Homeರಾಜಕೀಯ"ಅಧಿಕಾರದ ಲಾಭಕ್ಕಾಗಿ ರಾಜ್ಯದ ಜಲಹಕ್ಕನ್ನು ತಮಿಳುನಾಡಿಗೆ ಬಲಿಕೊಡುತ್ತಿದೆ ಕಾಂಗ್ರೆಸ್ ಸರ್ಕಾರ"

“ಅಧಿಕಾರದ ಲಾಭಕ್ಕಾಗಿ ರಾಜ್ಯದ ಜಲಹಕ್ಕನ್ನು ತಮಿಳುನಾಡಿಗೆ ಬಲಿಕೊಡುತ್ತಿದೆ ಕಾಂಗ್ರೆಸ್ ಸರ್ಕಾರ”

ಬೆಂಗಳೂರು,ಜು.28- ರಾಜಕೀಯ ಮೈತ್ರಿ ಹಾಗೂ ಅಧಿಕಾರದ ಲಾಭಕ್ಕಾಗಿ ರಾಜ್ಯದ ಜಲಹಕ್ಕನ್ನು ತಮಿಳುನಾಡಿಗೆ ಬಲಿಕೊಡಲಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರ್ಕಾರದ ದ್ವಂದ್ವ ನೀತಿಯನ್ನು ತೀವ್ರವಾಗಿ ಖಂಡಿಸಿರುವ ಆರ್‌.ಅಶೋಕ್‌, ತಮಿಳುನಾಡಿನ ಸಂಸದರೊಬ್ಬರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ನೀಡಿರುವ ಅಧಿಕೃತ ಉತ್ತರವೇ ಕಾಂಗ್ರೆಸ್‌‍ ಸರ್ಕಾರದ ಮಹಾ ದ್ರೋಹವನ್ನು ಬೆತ್ತಲೆಗೊಳಿಸಿದೆ ಎಂದು ಅವರು ದೂರಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ತಮಿಳುನಾಡಿನ ರಾಜ್ಯಸಭಾ ಸಂಸದ ಡಾ.ಅನ್ಬುಮಣಿ ರಾಮದಾಸ್‌‍ ಅವರು ಸಂಸತ್ತಿನಲ್ಲಿ ಮಂಡಿಸಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ನೀಡಿರುವ ಅಧಿಕೃತ ದಾಖಲೆಗಳು ಕಾಂಗ್ರೆಸ್‌‍ ಸರ್ಕಾರದ ನಿಜಮುಖವನ್ನು ಬಯಲು ಮಾಡಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

2025-26ರ ಜಲವರ್ಷದ ನಿರ್ದಿಷ್ಟ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಹರಿಸಬೇಕಿದ್ದದ್ದು ಕೇವಲ 2.5 ಟಿಎಂಸಿ ನೀರು ಮಾತ್ರ. ಸರ್ಕಾರ ಹರಿಸಿದ ನೀರು: ಆದರೆ ಕನ್ನಡಿಗರ ಕಣ್ಣಿಗೆ ಮಣ್ಣೆರಚಿ, ನಿಯಮ ಮೀರಿ ಬರೋಬ್ಬರಿ 3.101 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಅಂದರೆ, ನಿಗದಿತ ಪ್ರಮಾಣಕ್ಕಿಂತ 0.601 ಟಿಎಂಸಿ ಹೆಚ್ಚು ನೀರನ್ನು ರಹಸ್ಯವಾಗಿ ಹರಿಸಿ, ರಾಜ್ಯದ ರೈತರ ಬೆನ್ನಿಗೆ ಕಾಂಗ್ರೆಸ್‌‍ ಸರ್ಕಾರ ಚೂರಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೊಳ್ಳದ ರೈತರಿಗೆ ಸಂಕಷ್ಟ ಹಾಗೂ ಬೆಂಗಳೂರು ಜಲಕ್ಷಾಮ:
ಅವೈಜ್ಞಾನಿಕವಾಗಿ ಮತ್ತು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರ ನೇರ ಪರಿಣಾಮ ಇಂದು ಕಾವೇರಿ ಕೊಳ್ಳದ ರೈತರ ಬೆಳೆಗಳು ಒಣಗಿಹೋಗಲು ಕಾರಣವಾಗಿದೆ. ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ದುರ್ಭರ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ, ರಾಜಕೀಯ ಲಾಭಕ್ಕಾಗಿ ನೆರೆಯ ರಾಜ್ಯಕ್ಕೆ ನೀರುಣಿಸುತ್ತಿರುವುದು ಖಂಡನೀಯ ಎಂದಿದ್ದಾರೆ.

ಒಂದೆಡೆ ಕನ್ನಡಿಗರ ಕಣ್ಣೊರೆಸಲು ಮೇಕೆದಾಟು ಪಾದಯಾತ್ರೆ ಹಾಗೂ ರಾಜಕಾರಣ ಮಾಡುವುದು, ಮತ್ತೊಂದೆಡೆ ಕನ್ನಡಿಗರ ಜೀವಜಲವನ್ನು ಗುಟ್ಟಾಗಿ ಹರಿಸಿ ಹಿತಾಸಕ್ತಿಗಳಿಗೆ ದ್ರೋಹ ಬಗೆಯುವುದು ಕಾಂಗ್ರೆಸ್‌‍ ಸರ್ಕಾರದ ದ್ವಿಮುಖ ನೀತಿಯಾಗಿದೆ.

ಇದು ಕೇವಲ ರಾಜಕೀಯ ವಂಚನೆಯಲ್ಲ, ಬದಲಿಗೆ ಕರ್ನಾಟಕದ ಜಲಹಕ್ಕು, ರೈತರ ಬದುಕು ಹಾಗೂ ಬೆಂಗಳೂರಿನ ಜಲಭದ್ರತೆಗೆ ಮಾಡಿರುವ ಮಹಾದ್ರೋಹವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಸರ್ಕಾರ ಕೂಡಲೇ ಕನ್ನಡಿಗರ ಕ್ಷಮೆ ಕೋರಬೇಕು ಮತ್ತು ಈ ದ್ರೋಹಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

Latest News