Homeಕ್ರೀಡಾ ಸುದ್ದಿಕಾಮನ್‌ವೆಲ್ತ್‌‍ ಕ್ರೀಡಾಕೂಟ : ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ 7ನೇ ಪದಕ, ಹರಜಿಂದರ್‌ ಕೌರ್‌ಗೆ ಬೆಳ್ಳಿ,

ಕಾಮನ್‌ವೆಲ್ತ್‌‍ ಕ್ರೀಡಾಕೂಟ : ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ 7ನೇ ಪದಕ, ಹರಜಿಂದರ್‌ ಕೌರ್‌ಗೆ ಬೆಳ್ಳಿ,

Harjinder Kaur wins weightlifting silver at Commonwealth Games

ಗ್ಲಾಸ್ಗೋ, ಜುಲೈ 28- ಭಾರತದ ಹರಜಿಂದರ್‌ ಕೌರ್‌ ಮಹಿಳೆಯರ 69 ಕೆಜಿ ವೇಟ್‌ಲಿಫ್ಟಿಂಗ್‌‍ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸ್ಪರ್ಧೆಯ ವೇಳೆ ಅವರು ಸ್ನ್ಯಾಚ್‌ ಹಾಗೂ ಕ್ಲೀನ್‌ ಅಂಡ್‌ ಜರ್ಕ್‌ ಎರಡೂ ವಿಭಾಗಗಳಲ್ಲಿ ಕಾಮನ್‌ವೆಲ್ತ್‌‍ ಕ್ರೀಡಾಕೂಟದ ದಾಖಲೆಗಳನ್ನು ಮುರಿದರೂ, ಅಂತಿಮವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

29 ವರ್ಷದ ಹರಜಿಂದರ್‌ 2022ರ ಬರ್ಮಿಂಗ್‌ಹ್ಯಾಮ್‌‍ ಕಾಮನ್‌ವೆಲ್ತ್‌‍ ಕ್ರೀಡಾಕೂಟದಲ್ಲಿ 71 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಬಾರಿ ತಮ ವೃತ್ತಿಜೀವನದ ಅತ್ಯುತ್ತಮ 2ರು.
ಎರಡು ವಿಭಾಗಗಳಲ್ಲೂ ದಾಖಲೆ: ಸ್ನ್ಯಾಚ್‌ ವಿಭಾಗದಲ್ಲಿ ಮೊದಲು 99 ಕೆಜಿ ಭಾರ ಎತ್ತುವ ಮೂಲಕ ಕ್ರೀಡಾಕೂಟದ ದಾಖಲೆಯನ್ನು ಮುರಿದ ಹರಜಿಂದರ್‌ ಅಂತಿಮ ಪ್ರಯತ್ನದಲ್ಲಿ 101 ಕೆಜಿ ಭಾರ ಎತ್ತಿ ತಮ್ಮದೇ ದಾಖಲೆಯನ್ನು ಮತ್ತೊಮ್ಮೆ ಉತ್ತಮಪಡಿಸಿದರು.

ಕ್ಲೀನ್‌ ಅಂಡ್‌ ಜರ್ಕ್‌ ವಿಭಾಗದಲ್ಲೂ ಅವರು 123 ಕೆಜಿ ಭಾರ ಎತ್ತಿ ದಾಖಲೆ ನಿರ್ಮಿಸಿದ ಬಳಿಕ, ಅಂತಿಮ ಪ್ರಯತ್ನದಲ್ಲಿ 126 ಕೆಜಿ ಭಾರ ಯಶಸ್ವಿಯಾಗಿ ಎತ್ತಿದರು. ಇದರೊಂದಿಗೆ ಅವರ ಒಟ್ಟು ಭಾರ 227 ಕೆಜಿ ಆಯಿತು. ಆದರೆ ಹರಜಿಂದರ್‌ಗೆ ಕೆನಡಾದ ಷಾರ್ಲೆಟ್‌ ಸಿಮೊನೋ ಅವರಿಂದ ಕಠಿಣ ಪೈಪೋಟಿ ಎದುರಾಯಿತು.

ಸಿಮೊನೋ ಸ್ನ್ಯಾಚ್‌ನಲ್ಲಿ 108 ಕೆಜಿ ಹಾಗೂ ಕ್ಲೀನ್‌ ಅಂಡ್‌ ಜರ್ಕ್‌ನಲ್ಲಿ 132 ಕೆಜಿಭಾರ ಎತ್ತಿ, ಒಟ್ಟು 240 ಕೆಜಿ ಸಾಧನೆಯೊಂದಿಗೆ ಮೂರು ವಿಭಾಗಗಳಲ್ಲೂ ಕಾಮನ್‌ವೆಲ್ತ್‌‍ ಕ್ರೀಡಾಕೂಟದ ಹೊಸ ದಾಖಲೆ ನಿರ್ಮಿಸಿ ಚಿನ್ನದ ಪದಕ ತಮದಾಗಿಸಿಕೊಂಡರು. ಈ ಕಾಮನ್‌ವೆಲ್ತ್‌‍ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಏಳಕ್ಕೆ ಏರಿದೆ.

ಇದುವರೆಗೆ ಭಾರತ ಒಂದು ಚಿನ್ನ, ಐದು ಬೆಳ್ಳಿ ಹಾಗೂ ಒಂದು ಕಂಚು ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದು, ಕಾಮನ್‌ವೆಲ್ತ್‌‍ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮೆ ಸಾಬೀತುಪಡಿಸಿದೆ.

ಭಾರತಕ್ಕೆ ಪದಕ ಖಚಿತ

ಗ್ಲಾಸ್ಗೋ, ಜುಲೈ 28- ಕಾಮನ್‌ವೆಲ್ತ್‌‍ ಕ್ರೀಡಾಕೂಟದ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪವಾರ್‌ ಹಾಗೂ ಹಾಲಿ ಏಷ್ಯನ್‌ ಚಾಂಪಿಯನ್‌ ಪ್ರಿಯಾ ಘಂಘಾಸ್‌‍ ತಮ್ಮ ತಮ್ಮ ವಿಭಾಗಗಳ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.

ಇದೇ ವೇಳೆ ಪುರುಷರ 55 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜಾದುಮಣಿ ಸಿಂಗ್‌‍ ಜಾಂಬಿಯಾದ ಮ್ವೆಂಗೊ ಮ್ವಾಲೆ ಅವರನ್ನು 5-0 ಅಂತರದ ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿ ಭಾರತದ ಮೂರನೇ ಪದಕವನ್ನೂ ಖಚಿತಪಡಿಸಿದರು.

ಪ್ರೀತಿಯಿಂದ ಏಕಪಕ್ಷೀಯ ಗೆಲುವು :
ಮಹಿಳೆಯರ 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ 22 ವರ್ಷದ ಪ್ರೀತಿ ಪವಾರ್‌ ಉತ್ತರ ಐರ್ಲೆಂಡ್‌ನ ನಿಕೋಲ್‌ ಕ್ಲೈಡ್‌ ವಿರುದ್ಧ 5-0 ಅಂತರದ ಸರ್ವಾನುಮತದ ಗೆಲುವು ದಾಖಲಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಮೊದಲ ಸುತ್ತಿನಿಂದಲೇ ಚುರುಕಾದ ಚಲನೆ ಹಾಗೂ ನಿಖರ ಪಂಚ್‌ಗಳ ಮೂಲಕ ಎದುರಾಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಪ್ರೀತಿ, ಐವರು ತೀರ್ಪುಗಾರರ ವಿಶ್ವಾಸವನ್ನೂ ಗಳಿಸಿದರು.
ಎರಡನೇ ಸುತ್ತಿನಲ್ಲೂ ಅದೇ ಲಯ ಮುಂದುವರಿಸಿದ ಅವರು ವೇಗ, ನಿಖರತೆ ಹಾಗೂ ರಿಂಗ್‌ನಲ್ಲಿನ ಚಾಣಾಕ್ಷ ಆಟದಿಂದ ಮೇಲುಗೈ ಸಾಧಿಸಿದರು.

ಕೊನೆಯ ಸುತ್ತಿನಲ್ಲೂ ಸಮಚಿತ್ತದಿಂದ ಆಡಿದ ಪ್ರೀತಿ ವೈವಿಧ್ಯಮಯ ಪಂಚ್‌ಗಳ ಮೂಲಕ ಸುಲಭ ಜಯ ಸಾಧಿಸಿದರು. ಇದರೊಂದಿಗೆ ಕಾಮನ್‌ವೆಲ್ತ್‌‍ ಕ್ರೀಡಾಕೂಟದಲ್ಲಿ ತಮ ವೃತ್ತಿಜೀವನದ ಮೊದಲ ಪದಕವನ್ನು ಖಚಿತಪಡಿಸಿಕೊಂಡರು.

ಪ್ರಿಯಾಗೆ ರೋಚಕ ಜಯ :
ಮಹಿಳೆಯರ 60 ಕೆಜಿ ವಿಭಾಗದಲ್ಲಿ ಏಪ್ರಿಲ್‌ನಲ್ಲಿ ಉಲಾನ್‌ಬಟಾರ್‌ನಲ್ಲಿ ನಡೆದ ಪ್ರಿಯಾ ಘಂಘಾಸ್‌‍ ಅವರು ಸ್ಕಾಟ್ಲೆಂಡ್‌ನ ಆತಿಥೇಯ ಆಟಗಾರ್ತಿ ನಿಯಾಮ್‌ ಮಿಚೆಲ್‌‍ ವಿರುದ್ಧ 4-1 ಅಂತರದ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದರು.ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಪ್ರಿಯಾ, ನಂತರದ ಎರಡು ಸುತ್ತುಗಳಲ್ಲಿ ಆಕ್ರಮಣಕಾರಿ ಆಟ ಹಾಗೂ ನಿಖರ ಪಂಚ್‌ಗಳ ಮೂಲಕ ಪಂದ್ಯವನ್ನು ತಮ್ಮ ಕಡೆ ತಿರುಗಿಸಿಕೊಂಡರು.

ಪುರುಷರ 55 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಜಾದುಮಣಿ ಸಿಂಗ್‌ ಜಾಂಬಿಯಾದ ಮ್ವೆಂಗೊ ಮ್ವಾಲೆ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿ ಐವರು ತೀರ್ಪುಗಾರರೂ ಜಾದುಮಣಿ ಪರವಾಗಿ ತೀರ್ಪು ನೀಡಿದ ಪರಿಣಾಮ ಅವರು 5-0 ಅಂತರದ ಸರ್ವಾನುಮತದ ಗೆಲುವಿನೊಂದಿಗೆ ಸೆಮಿಫೈನಲ್‌ ತಲುಪಿ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದರು.

RELATED ARTICLES

Latest News