Homeರಾಜ್ಯಮಳೆ ಕೊರತೆಯ ನಡುವೆಯೂ ಕಾವೇರಿ ಹರಿಸುವಂತೆ ತಮಿಳುನಾಡು ಪ್ರತಿಪಾದನೆ

ಮಳೆ ಕೊರತೆಯ ನಡುವೆಯೂ ಕಾವೇರಿ ಹರಿಸುವಂತೆ ತಮಿಳುನಾಡು ಪ್ರತಿಪಾದನೆ

Tamil Nadu demands release of Cauvery despite lack of rain

ಬೆಂಗಳೂರು, ಜು.28- ಕರ್ನಾಟಕದಲ್ಲಿ ಮಳೆ ಕೊರತೆಯ ನಡುವೆಯೂ ಕಾವೇರಿ ಕೊಳ್ಳದಿಂದ ನಿಗದಿತ ಪ್ರಮಾಣದಲ್ಲಿ ನೀರು ಹರಿಸಲೇಬೇಕು ಎಂದು ತಮಿಳುನಾಡು ಬಲವಾದ ಪ್ರತಿಪಾದನೆ ಮಂಡಿಸಿದೆ.ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ನೆರೆಯ ರಾಜ್ಯಗಳ ಅನುಮತಿ ಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿರುವುದು ತಮಿಳುನಾಡಿಗೆ ಭಾರೀ ಇಕ್ಕಟ್ಟಿನ ಸನ್ನಿವೇಶ ಸೃಷ್ಟಿಸಿದೆ. ಈ ನಡುವೆ ತನ್ನಲ್ಲೆಲ್ಲಾ ಆಕ್ರೋಶವನ್ನು ತಮಿಳುನಾಡು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ 54ನೇ ಸಭೆಯಲ್ಲಿ ಹೊರ ಹಾಕಿದೆ.

ತಮಿಳುನಾಡು ಜಲಸಂಪನೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸತ್ಯಬ್ರತ ಸಾಹು ಸಿ ಡಬ್ಲೂ ಆರ್‌ ಸಿ ಸಭೆಯಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಕಾವೇರಿ ನ್ಯಾಯಾಧೀಕರಣ ತೀರ್ಪಿನ ಅನುಸಾರ ಜೂನ್‌ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಯಷ್ಟು ನೀರು ಬಿಡಬೇಕು ಎಂದು ಒತ್ತಾಯಿಸಿದ್ದರು. ಸುಪ್ರೀಂ ಕೋರ್ಟ್‌ 2018ರ ತೀರ್ಪಿನ ಪ್ರಕಾರ ಕರ್ನಾಟಕವು ತಮಿಳುನಾಡಿಗೆ ಕಡ್ಡಾಯವಾಗಿ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಪಟ್ಟು ಹಿಡಿದಿದೆ.

ಕಳೆದ 15 ದಿನಗಳ ಹಿಂದೆ ನಡೆದಿದ್ದ ಸಭೆಯಲ್ಲೂ ಇದೇ ವಾದ ಮಂಡಿಸಲಾಗಿತ್ತು. ಜೂನ್‌ 1ರಿಂದ ಜುಲೈ 19ರವರೆಗೆ ಬಿಳಿಗುಂಡ್ಲು ಅಳತೆ ಕೇಂದ್ರದಲ್ಲಿ ತಮಿಳುನಾಡಿಗೆ ಒಟ್ಟು 28.337 ಟಿಎಂಸಿ ಅಡಿ ನೀರು ದೊರೆಯಬೇಕಾಗಿದ್ದರೂ, ಕೇವಲ 3.442 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಾಗಿದೆ. 24.896 ಟಿಎಂಸಿ ಅಡಿ ನೀರಿನ ಕೊರತೆ ಉಂಟಾಗಿದೆ ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಸರ್ಕಾರ, ರಾಜ್ಯದಲ್ಲಿ ಸಮರ್ಪಕ ಮಳೆಯಾಗಿಲ್ಲ. ಜೊತೆಗೆ ವಿಶೇಷವಾಗಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರಿನ ಅಗತ್ಯವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕಾಗಿದೆ ಎಂದು ತನ್ನ ವಾದವನ್ನು ಮಂಡಿಸಿತು. ಎರಡೂ ರಾಜ್ಯಗಳ ವಾದವನ್ನು ಆಲಿಸಿದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು, ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಅನುಪಾತದ ಪ್ರಕಾರ ಹಂಚಿಕೆ ಮಾಡುವ ಕುರಿತು ಜುಲೈ 28ರಂದು ನಡೆಯುವ ಕಾವೇರಿ ಜಲ ನಿಯಂತ್ರಣ ಸಮಿತಿಯ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು. ಅದರಂತೆ ಇಂದು ಸಭೆ ನಡೆದಿದೆ.

ಇದರ ನಡುವೆಯೇ ಕಾವೇರಿ ವಿವಾದ ತಮಿಳುನಾಡಿನ ರಾಜಕೀಯದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ. ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಅವರು ಗುರುವಾರ ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ಅವರನ್ನು ಪ್ರಶ್ನಿಸಿದ್ದರು. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿನ ನೀರು ಬಿಡುಗಡೆ ಸಂಬಂಧಿಸಿದ ಮನವಿಗಳನ್ನು ಪದೇ ಪದೇ ತಿರಸ್ಕರಿಸುತ್ತಿದ್ದರೂ, ಮುಖ್ಯಮಂತ್ರಿ ಇದುವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಈ ವಿಚಾರವನ್ನು ಏಕೆ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನಿಸಿದ್ದರು.

ಕರ್ನಾಟಕ ಸರ್ಕಾರ ನೀರು ಬಿಡುಗಡೆಗೆ ನಿರಾಕರಿಸುತ್ತಿದ್ದರೂ ಅದರ ವಿರುದ್ಧ ತಮಿಳುನಾಡು ಸರ್ಕಾರ ಬಹಿರಂಗವಾಗಿ ಏಕೆ ಧ್ವನಿ ಎತ್ತುತ್ತಿಲ್ಲ ಎಂಬ ಪ್ರಶ್ನೆಯನ್ನೂ ಸ್ಟಾಲಿನ್‌ ಮುಂದಿಟ್ಟಿದ್ದಾರೆ. ಕುಡಿಯುವ ನೀರಿನ ಅಗತ್ಯದ ನೆಪವನ್ನು ಮುಂದಿಟ್ಟು ಕರ್ನಾಟಕ ಸರ್ಕಾರ ಮಂಡಿಸುತ್ತಿರುವ ವಾದ ಸರಿಯಲ್ಲ ಎಂದು ತಮಿಳುನಾಡು ಆಕ್ಷೇಪಿಸಿತ್ತು.

ಕರ್ನಾಟಕದ ನಾಲ್ಕು ಪ್ರಮುಖ ಕಾವೇರಿ ಜಲಾಶಯಗಳಲ್ಲಿ ಒಟ್ಟಾರೆ 60 ಟಿಎಂಸಿ ಅಡಿಗೂ ಹೆಚ್ಚು ನೀರಿನ ಸಂಗ್ರಹವಿರುವಾಗ ಕುಡಿಯುವ ನೀರಿನ ಕೊರತೆಯ ಕಾರಣವನ್ನು ಮುಂದಿಡುವುದು ಸಮಂಜಸವಲ್ಲ ಎಂದು ವಾದಿಸಲಾಗಿತ್ತು.ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳಲ್ಲೂ ನೀರಿನ ಸಂಗ್ರಹ ಕನಿಷ್ಠ ಪ್ರಮಾಣಕ್ಕೆ ಕುಸಿದಿದೆ. ಕೃಷಿ ಚಟುವಟಿಕೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದಿಸಿದೆ.

RELATED ARTICLES

Latest News