ಚೆನ್ನೈ, ಜು.28- ದಳಪತಿ ವಿಜಯ್ ಮಾದರಿಯಲ್ಲೇ ಮತ್ತೊಬ್ಬ ನಟ ರಾಜಕೀಯ ಪ್ರವೇಶಿಸುವ ಸುಳಿವು ಲಭ್ಯವಾಗಿದೆ.ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮಾಜಿ ಅಳಿಯ ಧನುಷ್ ತಮ ನಡವಳಿಕೆ ಮೂಲಕ ತಾವು ಕೂಡ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದಾರೆ.
ಚೆನೈನಲ್ಲಿ ಅವರ ಅಭಿಮಾನಿಗಳು ಆಯೋಜಿಸಿದ್ದ ಬೃಹತ್ ರಕ್ತದಾನ ಕಾರ್ಯಕ್ರಮದಲ್ಲಿ ಧನುಷ್ ಭಾಗಿಯಾಗಿ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಒಗ್ಗಟ್ಟನ್ನು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಪ್ರತಿ ವರ್ಷ ಧನುಷ್ ಅಭಿಮಾನಿಗಳು ನಟನ ಹೆಸರಲ್ಲಿ ರಕ್ತದಾನ ಶಿಬಿರ ಮಾಡುತ್ತಾ ಬಂದಿದ್ದಾರೆ. ಉಚಿತ ಊಟದ ವ್ಯವಸ್ಥೆ ಇರುತ್ತೆ. ಅದರಂತೆ ಈ ಬಾರಿ ಚೆನೈ ಬಳಿ ಮಂಜಕರನೈ ಪ್ರದೇಶದ ವೆಲ್‌್ಸ ಮೆಡಿಕಲ್ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆದಿತ್ತು. ಧನುಷ್ ಆಗಮಿಸಿ ಅಭಿಮಾನಿಗಳಿಗೆ ಸಮಾಜಮುಖಿ ಕೆಲಸ ಮಾಡುವಂತೆ ಕರೆ ಕೊಟ್ಟಿದ್ದಾರೆ. ಸಿನಿಮಾ ಸಂಬಧಿತ ಸಂಭ್ರಮಾಚರಣೆಗಳಿಗೆ ಸೀಮಿತವಾಗದೇ ಜನಪರ ಹಾಗೂ ಕಲ್ಯಾಣ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ತಮ್ಮ ಅಭಿಮಾನಿಗಳಿಗೆ ಹೇಳುವ ಮೂಲಕ ಜನಸೇವೆಯತ್ತ ಗಮನ ಹರಿಸಿದ್ದಾರೆ.
ಇಷ್ಟೊಂದು ಜನರು ಒಂದೆಡೆ ಸೇರಿದ್ದೀರಿ, ಇಂತಹ ಒಗ್ಗಟ್ಟಿನಲ್ಲಿ ಅಪಾರ ಶಕ್ತಿಯಿದೆ ಆ ಒಗ್ಗಟ್ಟಿಗೆ ನಾವು ಒಂದು ಅರ್ಥಪೂರ್ಣ ಉದ್ದೇಶವನ್ನು ನೀಡಬೇಕಿದೆ. ಕೇವಲ ಆಡಿಯೋ ಬಿಡುಗಡೆ ಸಮಾರಂಭಗಳು ಮತ್ತು ಅಭಿಮಾನಿಗಳ ಭೇಟಿಗಳಿಗಿಂತಲೂ ಮಿಗಿಲಾಗಿ, ನಾವು ಹೆಚ್ಚಿನ ಜನಪರ ಹಾಗೂ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದೆ.
ನಿಮ್ಮ ಪ್ರದೇಶದ ಜನರ ಹಾಗೂ ನಿಮ್ಮ ಸುತ್ತಮುತ್ತ ವಾಸಿಸುವ ಕುಟುಂಬಗಳ ಅಗತ್ಯಗಳನ್ನು ಅರಿತುಕೊಳ್ಳಿ ಹಾಗೂ ಸಾಧ್ಯವಾದ ರೀತಿಯಲ್ಲಿ ಅವರಿಗೆ ಸಹಾಯ ಮಾಡಿ. ಅವರಿಗಾಗಿ ನಿಮ ಕೈಯಲ್ಲಿ ಸಾಧ್ಯವಾದಷ್ಟು ನೆರವು ನೀಡಿ. ನಿಮ್ಮ ಬಗ್ಗೆ ನನಗೆ ಇನ್ನಷ್ಟು ಹೆಮ್ಮೆ ಎನಿಸುವಂತಾಗಬೇಕು. ನೀವು ಅದನ್ನು ಮಾಡುತ್ತೀರಿ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.
ಅಂದಹಾಗೆ ಧನುಷ್ ಸಿನಿಮಾ ಕಾರ್ಯಕ್ರಮದ ಹೊರತಾಗಿ ಹೆಚ್ಚಾಗಿ ಕಾಣಿಸ್ಕೊಳ್ತಿರಲಿಲ್ಲ. ಇದೀಗ ರಾಜಕೀಯ ಪ್ರವೇಶ ಸುದ್ದಿಗೆ ಪುಷ್ಠಿ ಕೊಡುವಂತೆ ಜನರನ್ನು ಒಗ್ಗೂಡಿಸುವಂಥಹ ಭಾಷಣ ಮಾಡಿದ್ದಾರೆ. ಹಿಂದೆಯೂ ಅನೇಕ ಬಾರಿ ಧನುಷ್ ರಾಜಕೀಯ ಎಂಟ್ರಿ ಕುರಿತು ವದಂತಿ ಹಬ್ಬಿತ್ತು.
ಜುಲೈ ಮೊದಲ ವಾರದಲ್ಲಿ ಧನುಷ್ ಅಭಿಮಾನಿಗಳ ಸಂಘಟನೆ ಅಧಿಕೃತ ಧ್ವಜವೊಂದನ್ನು ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಧ್ವಜದಲ್ಲಿ ಧನುಷ್ ಅವರ ಚಿತ್ರವಿರುವುದು ಮತ್ತು ಅದರ ವಿನ್ಯಾಸ ರಾಜಕೀಯ ಸಂಘಟನೆಗಳ ರೀತಿಯನ್ನು ನೆನಪಿಸುವಂತಿದೆ ಅನ್ನೋ ಚರ್ಚೆ ಶುರುವಾಗಿದೆ.
