ನವದೆಹಲಿ,ಜು.29- ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸೈಬರ್ ಭದ್ರತಾ ಉಲ್ಲಂಘನೆ ಕುರಿತ ವರದಿಗಳು ತಪ್ಪಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಯಾವುದೇ ಸಕ್ರಿಯ ಸೈಬರ್ ದಾಳಿ ನಡೆದಿರುವುದಕ್ಕೆ ಸಾಕ್ಷ್ಯಗಳಿಲ್ಲ ,ಪರಿಶೀಲಿಸದ ಮಾಹಿತಿಯನ್ನು ಆಧರಿಸಿ ಮಾಹಿತಿ ನೀಡಲಾಗಿದೆ ಎಂದೂ ತಿಳಿಸಿದ್ದಾರೆ.
ಕೆಲವು ಸುದ್ದಿಮಾಧ್ಯಮಗಳು, ಡಿಆರ್‌ಡಿಒಗೆ ಸಂಬಂಧಿಸಿದ ದೊಡ್ಡ ಪ್ರಮಾಣದ ಮಾಹಿತಿ ಸೋರಿಕೆಯಾಗಿದ್ದು, ಆ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ದುಷ್ಕರ್ಮಿಗಳು ಯತ್ನಿಸುತ್ತಿದ್ದಾರೆ ಎಂದು ವರದಿ ಮಾಡಿದ್ದವು.ಈ ಸಂಬಂಧ ರಕ್ಷಣಾ ಸಚಿವಾಲಯದ ಸಂಸ್ಥೆಗಳು ಸಮಗ್ರ ತನಿಖೆ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಯಾವುದೇ ಸಕ್ರಿಯ ಸೈಬರ್ ದಾಳಿ, ಅನಧಿಕೃತ ಜಾಲ ಪ್ರವೇಶ ಅಥವಾ ಮಾಹಿತಿ ಕಳವು (ಡೇಟಾ ಎಕ್‌್ಸಫಿಲ್ಟ್ರೇಶನ್) ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿರುವ ಬಹುತೇಕ ಮಾಹಿತಿಯು ಗೌಪ್ಯವಲ್ಲದ ಸ್ವರೂಪದ್ದಾಗಿದ್ದು, ಅದರಲ್ಲಿ ಯಾವುದೇ ರಹಸ್ಯ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಅತ್ಯಂತ ಮಹತ್ವದ ಮಾಹಿತಿ ಎಂದು ಬಿಂಬಿಸಲಾಗುತ್ತಿರುವ ಕೆಲವು ದಾಖಲೆಗಳು 2020ರಿಂದ 2022ರ ಅವಧಿಯ ಹಳೆಯ ಡೇಟಾ ಸೋರಿಕೆಗೆ ಸಂಬಂಧಿಸಿದವು ಎಂದು ತನಿಖೆಯಲ್ಲಿ ತಿಳಿದುಬಂದಿದೆ.ದುಷ್ಕರ್ಮಿಗಳು ಈ ಹಳೆಯ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ತಿರುಚಿ, ಅವು ಇತ್ತೀಚಿನ ಹಾಗೂ ಗೌಪ್ಯ ದಾಖಲೆಗಳಂತೆ ಕಾಣುವಂತೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿರುವ ಎಲ್ಲಾ ದಾಖಲೆಗಳು ಹಳೆಯದಾಗಿದ್ದು, ಹಲವು ಬಾರಿ ಪರಿಷ್ಕರಣೆಗೆ ಒಳಗಾಗಿವೆ. ಹೀಗಾಗಿ, ಅವು ಡಿಆರ್‌ಡಿಒನ ಪ್ರಸ್ತುತ ವ್ಯವಸ್ಥೆ ಅಥವಾ ಕಾರ್ಯವಿಧಾನವನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ತನಿಖೆಯಲ್ಲಿ, ಇದೇ ಮಾಹಿತಿಯನ್ನು ಹಲವು ಸೈಬರ್ ದುಷ್ಕರ್ಮಿಗಳು ಮಾರಾಟಕ್ಕೆ ಇಟ್ಟಿರುವುದು ಕಂಡುಬಂದಿದೆ. ಆದರೆ, ಅವರು ಮಾರಾಟಕ್ಕೆ ಇಟ್ಟಿರುವ ಮಾಹಿತಿಯು ಒಂದೇ ಆಗಿದ್ದು, ಅದು ಈಗ ಇಲಾಖೆ ಅಥವಾ ರಕ್ಷಣಾ ಸಚಿವಾಲಯಕ್ಕೆ ಯಾವುದೇ ಪ್ರಸ್ತುತ ಪ್ರಾಮುಖ್ಯತೆ ಹೊಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಣ ಗಳಿಸುವ ಉದ್ದೇಶದಿಂದ ಆತಂಕ ಸೃಷ್ಟಿಸಿ, ಹೆಚ್ಚಿನ ಮೊತ್ತಕ್ಕೆ ಈ ಮಾಹಿತಿಯನ್ನು ಮಾರಾಟ ಮಾಡಲು ಹಾಗೂ ತಮ್ಮ ಹೇಳಿಕೆ ವಿಶ್ವಾಸಾರ್ಹವೆಂದು ತೋರಿಸಲು ಸೈಬರ್ ದುಷ್ಕರ್ಮಿಗಳು ಈ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
