ಚಿತ್ರದುರ್ಗ, ಜು.26- ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮತ್ತು ನಾಡಿದ್ದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಪಕ್ಷದ ವರಿಷ್ಠ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿಯವರು ಸಂಜೆ ಎಲ್ಲಾ ಪಕ್ಷಗಳ ಸಂಸದರ ಜೊತೆ ಸಭೆ ನಡೆಸಿ, ರಾಜ್ಯದ ಹಿತಾಸಕ್ತಿಗೆ ಅನುಗುಣವಾದ ವಿಚಾರಗಳ ಚರ್ಚೆ ನಡೆಸಲಿದ್ದಾರೆ.
ನಂತರ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಪ್ರಮುಖರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಬೇರೆ ಯಾವ ವಿಘ್ನಗಳು ಎದುರಾಗದೇ ಇದ್ದರೆ ಬುಧವಾರ ಅಥವಾ ಗುರುವಾರ ರಾಜ್ಯಪಾಲರ ಸಮಯ ನೋಡಿಕೊಂಡು ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಟ್ಟಿಗೆ ದೆಹಲಿಗೆ ತೆರಳಲಿದ್ದಾರೆ. ಈಗಾಗಲೇ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರೊಟ್ಟಿಗೆ ಬೆಂಗಳೂರಿನಲ್ಲಿ ಮೊನ್ನೆ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜೊತೆ ಸಮಗ್ರ ಚರ್ಚೆ ನಡೆಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ನಾಳೆ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ. ಅಗತ್ಯವಾದರೆ ಬಿ.ಕೆ.ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಲಿದ್ದಾರೆ.
ಈಗಾಗಲೇ ಎರಡು ವಾರಗಳ ಹಿಂದೆ ಒಂದು ಸುತ್ತಿನ ಚರ್ಚೆಯಾಗಿತ್ತು. ಆದರೆ ಅದು ಸರ್ವ ಸಮತವಾಗದ ಕಾರಣಕ್ಕೆ ಮತ್ತೊಂದು ಸುತ್ತಿನ ಚರ್ಚೆಗಾಗಿ ವಿಳಂಬ ಮಾಡಲಾಗಿತ್ತು. ಕಳೆದ ವಾರ ರಾಜ್ಯದ ಮೂವರು ನಾಯಕರು ದೆಹಲಿಗೆ ಭೇಟಿ ನೀಡಿದ್ದರು. ಆದರೆ ಅಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ವಿರೋಧಿಸಿ ಪ್ರತಿಭಟನೆಗಳಾಗುತ್ತಿದ್ದವು. ರಾಜ್ಯ ನಾಯಕರ ಜೊತೆ ವರಿಷ್ಠರಿಗೆ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಈಗ ಎಲ್ಲಾ ಗದ್ದಲಗಳು ಮುಗಿದಿರುವುದರಿಂದ ಚರ್ಚೆ ಸಾಧ್ಯ ಎಂದು ಹೇಳಲಾಗಿದೆ. ಆಗಸ್ಟ್ 12 ರಿಂದ ವಿಧಾನ ಮಂಡಲ ಅಧಿವೇಶನ ನಡೆಯುವ ಸಾಧ್ಯತೆ ಇರುವುದರಿಂದ ಅದಕ್ಕು ಮೊದಲೇ ಸಚಿವ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ನಾಳೆಯಿಂದ ಎರಡು ದಿನಗಳ ದೆಹಲಿ ಭೇಟಿಯಲ್ಲಿ ಮುಖ್ಯಮಂತ್ರಿಯವರು ವರಿಷ್ಠರ ಜೊತೆ ಸಚಿವ ಸಂಪುಟ ವಿಸ್ತರಣೆ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ಖಾಲಿ ಇರುವ ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಸದಸ್ಯರ ನಾಮನಿರ್ದೇಶನ, ವಿಧಾನಸಭೆಯ ಅಧ್ಯಕ್ಷರ ಆಯ್ಕೆ, ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಸೇರಿದಂತೆ ಮಹತ್ವದ ವಿಚಾರಗಳ ಚರ್ಚೆ ನಡೆಸಲಿದ್ದಾರೆ. ಮುಖ್ಯಮಂತ್ರಿ ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂಬ ಸುಳಿವು ದೊರೆಯುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯತ್ತ ದಂಡಯಾತ್ರೆ ಆರಂಭಿಸಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ಸಭೆ ನಡೆದಾಗಲೇಲ್ಲಾ ಲಾಬಿಗಳು ಜೋರಾಗುತ್ತಿವೆ. ಹೇಗಾದರೂ ಮಾಡಿ ಬಾಕಿ ಇರುವ ಒಂದು ವರ್ಷ 10 ತಿಂಗಳ ಅವಧಿಗೆ ಸಚಿವ ಸ್ಥಾನ ಗಿಟ್ಟಿಸಬೇಕು ಎಂದು ಸುಮಾರು 40ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಿ ವರಿಷ್ಠ ನಾಯಕರಿಗೆ ದುಂಬಾಲು ಬೀಳುವುದು ಸಾಮಾನ್ಯವಾಗಿದೆ. ಸೋಮವಾರ ಮುಖ್ಯಮಂತ್ರಿಯವರ ಪ್ರವಾಸದ ಹಿನ್ನೆಲೆಯಲ್ಲಿ ಇಂದು ಸುಮಾರು 20ಕ್ಕೂ ಹೆಚ್ಚು ಶಾಸಕರು ಈಗಾಗಲೇ ದೆಹಲಿ ವಿಮಾನ ಏರಿದ್ದಾರೆ.
