ಹನೂರು, ಜು. 29- ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ ಭಕ್ತರು ದಾಖಲೆಯ ಕಾಣಿಕೆ ಸಲ್ಲಿಸಿದ್ದು, ಕಳೆದ 41 ದಿನಗಳಲ್ಲಿ ಒಟ್ಟು 3,37,06,956 ಸಂಗ್ರಹವಾಗಿದೆ.
ಇದರೊಂದಿಗೆ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಮತ್ತೊಮೆ ಕೋಟ್ಯಂತರ ರೂ. ಕಾಣಿಕೆ ಪಡೆದ ದೇವಾಲಯಗಳ ಸಾಲಿನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಈ ಅವಧಿಯಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಯಲ್ಲಿ 58 ಗ್ರಾಂ ಚಿನ್ನ, 1 ಕೆಜಿ 250 ಗ್ರಾಂ ಬೆಳ್ಳಿ, 10 ವಿದೇಶಿ ನೋಟುಗಳು ಹಾಗೂ 2 ಸಾವಿರ ಮುಖ ಬೆಲೆಯ ನಾಲ್ಕು ನೋಟುಗಳು ಸಹ ದೊರೆತಿವೆ. ಇದೇ ರೀತಿಯ ಹೆಚ್ಚಿನ ಕಾಣಿಕೆಗಳು ಇತ್ತೀಚಿನ ವರ್ಷಗಳಲ್ಲಿಯೂ ದಾಖಲಾಗಿದ್ದವು.
ಸಾಲೂರು ಬೃಹನಠಾಧ್ಯಕ್ಷ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ. ಪುರುಷೋತ್ತಮ್ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ಹುಂಡಿ ಎಣಿಕೆ ಕಾರ್ಯ ನಡೆಯಿತು. ಮಲೆ ಮಹದೇಶ್ವರ ಬೆಟ್ಟ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡದಲ್ಲಿ ಸಿಸಿ ಕ್ಯಾಮೆರಾ ನಿಗಾವಳಿ ಹಾಗೂ ಪೊಲೀಸ್ ಭದ್ರತೆಯಲ್ಲಿ ಪ್ರಾಧಿಕಾರದ ಸಿಬ್ಬಂದಿ ಮತ್ತು ಬ್ಯಾಂಕ್ ಆಫ್ ಬರೋಡ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಬಾರಿ ಅಮಾವಾಸ್ಯೆ, ಹುಣ್ಣಿಮೆ, ಸರ್ಕಾರಿ ರಜಾ ದಿನಗಳು ಹಾಗೂ ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣದ ಪರಿಣಾಮ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಕಾಣಿಕೆಯ ಮೊತ್ತವೂ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
