮನೆ ಲೋನ್ ಪಡೆಯಲು ಪ್ಯಾನ್‌ಕಾರ್ಡ್, ಆಧಾರ್, ಕಚೇರಿ ವಿವರಗಳು ಹಾಗೂ ಫೋಟೊ ಸೇರಿದಂತೆ ವೈಯಕ್ತಿಕ ಮಾಹಿತಿಯ ಲಿಂಕ್ ಕಳುಹಿಸಿ ಅರ್ಜಿ ಸಲ್ಲಿಸಿದ್ದರು.
ಸೈಬರ್ ವಂಚಕರು ಅದನ್ನು ಗಮನಿಸಿ ಕಳೆದು ಐದು ತಿಂಗಳಿನಿಂದ ಅಂತಾರಾಷ್ಟ್ರೀಯ ವಾಟ್ಸ್ಯಾಪ್ ಸಂಖ್ಯೆಗಳ ಮೂಲಕ ಬೆದರಿಕೆ ಕರೆ ಮಾಡಿ ಸಂದೇಶಗಳನ್ನು ಈ ಮಹಿಳೆಗೆ ಕಳುಹಿಸಿದ್ದಾರೆ. ನಿಮ್ಮ ಹೆಸರಿನಲ್ಲಿ ಈಗಾಗಲೇ ಹಲವು ಲೋನ್ ಆ್ಯಪ್‌ಗಳಿಂದ ಸಾಲ ಪಡೆದಿರುವುದಾಗಿ ಹೇಳಿ ಹಣ ಮರುಪಾವತಿಸುವಂತೆ ತಿಳಿಸಿದ್ದಾರೆ. ಬಳಿಕ ನೀವು ಹಣ ಪಾವತಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೆದರಿಸಿದ್ದಾರೆ.
ಈ ಮಹಿಳೆಯ ಅಶ್ಲೀಲ ಮಾರ್ಫ್ ಮಾಡಿದ ಫೋಟೊಗಳನ್ನು ಅವರಿಗೇ ಕಳುಹಿಸಿ, ಮಾನಹಾನಿಯ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಮಹಿಳೆ ಹಂತಹಂತವಾಗಿ 3.5 ಲಕ್ಷ ಹಣವನ್ನು ವಂಚಕರು ನೀಡಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ತದನಂತರದಲ್ಲಿ ತಾನು ಮೋಸ ಹೋಗಿರುವುದು ಅರಿವಿಗೆ ಬಂದು ತಮ್ಮ ಮೊಬೈಲ್ ಹಾಗೂ ಸಿಮ್ ಕಾರ್ಡ್ ಬದಲಾಯಿಸಿದ್ದಾರೆ. ಆದರೂ ವಂಚಕರು ಮಹಿಳೆಯ ಬೆನ್ನು ಬಿಟ್ಟಿಲ್ಲ. ಮಹಿಳೆ ಇತ್ತೀಚೆಗೆ ತಮ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಿದಾಗ 45 ಲಕ್ಷ ಹಣ ವರ್ಗಾವಣೆಯಾಗಿರುವುದು ಕಂಡು ಒಂದು ಕ್ಷಣ ಆತಂಕಕ್ಕೊಳಗಾಗಿ ಬ್ಯಾಂಕ್‌ಗೆ ದೂರು ನೀಡಿದ್ದಾರೆ. ತಮ್ಮ ಖಾತೆಯಿಂದ ಹಣ ವರ್ಗಾವಣೆಯಾಗಬೇಕಾದರೆ ಒಟಿಪಿ ಅಥವಾ ಎಸ್‌ಎಂಎಸ್ ಬರುತ್ತದೆ. ಇದ್ಯಾವುದೂ ಅವರಿಗೆ ಬಂದಿಲ್ಲದಿರುವುದು ಅನುಮಾನ ಮೂಡಿಸಿದೆ.
ಬ್ಯಾಂಕ್‌ನವರು ಸೈಬರ್ ಸಹಾಯವಾಣಿ 1930ಗೆ ದೂರು ನೀಡುವಂತೆ ತಿಳಿಸಿದ್ದಾರೆ. ಅದರಂತೆ ಸೈಬರ್‌ಕ್ರೈಂ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು ಸೈಬರ್ ವಂಚಕರಿಗಾಗಿ ಬಲೆ ಬೀಸಿದ್ದಾರೆ.
