ನವದೆಹಲಿ,ಜು.27- ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹಾಗೂ ನಂಬಿಕೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ -2026 ಅನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಪ್ರತಿಪಕ್ಷಗಳ ತೀವ್ರ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಪರೀಕ್ಷಾ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದರು.
ಆದರೆ ವಿಪಕ್ಷಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಪೆಲೆಟ್ ಗನ್ ದಾಳಿ ನಡೆಸಿದ್ದನ್ನು ಖಂಡಿಸಿ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದವು. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಸದನದಲ್ಲಿ ಉತ್ತರ ನೀಡುವಂತೆ ಆಗ್ರಹಿಸಿ ಗದ್ದಲವೆಬ್ಬಿಸಿದವು. ಆದರೆ ಸ್ಪೀಕರ್ ಓಂ ಬಿರ್ಲಾ, ಪರೀಕ್ಷಾ ಅಕ್ರಮ ತಡೆ ಬಗ್ಗೆ ಮಸೂದೆ ಮಂಡಿಸಲಾಗುವುದು. ಕಲಾಪ ಗದ್ದಲಗಳಲ್ಲಿಯೇ ವ್ಯರ್ಥವಾಗಬಾರದು ಎಂದು ಹೇಳಿ ಮಸೂದೆ ಮಂಡನೆಗೆ ಸಚಿವರಿಗೆ ಸೂಚಿಸಿದರು.
ಆದಾಗ್ಯೂ ವಿಪಕ್ಷ ಸದಸ್ಯರು ಮಕ್ಕಳ ಮೇಲಿನ ಲಾಠಿಚಾರ್ಜ್ ಗೆ ಅಮಿತ್ ಶಾ ಉತ್ತರ ಕೊಡಲೇಬೇಕು ಎಂದು ಒತ್ತಾಯಿಸಿ ಬಿಗಿಪಟ್ಟು ಹಿಡಿದವು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗದ್ದಲ ಮುಂದುವರೆಸಿದರು. ವಿಪಕ್ಷಗಳ ಗದ್ದಲದ ನಡುವೆಯೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪರೀಕ್ಷಾ ಅಕ್ರಮ ತಡೆ ಮಸೂದೆ ಮಂಡಿಸಿದರು.
ಮಸೂದೆಯಿಂದಾಗುವ ಪ್ರಯೋಜನ ಹಾಗೂ ವಿದ್ಯಾರ್ಥಿಗಳಿಗೆ ಯಾವ ರೀತಿ ಸಹಕಾರಿಯಾಗಲಿದೆ ಎಂಬಿತ್ಯಾದಿ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಾಗುವುದು. ಮಸೂದೆ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಸ್ಪೀಕರ್ ಓಂ ಬಿರ್ಲಾ ಲೋಕಸಭಾ ಕಲಾಪವನ್ನು ಮುಂದೂಡಿದರು. ಸ್ಪರ್ಧಾತಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕಾಯ್ದೆಯು ಅತ್ಯಂತ ನಿರ್ಣಾಯಕವಾಗಿದೆ.
ಮಸೂದೆಯಲ್ಲಿರುವ ಪ್ರಮುಖ ಅಂಶಗಳು :
ಹೊಸ ತಿದ್ದುಪಡಿ ಪ್ರಕಾರ, ಪರೀಕ್ಷೆಗಳಲ್ಲಿ ಅಕ್ರಮ ನಡೆಸುವವರಿಗೆ 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸಂಘಟಿತ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ನಡೆಸಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10 ಕೋಟಿ ವರೆಗೆ ದಂಡ ವಿಧಿಸುವ ಪ್ರಾಸ್ತಾಪವಿದೆ.
ಯಾವುದೇ ಕೋಚಿಂಗ್ ಸೆಂಟರ್ ಅಥವಾ ತರಬೇತಿ ಸಂಸ್ಥೆ ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುವುದು ಸಾಬೀತಾದರೆ, ಆ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಸರ್ಕಾರಕ್ಕೆ ಲಭ್ಯವಾಗಲಿದೆ.
ಇದಲ್ಲದೆ, ಪರೀಕ್ಷೆಗಳನ್ನು ನಡೆಸುವ ಖಾಸಗಿ ಸಂಸ್ಥೆಗಳು ಅಥವಾ ಏಜೆನ್ಸಿಗಳು ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ, ಅವುಗಳನ್ನು 8 ವರ್ಷಗಳ ಕಾಲ ಕಪ್ಪುಪಟ್ಟಿಗೆ ಸೇರಿಸಲಾಗುವುದು. ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ನಿರ್ದೇಶಕರಿಗೂ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ.
ಫಾಸ್ಟ್ ಟ್ರ್ಯಾಕ್ ತನಿಖೆಗೆ ಆದ್ಯತೆ :
ಪರೀಕ್ಷಾ ಅಕ್ರಮ ಪ್ರಕರಣಗಳ ತನಿಖೆಯನ್ನು ವಿಳಂಬವಾಗದಂತೆ ಮಾಡಲು ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. ಪ್ರಕರಣದ ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುವುದು, ನಂತರ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಲ್ಲಿ ಪ್ರತಿದಿನ ವಿಚಾರಣೆ ನಡೆಸುವುದು, ಹಾಗೂ ಆರೋಪಪಟ್ಟಿ ಸಲ್ಲಿಕೆಯಾದ ಮೂರು ತಿಂಗಳೊಳಗೆ ತೀರ್ಪು ನೀಡುವುದು ಕಡ್ಡಾಯವಾಗಲಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ತ್ವರಿತ ನ್ಯಾಯ ದೊರಕುವ ನಿರೀಕ್ಷೆ ಇದೆ.
ನಂದನ್ ನಿಲೇಕಣಿ ನೇತೃತ್ವದಲ್ಲಿ ಕಾರ್ಯಪಡೆ :
ಮಸೂದೆ ಮಂಡನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ತಂತ್ರಜ್ಞಾನ ಆಧರಿತವಾಗಿಸಲು ಮಹತ್ವದ ಘೋಷಣೆ ಮಾಡಿದರು. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಆರು ಸದಸ್ಯರ ಉನ್ನತಾಧಿಕಾರದ ಕಾರ್ಯಪಡೆಯನ್ನು ರಚಿಸಲಾಗಿದ್ದು, ಡಿಜಿಟಲ್ ಭದ್ರತೆ, ಪ್ರಶ್ನೆ ಪತ್ರಿಕೆ ಸಂರಕ್ಷಣೆ ಹಾಗೂ ಪರೀಕ್ಷಾ ಪ್ರಕ್ರಿಯೆಯ ಸುಧಾರಣೆಗೆ ಶಿಫಾರಸುಗಳನ್ನು ನೀಡಲಿದೆ.
ಇನ್ನೂ ಪರೀಕ್ಷಾ ಅಕ್ರಮ ತಡೆಗೆ ಸಂಬಂಧಪಟ್ಟ ಮಹತ್ವದ ಮಸೂದೆಯ ಕುರಿತು ಸುಮಾರು 8 ರಿಂದ 10 ಗಂಟೆಗಳ ಕಾಲ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ಎನ್ ಡಿಎ ತನ್ನ ಯುವ ಸಂಸದರನ್ನು ಚರ್ಚೆಯಲ್ಲಿ ಪ್ರಮುಖವಾಗಿ ಸೇರಿಸಲು ಕಾರ್ಯತಂತ್ರ ರೂಪಿಸಿದೆ ಮತ್ತು ಸರ್ಕಾರವನ್ನು ಪ್ರತಿನಿಧಿಸುವ ಬಹುಪಾಲು ಭಾಷಣಕಾರರು ಯುವ ಸಂಸದರಾಗಿರುತ್ತಾರೆ.
ಬಿಜೆಪಿ ಪರವಾಗಿ ಬಾನ್ಸುರಿ ಸ್ವರಾಜ್ ಮತ್ತು ತೇಜಸ್ವಿ ಸೂರ್ಯ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಏತನಧ್ಯೆ, ಸಾಯೋನಿ ಘೋಷ್, ಮಿತಾಲಿ ಬಾಗ್, ಲಾವು ಶ್ರೀ ಕೃಷ್ಣ ದೇವರಾಯಲು, ಲಲ್ಲನ್ ಸಿಂಗ್, ಡಾ. ಶ್ರೀಕಾಂತ್ ಶಿಂಧೆ, ಸುನಿಲ್ ತತ್ಕರೆ, ಅನುಪ್ರಿಯಾ ಪಟೇಲ್ ಮತ್ತು ಅರುಣ್ ಭಾರ್ತಿ ಸೇರಿದಂತೆ ಮಿತ್ರ ಪಕ್ಷಗಳ ಹಲವಾರು ಸಂಸದರು ಮಾತನಾಡುವ ನಿರೀಕ್ಷೆಯಿದೆ.
